Sandalwood Leading OnlineMedia

ಇಂದು ಪಾರ್ವತಮ್ಮ ರಾಜ್​ಕುಮಾರ್ ಪುಣ್ಯಸ್ಮರಣೆ

ಇಂದು ಪಾರ್ವತಮ್ಮ ರಾಜ್​ಕುಮಾರ್ ಪುಣ್ಯಸ್ಮರಣೆ

ಅದ್ಭುತ ನಿರ್ಮಾಪಕಿಯರ ಸಾಲಿನಲ್ಲಿ ಪಾರ್ವತಮ್ಮ ರಾಜ್​ಕುಮಾರ್ ಅಗ್ರಗಣ್ಯರು. ಹಲವಾರು ಸಿನಿಮಾಗಳ ಜೊತೆ ಅದ್ಭುತ ನಾಯಕಿರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂದು ಅವರ ಪುಣ್ಯತಿಥಿ.

ಅಪ್ಪಾಜಿ ಗೌಡ ಮತ್ತು ಲಕ್ಷ್ಮಮ್ಮ ನವರ ದೊಡ್ಡ ಮಗಳಾಗಿದ್ದ ಪಾರ್ವತಮ್ಮ ಅವರು ಓದಿನಲ್ಲಿ ಬಹಳ ಮುಂದಿದ್ದರು. ಹಾಗಾಗಿ ಅವರು ಸಿನಿಮಾ ವ್ಯವಹಾರಗಳನ್ನು ಉತ್ತಮವಾಗಿ ನಿಭಾಯಿಸಿದ್ಧಾರೆ.

ಕನ್ನಡ ಚಿತ್ರೋದ್ಯಮ ಆಧಾರಸ್ತಂಭವಾಗಿದ್ದ ಅವರು ಹಲವಾರು ಚಿತ್ರಗಳನ್ನು ನಿರ್ಮಿಸುವ ಮೂಲಕ ಯಶಸ್ವಿ ನಿರ್ಮಾಪಕಿಯಾಗಿಯೂ ಹೆಸರಾಗಿದ್ದಾರೆ. ಪಾರ್ವತಮ್ಮ 1939ರಲ್ಲಿ ಮೈಸೂರಿನ ಸಾಲಿಗ್ರಾಮದಲ್ಲಿ ಜನಿಸಿದರು. ರಾಜ್ ಕುಮಾರ್ ಹೇಗೆ ಮೇರು ನಟರೋ ಅದೇ ರೀತಿ ಪಾರ್ವತಮ್ಮ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅನನ್ಯ. ಹಲವಾರು ನಟರು, ಗಾಯಕರು ಹಾಗೂ ತಂತ್ರಜ್ಞರನ್ನು ಪರಿಚಯಿಸಿದ ಖ್ಯಾತಿ ಅವರದು. ಕೇವಲ ಸೆಲೆಬ್ರಿಟಿಯೊಬ್ಬರ ಪತ್ನಿಯಾಗಷ್ಟೇ ಉಳಿಯದೆ ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ 80 ಸಿನಿಮಾಗಳನ್ನು ನಿರ್ಮಿಸಿದರು.

ಕನ್ನಡ ಚಿತ್ರರಂಗದ ಶಕ್ತಿದೇವತೆಯೆಂದೇ ಪರಿಗಣಿಸಲ್ಪಡುತ್ತಿದ್ದ ಡಾ. ಪಾರ್ವತಮ್ಮ ರಾಜಕುಮಾರ್ ಕನ್ನಡದ ಪ್ರಮುಖ ಚಿತ್ರ ನಿರ್ಮಾಪಕಿ ಮತ್ತು ವಿತರಕಿ. ಡಾ.ರಾಜ್‌ಕುಮಾರ್ ಹಿಂದಿನ ಅಭೂತಪೂರ್ವ ಶಕ್ತಿಯಾಗಿ ನೆಲೆನಿಂತ ಇವರು `ಪೂರ್ಣಿಮಾ ಎಂಟರ್ಪ್ರೈಸ್/ ವಜ್ರೇಶ್ವರಿ ಕಂಬೈನ್ಸ್ ಹುಟ್ಟು ಹಾಕಿ, ಹಲವಾರು ಕನ್ನಡ ಚಿತ್ರಗಳನ್ನು ನಿರ್ಮಿಸಿ ಕನ್ನಡಕ್ಕೆ ಅನೇಕ ನಟಿಮಣಿಯರ ಪರಿಚಯ ಮಾಡಿಸಿದ್ದಾರೆ.

ಪಾರ್ವತಮ್ಮನವರು ಚಿತ್ರದ ಯಶಸ್ಸಿಗೆ ದೊಡ್ಡ ಕಲಾವಿದರು ಮಾತ್ರವಲ್ಲದೇ ಚಿತ್ರದ ಕಥೆ ಮತ್ತು ತಂತ್ರಜ್ಞರು ಕೂಡ ಮುಖ್ಯವೆಂದು ಬಲವಾಗಿ ನಂಬುತ್ತಿದ್ದರು. ಉತ್ತಮ ಸಾಹಿತ್ಯವೇ ಚಿತ್ರದ ಆತ್ಮವೆಂದು ನಂಬಿದ್ದ ಪಾರ್ವತಮ್ಮನವರು ತಮ್ಮ ಬ್ಯಾನರ್‌ ಮೂಲಕ ಹಲವಾರು ಲೇಖಕರಿಗೆ ಆಶ್ರಯವಾದರು.

