ಬಹುಭಾಷಾ ನಟಿ ಪೂಜಾ ಹೆಗ್ಡೆ ಮಾತನಾಡುವ ವೇಳೆ ಸಣ್ಣ ಎಡವಟ್ಟು ಮಾಡಿ ಇದೀಗ ಟ್ರೋಲ್ ಆಗುತ್ತಿದ್ದಾರೆ. ತೆಲುಗಿನ ‘ಅಲಾವೈಕುಂಠಪುರಂಲೊ’ ಚಿತ್ರಕ್ಕಾಗಿ ಸೈಮಾ ಸೇರಿದಂತೆ ಕೆಲ ಪ್ರಶಸ್ತಿಗಳು ಕೂಡ ಪೂಜಾ ಹೆಗ್ಡೆ ಸಿಕ್ಕಿತ್ತು. ಆದರೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ‘ಅಲಾವೈಕುಂಠಪುರಂಲೊ’ ತಮಿಳು ಸಿನಿಮಾ ಎಂದು ಹೇಳಿ ಪೂಜಾ ಹೆಗ್ಡೆ ಟ್ರೋಲ್ ಆಗುತ್ತಿದ್ದಾರೆ. ಮಾತನಾಡುವ ಭರದಲ್ಲಿ ಬಾಯ್ತಪ್ಪಿ ಹೀಗೆ ಹೇಳಿದ್ರು ಎನ್ನಲಾಗ್ತಿದೆ. ಆದರೆ ಸಿನಿರಸಿಕರು ಟ್ರೋಲ್ ಮಾಡುತ್ತಿದ್ದಾರೆ.
ತಾನು ನಟಿಸಿರುವ ಸಿನಿಮಾ ಯಾವ ಭಾಷೆಯದ್ದು ಎಂದು ಹೇಳಲು ಗೊತ್ತಾಗಲ್ವಾ? ಎಂದು ಕೆಲವರು ಟೀಕಿಸುತ್ತಿದ್ದಾರೆ. ತೆಲುಗು ಸಿನಿಮಾಗಳು ಹೆಚ್ಚಾ ತಮಿಳು ಸಿನಿಮಾ ಹೆಚ್ಚಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ಚರ್ಚೆ ನಡೆಯುತ್ತದೆ. ಈ ವೇಳೆ ನೆಟ್ಟಿಗರು ಪರಸ್ಪರ ಕೆಸರೆರಚಾಟ ನಡೆಸುತ್ತಿರುತ್ತಾರೆ. ‘ಪೊನ್ನಿಯಿನ್ ಸೆಲ್ವಲ್’ ಸಿನಿಮಾ ಬಿಡುಗಡೆ ವೇಳೆ ಇದು ತಾರಕಕ್ಕೇರಿತ್ತು. ‘ಬಾಹುಬಲಿ’ ಚಿತ್ರವನ್ನು ಮೀರಿಸುವಂತೆ ತಮಿಳಿನಲ್ಲಿ ಸಿನಿಮಾ ಮಾಡೋಕೆ ಆಗಲ್ಲ ಎಂದು ತೆಲುಗು ನೆಟ್ಟಿಗರು ವ್ಯಂಗ್ಯವಾಡಿದ್ದರು. ಇದೆಲ್ಲದರ ನಡುವೆ ಪೂಜಾ ಈಗ ಭಾಷೆಯ ವಿಚಾರದಲ್ಲಿ ಎಡವಟ್ಟು ಮಾಡಿದ್ದಾರೆ.
ದಕ್ಷಿಣ ಭಾರತ ಎಂದರೆ ತಮಿಳು, ಮದ್ರಾಸ್ ಎಂದು ಉತ್ತರ ಭಾರತದವರು ಭಾವಿಸಿದ್ದಾರೆ. ಅದೇ ಕಾರಣಕ್ಕೆ ಪೂಜಾ ಹೆಗ್ಡೆಗೆ ಕೂಡ ‘ಅಲಾವೈಕುಂಠಪುರಂಲೊ’ ತೆಲುಗು ಸಿನಿಮಾ ಎನ್ನುವುದು ಮರೆತು ಹೋಗಿದೆ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ಕೆಲವರಂತೂ ಪೂಜಾ ಹೆಗ್ಡೆ ಕುಡಿದು ಈ ರೀತಿಯೆಲ್ಲಾ ಮಾತನಾಡಿದ್ದಾರಾ? ಆಕೆಗೆ ಏನು ಮಾತನಾಡುತ್ತಿದ್ದೇನೆ ಎನ್ನುವುದು ಗೊತ್ತಿಲ್ವಾ? ಎಂದು ಟ್ರೋಲ್ ಮಾಡುತ್ತಿದ್ದಾರೆ.