Left Ad
‘ದಿ ತಾಜ್ ಸ್ಟೋರಿ’ - ತಾಜ್ ಮಹಲ್‌ನ ಮೂಲವನ್ನು ಪ್ರಶ್ನಿಸುವ ಸಿನಿಮಾ - Chittara news
# Tags

‘ದಿ ತಾಜ್ ಸ್ಟೋರಿ’ – ತಾಜ್ ಮಹಲ್‌ನ ಮೂಲವನ್ನು ಪ್ರಶ್ನಿಸುವ ಸಿನಿಮಾ

ವಿಶ್ವದ ಏಳನೇ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಪ್ರೀತಿಯ ಸಂಕೇತವಾಗಿ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಇದೀಗ ಅದೇ ತಾಜ್ ಮಹಲ್‌ನ ಮೂಲವನ್ನೇ ಪ್ರಶ್ನಿಸುವ ಹೊಸ ಚಿತ್ರವೊಂದು ಮೂಡಿ ಬಂದಿದೆ. ‘ದಿ ತಾಜ್ ಸ್ಟೋರಿ’ ಎಂಬ ಈ ಚಿತ್ರದ ಟ್ರೈಲರ್ ಅಕ್ಟೋಬರ್ 16ರಂದು ಬಿಡುಗಡೆಗೊಂಡಿದೆ.

ತುಷಾರ್ ಅಮರೀಶ್ ಘೋಯಲ್ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟ ಪರೇಶ್ ರಾವಲ್ ಮುಖ್ಯ ಪಾತ್ರದಲ್ಲಿದ್ದಾರೆ. ಅವರು ಚಿತ್ರದಲ್ಲಿ ತಾಜ್ ಮಹಲ್‌ಗೆ ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಟೂರಿಸ್ಟ್ ಗೈಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರದ ಮೂಲಕ ತಾಜ್ ಮಹಲ್‌ ಅನ್ನು ಷಹಜಾನ್ ಕಟ್ಟಿಸಲಿಲ್ಲ, ಅದು ಮೂಲತಃ ಶಿವ ಮಂದಿರ ಎಂಬ ನಂಬಿಕೆಯನ್ನು ಅವರು ಮುಂದಿರಿಸುತ್ತಾರೆ.

ಚಿತ್ರದ ಕಥೆ ತಾಜ್ ಮಹಲ್‌ನ ಮೂಲದ ಕುರಿತು ನಡೆಯುವ ನ್ಯಾಯಾಲಯದ ಹೋರಾಟದ ಸುತ್ತ ಸಾಗಿ ಹೋಗುತ್ತದೆ. ಪರೇಶ್ ರಾವಲ್ ಅಭಿನಯದ ಪಾತ್ರವು ತಾಜ್ ಮಹಲ್‌ ಕುರಿತು ಸಾಕ್ಷ್ಯಾಧಾರಗಳನ್ನಿರಿಸಿಕೊಂಡು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಾನೆ. ಅಂತಿಮವಾಗಿ ನ್ಯಾಯಾಲಯದ ತೀರ್ಪು ಏನಾಗುತ್ತದೆ ಎಂಬ ಕುತೂಹಲವೇ ಚಿತ್ರಕ್ಕೆ ಜೀವ ತುಂಬುತ್ತದೆ.

‘ದಿ ತಾಜ್ ಸ್ಟೋರಿ’ ಸಿನಿಮಾದ ನಿರ್ಮಾಪಕ ಸಿ. ಎ. ಸುರೇಶ್ ಝಾ, ನಿರ್ದೇಶಕ ತುಷಾರ್ ಅಮರೀಶ್ ಘೋಯಲ್. ಪರೇಶ್ ರಾವಲ್ ಜೊತೆಗೆ ಝಾಕಿರ್ ಹುಸೇನ್, ಅಮೃತಾ ಖಾನ್ವಿಲ್ಕರ್ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಅಕ್ಟೋಬರ್ 31 ರಂದು ಬಿಡುಗಡೆ ಆಗಲಿದ್ದು, ಕೆಲವು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ದೊರೆಯುವ ಸಾಧ್ಯತೆ ಇದೆ.

‘ದಿ ತಾಜ್ ಸ್ಟೋರಿ’ ಹಿಂದಿ ಚಿತ್ರರಂಗದಲ್ಲಿ ಸಂಚಲನ ಮೂಡಿಸುವ ಸಾಧ್ಯತೆ ಇದ್ದು, ತಾಜ್ ಮಹಲ್ ಕುರಿತ ವಿವಾದಿತ ಚರ್ಚೆಗಳಿಗೆ ಮತ್ತೊಮ್ಮೆ ವೇದಿಕೆ ಒದಗಿಸುವಂತಾಗಿದೆ.

Spread the love
Translate »
Right Ad