ಇವರ ಬ್ಯಾನರ್‌ನಲ್ಲಿ ಮೂಡಿಬಂದ ಮೊದಲ ಚಿತ್ರ `ತ್ರಿಮೂರ್ತಿ’. ನಂತರ `ಸನಾದಿ ಅಪ್ಪಣ್ಣ’,`ಶಂಕರ ಗುರು’,`ತಾಯಿಗೆ ತಕ್ಕ ಮಗ’ ಹೀಗೆ ಒಂದರ ಹಿಂದೆ ಒಂದರಂತೆ ಹಿಟ್ ಚಿತ್ರಗಳನ್ನು ನಿರ್ಮಿಸಿದವು.ಈ ಎಲ್ಲಾ ಚಿತ್ರಗಳು ಸಮಾಜಮುಖಿಯಾಗಿ ಸದಭಿರುಚಿಯ ಚಿತ್ರಗಳಾಗಿ ಇಂದಿಗೂ ಜನಪ್ರಿಯವಾಗಿವೆ. 1986 ರಲ್ಲಿ ತಮ್ಮ ಹಿರಿಯ ಪುತ್ರ ಶಿವರಾಜಕುಮಾರ್‌ರನ್ನು `ಆನಂದ’ ಚಿತ್ರದ ಮೂಲಕ,1988 ರಲ್ಲಿ ರಾಘವೇಂದ್ರ ರಾಜಕುಮಾರ್‌ನ್ನು `ಚೀರಂಜೀವಿ ಸುಧಾಕರ್’ ಚಿತ್ರದ ಮೂಲಕ, 2002 ರಲ್ಲಿ ಪುನೀತ್‌ರನ್ನು `ಅಪ್ಪು’ ಚಿತ್ರದ ಮೂಲಕ ನಾಯಕನಟರಾಗಿ ಚಿತ್ರರಂಗಕ್ಕೆ ಪರಿಚಯಿಸಿದರು. ತಮ್ಮ ಜೀವಿತಾವಧಿಯಲ್ಲಿ ವಜ್ರೇಶ್ವರಿ ಕಂಬೈನ್ಸ್ ಮೂಲಕ ಸುಮಾರು 78 ಚಿತ್ರಗಳನ್ನು ನಿರ್ಮಿಸಿ ದಾಖಲೆ ಮಾಡಿದ್ದಾರೆ. ನಂತರದ ದಿನಗಳಲ್ಲಿ ಇವರಿಗೆ ಪುತ್ರ ರಾಘವೇಂದ್ರ ಬೆನ್ನುಲುಬಾಗಿ ನಿಂತರು.

ವಜ್ರೇಶ್ವರಿ ಕಂಬೈನ್ಸ್ ಮೂಲಕ ಮಾಲಾಶ್ರೀ, ಅನು ಪ್ರಭಾಕರ್, ಪ್ರೇಮಾ, ಸುಧಾರಾಣಿ, ರಕ್ಷಿತಾ, ರಮ್ಯ ಮುಂತಾದ ನಟಿಯರನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ.

1975ರಲ್ಲಿ ತಲೆ ಎತ್ತಿದ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿತು. ಆಕೆ ನೀಡಿದ ಮೊದಲ ಚಿತ್ರ ಒಂದು ಪ್ರಮುಖ ಪಾತ್ರದಲ್ಲಿ ರಾಜ್‍ಕುಮಾರ್‍ರಿದ್ದ ‘ತ್ರಿಮೂರ್ತಿ’ ಆಗಿತ್ತು; 1975ರಲ್ಲಿ ಈ ಸಂಸ್ಥೆ ನಿರ್ಮಿಸಿದ್ದ ಮೊದಲ ಚಿತ್ರ ತ್ರಿಮೂರ್ತಿ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.

ತಾನು ನಿರ್ಮಿಸಿದ್ದ ಪ್ರಮುಖ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ರಾಜ್‍ಕುಮಾರ್‍‍ರನ್ನು ಒಳಗೊಂಡು ತ್ರಿಮೂರ್ತಿ , ಹಾಲು ಜೇನು, ಕವಿರತ್ನ ಕಾಳಿದಾಸ ಮತ್ತು ಜೀವನ ಚೈತ್ರ ಮುಂತಾದ ಯಶಸ್ವಿ ಚಿತ್ರಗಳನ್ನು ನೀಡಿದರು.

ಕೇವಲ ನಿರ್ಮಾಪಕಿಯಾಗಿ ಮಾತ್ರವಲ್ಲದೇ ಹಂಚಿಕೆದಾರರಾಗಿಯೂ ಪಾರ್ವತಮ್ಮ ಅವರು ಸೇವೆಸಲ್ಲಿಸಿದ್ದಾರೆ. ಚಿತ್ರರಂಗಕ್ಕೆ ಇವರು ನೀಡಿರುವ ಸೇವೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ. ಅಂತೆಯೇ ಜೀವಮಾನ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಕೂಡ ಪಾರ್ವತಮ್ಮ ರಾಜ್ ಕುಮಾರ್ ಭಾಜನರಾಗಿದ್ದರು.

 ಇನ್ನು ಇವತ್ತು ಅಭಿಮಾನಿಗಳು ಹಾಗೂ ಕುಟುಂಬಸ್ಥರು ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಕನ್ನಡ ಕಂಡ ಅದ್ಭುತ ನಿರ್ಮಾಪಕಿಗೆ ಕರುನಾಡ ಜನತೆ ಅನಂತ ನಮನ ಸಲ್ಲಿಸಿದ್ದಾರೆ.

Share this post:

Related Posts

To Subscribe to our News Letter.

Translate »