ಈ ಹಿಂದೆ “ದರ್ಪಣ”, ” ಪರಿಶುದ್ಧಂ”, “ಆಗೋದೆಲ್ಲಾ ಒಳ್ಳೆದ್ದಕ್ಕೆ” ಚಿತ್ರಗಳನ್ನು ನಿರ್ದೇಶಿಸಿದ್ದ ಆರನ್ ಕಾರ್ತಿಕ್ ವೆಂಕಟೇಶ್ ನಿರ್ದೇಶನದ “ಪಂಚೇಂದ್ರಿಯಂ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ವಿದ್ಯಾರಣ್ಯಪುರ ಶೂಟಿಂಗ್ ಹೌಸ್ ನಲ್ಲಿ ನಡೆಯಿತು. ಚಿತ್ರದಮೊದಲ ಸನ್ನಿವೇಶಕ್ಕೆ ಡಾ||ವಿ.ನಾಗೇಂದ್ರಪ್ರಸಾದ್ ಆರಂಭ ಫಲಕ ತೋರಿದರು. ನಿರ್ದೇಶಕ ನರೇಂದ್ರ ಬಾಬು ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರರಂಗದ ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮುಹೂರ್ತದ ದಿನದಿಂದಲೇ ಚಿತ್ರೀಕರಣ ಆರಂಭವಾಗಿದ್ದು, ನಾಯಕ ವಿನಯ್ ಸೂರ್ಯ, ವಿದ್ಯಾಶ್ರೀ, ರಾಘವಿ, ಅಫ್ಜಲ್, ಯತಿರಾಜ್, ವಿಕ್ಟರಿ ವಾಸು, ಸಂಗೀತ, ಕುರಿಬಾಂಡ್ ರಂಗ ಮುಂತಾದವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ನಿರ್ಮಾಪಕರು H. ಸೋಮಶೇಖರ್ . ಆರನ್ ಕಾರ್ತಿಕ್ ವೆಂಕಟೇಶ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಸಂಗೀತ ನೀಡಿ, ನಿರ್ದೇಶನವನ್ನು ಮಾಡುತ್ತಿದ್ದಾರೆ. ಸಂಗಮೇಶ್ ಛಾಯಾಗ್ರಹಣ, ಪ್ರವೀಣ್ ಸಂಕಲನ ಈ ಚಿತ್ರಕ್ಕಿದೆ. ಜೊತೆಗೆ ಅಫ್ಜಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.