ಪ್ರೇಮ್ ಕಂಠಸಿರಿಯಲ್ಲಿ “ಪರಿಮಳ ಡಿಸೋಜಾ” ಚಿತ್ರದ ಹಾಡು.
ನಿರ್ದೇಶನದಿಂದ ಜನಮನಸೂರೆಗೊಂಡಿರುವ ಪ್ರೇಮ್ (ಜೋಗಿ) ಅವರು ಗಾಯಕನಾಗೂ ಜನಪ್ರಿಯ. ವಿಲೇಜ್ ರೋಡ್ ಫಿಲಂಸ್ ಲಾಂಛನದಲ್ಲಿ ವಿನೋದ್ ಶೇಷಾದ್ರಿ ನಿರ್ಮಿಸುತ್ತಿರುವ “ಪರಿಮಳ ಡಿಸೋಜಾ” ಚಿತ್ರದ ಹಾಡೊಂದನ್ನು ನಿರ್ದೇಶಕ ಪ್ರೇಮ್ ಹಾಡಿದ್ದಾರೆ. ಕೆ.ಕಲ್ಯಾಣ್ ಗೀತರಚನೆ ಮಾಡಿದ್ದಾರೆ. ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ.
ಡಾ||ಗಿರಿಧರ್ ಹೆಚ್ ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಪ್ರೇಮ್ ಅವರು ಹಾಡಿರುವ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯದಲ್ಲೇ ಆ ಹಾಡಿನ ಚಿತ್ರೀಕರಣ ನಡೆಯಲಿದೆ.
ಹಿಂದು ಸಂಪ್ರದಾಯದ ಶ್ರೀಮಂತ ಕುಟುಂಬವೊಂದು ಸುಖ ಸಂತೋಷದಿಂದ ಜೀವನ ನಡೆಸುತ್ತಿರುತ್ತಾರೆ. ಆ ಮನೆಗೆ ಕ್ರಿಶ್ಚಿಯನ್ ಸಂಪ್ರದಾಯದ ಪರಿಮಳ ಡಿಸೋಜಾ ಸೊಸೆಯಾಗಿ ಬರುತ್ತಾಳೆ. ಜೊತೆಗೆ ಮತ್ತಷ್ಟು ಸಂತೋಷ, ಆನಂದವನ್ನು ಹೊತ್ತು ತರುತ್ತಾಳೆ. ಎರಡುವರ್ಷಗಳ ನಂತರ ಆ ಮನೆಯಲ್ಲಿ ಯಾರು ಊಹಿಸದ ಘಟನೆ ನಡೆಯುತ್ತದೆ. ಆ ಘಟನೆಯಿಂದ ಮನೆಮಂದಿಯಲ್ಲಾ ಸಂಕಷ್ಟಕ್ಕೆ ಸಿಲುಕುತ್ತಾರೆ. ಮುಂದೇನು ನಡೆಯುತ್ತದೆ ಎಂಬುದೇ ಕುತೂಹಲ ಎನ್ನುವ ನಿರ್ದೇಶಕ ಗಿರಿಧರ್, ಇದೊಂದು ಸಸ್ಪೆನ್ಸ್ ಥ್ರಿಲ್ಲರ್, ಆಕ್ಷನ್ , ಸೆಂಟಿಮೆಂಟ್ ಹಾಗೂ ಕಾಮಿಡಿ ಎಲ್ಲವನ್ನು ಒಳಗೊಂಡಿರುವ ಚಿತ್ರ ಎಂದು ತಿಳಿಸುತ್ತಾರೆ.
ಕೋಮಲ ಬನವಾಸೆ , ವಿನೋದ್ ಶೇಷಾದ್ರಿ, ಶ್ರೀನಿವಾಸಪ್ರಭು, ಭವ್ಯ, ಪೂಜಾ ರಾಮಚಂದ್ರ, ಶಿವಕುಮಾರ್ ಆರಾಧ್ಯ, ಶಂಖನಾದ ಅಂಜನಪ್ಪ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ನಾಲ್ಕು ಹಾಡುಗಳಿದ್ದು, ವಿ.ನಾಗೇಂದ್ರಪ್ರಸಾದ್, ಜಯಂತ್ ಕಾಯ್ಕಿಣಿ , ಕೆ.ಕಲ್ಯಾಣ್ ಹಾಗೂ ವಿನೋದ್ ಶೇಷಾದ್ರಿ ಬರೆದಿದ್ದಾರೆ. ಜೋಗಿ ಪ್ರೇಮ್, ರಾಜೇಶ್ ಕೃಷ್ಣನ್, ಅನುರಾಧ ಭಟ್, ನಕುಲ್ ಅಭ್ಯಂಕರ್, ಸುಪ್ರಿಯಾ ರಾಮ್, ಶೃತಿ ವಿ.ಎಸ್ ಹಾಡಿದ್ದಾರೆ. ಕೆ.ರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸಂಜೀವ್ ರೆಡ್ಡಿ ಅವರ ಸಂಕಲನವಿದೆ.