*ಹೊಂಬಾಳೆ ಫಿಲಂಸ್ ನಿಂದ ಹೊರಬಂತು ‘ಸಲಾರ್ ಪಾರ್ಟ್ 1 ಸೀಸ್ ಫೈರ್” ಚಿತ್ರದ ಟೀಸರ್*ಹೊಂಬಾಳೆ ಫಿಲಂಸ್ ನಡಿ ವಿಜಯ್ ಕಿರಗಂದೂರು ನಿರ್ಮಿಸಿರುವ, ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವಂತಹ ಪ್ಯಾನ್ ಚಿತ್ರವಾದ ‘ಸಲಾರ್ ಪಾರ್ಟ್ 1: ಸೀಸ್ ಫೈರ್ ಟೀಸರ್ ಇಂದು ಮುಂಜಾನೆ ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.
‘ಬಾಹುಬಲಿ’ ಖ್ಯಾತಿಯ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದಲ್ಲಿ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿರುವ ‘ಸಲಾರ್’ ಚಿತ್ರವು ಆರಂಭದಿಂದಲೂ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇಂದು ಮುಂಜಾನೆ 05:12ಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಭರ್ಜರಿ ಆಕ್ಷನ್ ದೃಶ್ಯಗಳು ಮತ್ತು ಪವರ್ ಫುಲ್ ಸಂಭಾಷಣೆಗಳಿಂದ ಕೂಡಿರುವ ಈ ಟೀಸರ್, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುವುದರ ಜೊತೆಗೆ, ಹೊಸ ದಾಖಲೆಯನ್ನು ಬರೆಯುವ ಎಲ್ಲಾ ಮುನ್ಸೂಚನೆಯನ್ನು ನೀಡಿದೆ.
‘ಕೆಜಿಎಫ್’ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಪ್ರಶಾಂತ್ ನೀಲ್, ಈ ಬಾರಿ ‘ಸಲಾರ್’ ಮೂಲಕ ಇನ್ನೊಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇದುವರೆಗೂ ಕಂಡುಕೇಳರಿಯದ ಪ್ರಮಾಣದಲ್ಲಿ ಈ ಚಿತ್ರವು ನಿರ್ಮಾಣವಾಗುತ್ತಿದ್ದು, ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿ ಬಳಿ 14 ಅದ್ಭುತ ಸೆಟ್ ಗಳನ್ನು ಈ ಚಿತ್ರಕ್ಕಾಗಿ ನಿರ್ಮಿಸಿ, ಅಲ್ಲಿ ಚಿತ್ರೀಕರಣ ಮಾಡಲಾಗಿದೆ.
ಈ ಚಿತ್ರದ ಕುರಿತು ಮಾತನಾಡುವ ನಿರ್ಮಾಪಕ ವಿಜಯ್ ಕಿರಗಂದೂರು, ‘ಈ ಚಿತ್ರ ಪ್ರಾರಂಭವಾದಾಗಲೇ ನಾವು ಇದು ಯಾವುದೋ ಒಂದು ಭಾಷೆಯ ಅಥವಾ ಪ್ಯಾನ್ ಇಂಡಿಯಾ ಸಿನಿಮಾವಲ್ಲ ಎಂದು ಹೇಳಿದ್ದೆವು. ಇದು ಎಲ್ಲ ಕಡೆ ಸಲ್ಲುವ ಭಾರತೀಯ ಚಿತ್ರವಾಗಬೇಕು ಎಂಬುದು ನಮ್ಮ ಆಸೆ. ಅದರಂತೆ ಈ ಚಿತ್ರ ಮೂಡಿಬಂದಿದ್ದು, ಬರೀ ಭಾರತದಲ್ಲಷ್ಟೇ ಅಲ್ಲ, ಹೊರದೇಶಗಳಲ್ಲೂ ಭಾರತೀಯ ಚಿತ್ರವಾಗಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದ ನಿರ್ಮಾಣ ಸಂಸ್ಥೆಯೊಂದು, ಪ್ಯಾನ್ ಇಂಡಿಯಾ ಸ್ಟಾರ್ ಒಬ್ಬರ ಚಿತ್ರವೊಂದನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವುದು ಹೆಮ್ಮೆಯ ವಿಷಯ. ಕನ್ನಡದ ನಿರ್ಮಾಣ ಸಂಸ್ಥೆ, ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರು, ತೆಲುಗಿನ ಸ್ಟಾರ್ ನಟ ಪ್ರಭಾಸ್, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ತಮಿಳಿನ ಶ್ರುತಿ ಹಾಸನ್ ಹೀಗೆ ಎಲ್ಲ ಭಾಷೆಯ ಕಲಾವಿದರು ಮತ್ತು ತಂತ್ರಜ್ಞರು ಇಲ್ಲಿದ್ದಾರೆ. ಎಲ್ಲರನ್ನೂ ಸೇರಿಸಿ ಭಾರತೀಯ ಸಿನಿಮಾ ಮಾಡಿದ್ದೇವೆ. ಇವತ್ತು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರ ಸೆಪ್ಟೆಂಬರ್ 28ಕ್ಕೆ ಜಗತ್ತಿನಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎನ್ನುತ್ತಾರೆ.
ಇನ್ನೂ ಓದಿ *ಜುಲೈ 28ಕ್ಕೆ ಬರಲಿದೆ ವಿಭಿನ್ನ ಕಥೆಯ “ಆಚಾರ್ & ಕೋ”*
ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ‘ಸಲಾರ್’ ಚಿತ್ರವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗಿದೆ. ವಿದೇಶಗಳಲ್ಲೂ ಚಿತ್ರದ ವಿಎಫ್ಎಕ್ಸ್ ಕೆಲಸ ನಡೆದಿದ್ದು, ಆಕ್ಷನ್ ದೃಶ್ಯಗಳಲ್ಲಿ ಬೇರೆ ದೇಶಗಳಿಂದ ಬಂದ ಹಲವು ನುರಿತ ಸಾಹಸ ಕಲಾವಿದರು ಕೆಲಸ ಮಾಡಿರುವುದು ಈ ಚಿತ್ರದ ವಿಶೇಷತೆಗಳಲ್ಲೊಂದು.
ದೊಡ್ಡ ಕ್ಯಾನ್ವಾಸ್ ಅಷ್ಟೇ ಅಲ್ಲ, ದೊಡ್ಡ ತಾರಾಗಣವೂ ಇರುವ ಈ ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಮಿಕ್ಕಂತೆ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ನಟಿಸಿದ್ದಾರೆ. ‘ಕೆಜಿಎಫ್’ ಚಿತ್ರಗಳಿಗೆ ಕೆಲಸ ಮಾಡಿದ ತಾಂತ್ರಿಕ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ರವಿ ಬಸ್ರೂರು ಅವರ ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
‘ಸಲಾರ್ ಪಾರ್ಟ್ 1: ಸೀಸ್ ಫೈರ್ ಚಿತ್ರವು ಸೆಪ್ಟೆಂಬರ್ 28ರಂದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಜಗತ್ತಿನಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.