Sandalwood Leading OnlineMedia

ಆಗಸ್ಟ್ ನಲ್ಲಿ ತೆರೆಗೆ ಬರಲು ಸಿದ್ಧವಾದ ಪಂಪ

ಕನ್ನಡ ಸಾಹಿತ್ಯ ಮತ್ತು ಚರಿತ್ರೆಯಲ್ಲಿ ಆದಿಕವಿ “ಪಂಪ’ ಎಂಬ ಹೆಸರನ್ನು ಎಲ್ಲರೂ ಕೇಳಿರುತ್ತೀರಿ. ಈಗ ಇದೇ “ಪಂಪ’ ಎಂಬ ಹೆಸರಿನಲ್ಲೇ ಕನ್ನಡದಲ್ಲಿ ಸಿನಿಮಾವೊಂದು ತೆರೆಗೆ ಬರುತ್ತಿದೆ. ಅಂದಹಾಗೆ, ಈ ಸಿನಿಮಾದ ಹೆಸರು “ಪಂಪ’ ಅಂತಿದ್ದರೂ, ಆದಿಕವಿ ಪಂಪನಿಗೂ ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಸಿನಿಮಾದ ಕಥೆಯಲ್ಲಿ ಕನ್ನಡಕ್ಕೆ ಸಂಬಂಧಿಸಿದ ವಿಷಯಗಳಿರುವುದರಿಂದ ಮತ್ತು ಸಿನಿಮಾದ ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ, ತಮ್ಮ ಸಿನಿಮಾಕ್ಕೆ “ಪಂಪ’ ಅಂಥ ಟೈಟಲ್‌ ಇಟ್ಟುಕೊಂಡಿದೆ.

ಕನ್ನಡಾಭಿಮಾನವನ್ನೇ ವ್ಯಕ್ತಿತ್ವವನ್ನಾಗಿಸಿಕೊಂಡ, ಆದಿ ಕವಿ ಪಂಪನ ಮತ್ತೊಂದು ಅವತಾರದಂಥಾ ಕಥಾನಾಯಕ. ಪಂಚಳ್ಳಿ ಪರಶಿವಮೂರ್ತಿ ಎನ್ನುವುದು ಹೆಸರಾದರೂ ಸಣ್ಣದಾಗಿ ಪಂಪ ಅಂತಲೇ ಫೇಮಸ್ಸಾಗಿರುತ್ತಾರೆ. ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕ.ಕನ್ನಡ ಭಾಷೆ, ನೆಲ-ಜಲಗಳ ಬಗೆಗೆ ಪ್ರಾಮಾಣಿಕ ಕಾಳಜಿ ಇರಿಸಿಕೊಂಡವರು. ಕಥೆ, ಕಾದಂಬರಿ, ಕಾವ್ಯಗಳನ್ನು ರಚಿಸುತ್ತಾ ವಿವಿಧ ವಯೋಮಾನದ ಓದುಗರ ಎದೆಯಲ್ಲಿ ಜಾಗ ಗಿಟ್ಟಿಸಿಕೊಂಡವರು.

    

ಶತೃಗಳೇ ಇಲ್ಲದಂತೆ ಬದುಕುತ್ತಿದ್ದ ಪಂಪ ಅವರ ಮೇಲೆ ಅದೊಂದು ದಿನ ಅನಾಮಿಕನೊಬ್ಬನಿಂದ ಹತ್ಯಾ ಯತ್ನವಾಗುತ್ತದೆ. ಪ್ರೊಫೆಸರ್ ಪಂಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲೇ ಪಂಪ ಅವರ ಕೊಲೆಯೂ ಘಟಿಸಿಬಿಡುತ್ತದೆ.

ಯಾರ ಮನಸ್ಸನ್ನೂ ನೋಯಿಸದ, ಯಾರಿಂದಲೂ ದ್ವೇಷಕ್ಕೆ ಒಳಗಾಗದ ಪಂಪರ ಮೇಲೆ ಕೊಲೆ ಮಾಡುವಂತಾ ಸಿಟ್ಟು ಯಾರಿಗಿತ್ತು? ಇವರ ಹತ್ಯೆಯ ಹಿಂದೆ ಯಾವೆಲ್ಲಾ ಹಿತಾಸಕ್ತಿಗಳು ಗುಪ್ತಗಾಮಿನಿಯಂತೆ ಕಾರ್ಯ ನಿರ್ವಹಿಸಿದ್ದವು? ಪರಿಶುದ್ಧ ವ್ಯಕ್ತಿತ್ವದ ಕನ್ನಡಾಭಿಮಾನಿ ಪ್ರೊಫೆಸರ್ ಪಂಪರ ಸುತ್ತ ಏನೆಲ್ಲಾ ಆರೋಪಗಳು ಹುಟ್ಟಿಕೊಳ್ಳುತ್ತವೆ? ಇದರ ಹಿಂದಿನ ರಾಜಕಾರಣವೇನು? ಇವರ ಕೊಲೆಯಿಂದ ಸರ್ಕಾರ ಅಲುಗಾಡುತ್ತದಾ? ಇಂಥಾ ಹತ್ತಾರು ಪ್ರಶ್ನೆಗಳು ಪಂಪನ ಸುತ್ತ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತದೆ.

