ಕನ್ನಡ ಸಂಗೀತ ಲೋಕದ ಮೆಚ್ಚಿನ ಕಂಠಗಳಲ್ಲಿ ಒಬ್ಬರಾದ ಅನನ್ಯ ಭಟ್, ಇದೀಗ ಜೀವನದ ಹೊಸ ಹಂತಕ್ಕೆ ಕಾಲಿಟ್ಟಿದ್ದಾರೆ. ಕೆಜಿಎಫ್, ಕಾಂತಾರ, ಸೋಜುಗದ ಸೂಜಿ ಮಲ್ಲಿಗೆ ಸೇರಿದಂತೆ ಅನೇಕ ಹಿಟ್ ಗೀತೆಗಳಿಗೆ ಸ್ವರ ನೀಡಿದ ಈ ಪ್ರತಿಭಾವಂತ ಗಾಯಕಿ, ನವೆಂಬರ್ 9ರಂದು ತಿರುಪತಿಯಲ್ಲಿ ಸರಳವಾಗಿ ಹಸೆಮಣೆ ಏರಿದ್ದಾರೆ.

ಅನನ್ಯ ಭಟ್ ಅವರ ಜೀವನ ಸಂಗಾತಿ ಖ್ಯಾತ ಇಂಟರ್‌ನ್ಯಾಷನಲ್ ಮ್ಯೂಸಿಷಿಯನ್ ಮತ್ತು ಡ್ರಮ್ಮರ್ ಮಂಜು. ಇಬ್ಬರ ವಿವಾಹ ತಿರುಪತಿಯ ಪವಿತ್ರ ವಾತಾವರಣದಲ್ಲಿ, ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನೆರೆದಿತು. ಈ ಶುಭಕೃತ್ಯವನ್ನು ಖ್ಯಾತ ಜ್ಯೋತಿಷ್ಯ ತಜ್ಞ ಪಂಡಿತ ಡಾ. ಅರುಣ್ ಗುರೂಜಿ ಅವರ ಆಶೀರ್ವಾದದೊಂದಿಗೆ ನೆರವೇರಿಸಲಾಯಿತು.

ಅನನ್ಯ ಭಟ್ ತಮ್ಮ ವಿಶಿಷ್ಟ ಧ್ವನಿಯಿಂದ ಚಲನಚಿತ್ರ, ಭಕ್ತಿ ಮತ್ತು ಜಾನಪದ ಗೀತೆಗಳಲ್ಲಿ ಅಚ್ಚಳಿಯ ಗುರುತು ಬಿಟ್ಟಿದ್ದಾರೆ. ತಮ್ಮದೇ ರೀತಿಯಲ್ಲಿ ಖ್ಯಾತಿ ಪಡೆದಿರುವ ಮಂಜು ಅವರೊಂದಿಗೆ ಅವರ ಸಂಗಮ ಸಂಗೀತ ಲೋಕದಲ್ಲೂ ಕುತೂಹಲ ಮೂಡಿಸಿದೆ.
ವಿವಾಹದ ಸುಂದರ ಕ್ಷಣಗಳ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ಸಂಗೀತ ಪ್ರಿಯರು ಹೊಸದಂಪತಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತಿದ್ದಾರೆ.