ಇದರ ಜೊತೆಗೆ, ಹದಿಹರೆಯದ ಪ್ರೀತಿ-ಪ್ರೇಮ, ಅಪರ ವಯಸ್ಕನೆಡೆಗಿನ ಆರಾಧನಾಭಾವ, ಭಾಷೆಯ ಮೇಲಿನ ಅಭಿಮಾನ ಮತ್ತು ದುರಭಿಮಾನ, ಹೋರಾಟ, ಸಮಯಸಾಧಕ ಮತ್ತು ಸ್ವ ಹಿತಾಸಕ್ತ ರಾಜಕಾರಣ – ಈ ಎಲ್ಲವನ್ನೂ ಹಿತಮಿತವಾಗಿ ಒಳಗೊಂಡಿರುವ ಪಕ್ಕಾ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಜಾನರಿನ ಚಿತ್ರ ಪಂಪ!

ಮಹೇಂದರ್ ಅವರ ಈವರೆಗಿನ ಚಿತ್ರಗಳು ಒಂದು ತೂಕವಾದರೆ ಪಂಪ ಬೇರೆಯದ್ದೇ ಬಗೆಯ ಸಿನಿಮಾವಾಗಿದೆ. ʻʻನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟು ಸಿನಿಮಾಗಳನ್ನು ನೀಡಿದ್ದೇನೆ. ಆದರೆ ಕನ್ನಡ ಮತ್ತು ಕನ್ನಡಿಗನ ಕುರಿತಾದ ಪಂಪ ಸಿನಿಮಾ ನನ್ನ ಪಾಲಿಗೆ ದೊರೆತಿದ್ದೇ ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ.

ಅದ್ಭುತವಾದ ಕತೆ ಮತ್ತು ಕನ್ನಡ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ನೋಡಲೇಬೇಕಾದ ಕಂಟೆಂಟ್ ಈ ಚಿತ್ರದಲ್ಲಿ ಅಡಕವಾಗಿದೆ. ಪಂಪನನ್ನು ನಿರ್ದೇಶಿಸಿರುವುದಕ್ಕೆ ನನಗೆ ಅಪಾರ ಹೆಮ್ಮೆಯಿದೆʼʼ ಎನ್ನುತ್ತಾರೆ ಸ್ವತಃ ನಿರ್ದೇಶಕ ಎಸ್ ಮಹೇಂದರ್.

 “ಕೀ (ಕೆ.ಇ.ಇ) ಕ್ರಿಯೇಷನ್ಸ್‌’ ಬ್ಯಾನರಿನಲ್ಲಿ ವಿ. ಲಕ್ಷ್ಮೀಕಾಂತ್‌ (ಕಾಲವಿ) ನಿರ್ಮಾಣದಲ್ಲಿ ಮೂಡಿಬಂದಿರುವ “ಪಂಪ’ ಸಿನಿಮಾಕ್ಕೆ ಹಿರಿಯ ನಿರ್ದೇಶಕ ಎಸ್‌. ಮಹೇಂದರ್‌ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಹಂಸಲೇಖ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ. ಸದ್ಯ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ “ಪಂಪ’ ಬಿಡುಗಡೆಯ ಹೊಸ್ತಿಲಿನಲ್ಲಿ ಬಂದು ನಿಂತಿದೆ.

ಪ್ರೊಫೆಸರ್ ಪಂಪನ ಪಾತ್ರದಲ್ಲಿ ಹಿರಿಯ ರಂಗಭೂಮಿ ಕಲಾವಿದ ಕೀರ್ತಿ ಭಾನು ನಟಿಸಿದ್ದಾರೆ. ಸಂಗೀತಾ, ರಾಘವ್ ನಾಯಕ್, ಅರವಿಂದ್, ಆದಿತ್ಯ ಶೆಟ್ಟಿ, ಭಾವನಾ ಭಟ್, ರೇಣುಕಾ, ರವಿ ಭಟ್, ಶ್ರೀನಿವಾಸಪ್ರಭು, ಪೃಥ್ವಿರಾಜ್ ಮತ್ತು ಚಿಕ್ಕಹೆಜ್ಜಾಜಿ ಮಹದೇವ್ ಮುಂತಾದವರು ಇತರೆ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸದ್ಯ ನಿಧಾನವಾಗಿ “ಪಂಪ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಆಗಸ್ಟ್‌ ವೇಳೆಗೆ “ಪಂಪ’ನನ್ನು ಥಿಯೇಟರ್‌ಗೆ ತರುವ ಯೋಚನೆಯಲ್ಲಿದೆ

 

Share this post:

Translate »