ಚೆಕ್ ಬೌನ್ಸ್ ಪ್ರಕರಣದಲ್ಲಿ ನಟಿ ಪದ್ಮಜಾ ರಾವ್ ಅವರಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಮೂರು ತಿಂಗಳ ಜೈಲು ವಾಸ ಹಾಗೂ 40 ಲಕ್ಷ ದಂಡ ವಿಧಿಸಿದೆ. ನಟಿ ಪದ್ಮಜಾ ರಾವ್ ನೀಡಿದ್ದ ಚೆಕ್ ಬೌನ್ಸ್ ಆಗಿದ್ದ ಕಾರಣ, ನಟಿ ವಿರುದ್ಧ ವೀರೇಂದ್ರ ಶೆಟ್ಟಿ ದೂರು ನೀಡಿದ್ದರು. ಇದೀಗ ಕೋರ್ಟ್ ಶಿಕ್ಷೆ ಪ್ರಕಟಿಸಿದೆ
2020ರಲ್ಲಿ ಪದ್ಮಜಾ ರಾವ್ 40 ಲಕ್ಷ ಕೈ ಸಾಲ ಪಡೆದುಕೊಂಡಿದ್ದರು. ಅದಕ್ಕೆ ಭದ್ರತೆಯಾಗಿ ತಮ್ಮ ಖಾತೆಗೆ ಸಂಬಂಧಿಸಿದ ಚೆಕ್ ಅನ್ನು ನೀಡಿದ್ದರು. ವೀರೂ ಟಾಕೀಸ್ ಸಂಸ್ಥೆಯ ಮಾಲೀಕ ವಿರೇಂದ್ರ ಶೆಟ್ಟಿಗೆ ಈ ಚೆಕ್ ನೀಡಿದ್ದರು. ಚೆಕ್ ಬ್ಯಾಂಕಿಗೆ ಹಾಕಿದಾಗ ಬೌನ್ಸ್ ಆಗಿತ್ತು. ಪ್ರಕರಣದ ವಿರುದ್ಧ ವೀರೇಂದ್ರ ಶೆಟ್ಟಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ಮಂಗಳೂರು ಐದನೇ ಜೆಎಂಎಫ್ ನ್ಯಾಯಾಲಯ ಪದ್ಮಜಾ ರಾವ್ ಅವರಿಗೆ ನೋಟೀಸ್ ನೀಡಿತ್ತು. ಮೂರು ಬಾರಿ ನೋಟೀಸ್ ನೀಡಿದರು ಪದ್ಮಜಾ ರಾವ್ ಅವರು ನೋಟೀಸ್ ಗೆ ಯಾವುದೇ ರೀತಿಯ ಉತ್ತರ ನೀಡಿರಲಿಲ್ಲ. 2021ರಲ್ಲಿಯೇ ನ್ಯಾಯಾಲಯ ಪದ್ಮಜಾ ರಾವ್ ಅವರ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿತ್ತು. ಬಳಿಕ ಕೋರ್ಟ್ ಗೆ ಹಾಜರಾಗಿ ಜಾಮೀನನ್ನು ಪಡೆದಿದ್ದರು. ಅದೇ ಸಮಯದಲ್ಲಿ ಪದ್ಮಜಾ ರಾವ್ ಅವರ ಪರ ವಕೀಲರು, ಈ ಚೆಕ್ ಕಳವು ಮಾಡಿ, ಸಹಿಯನ್ನು ಫೋರ್ಜರಿ ಮಾಡಿದ್ದಾರೆ ಎಂದಿದ್ದರು. ಆದರೆ ಅದಕ್ಕೆ ಪೂರಕವಾದ ಸಾಕ್ಷಿಗಳನ್ನು ಒದಗಿಸಲು ವಿಫಲರಾದರು.
ಈ ಸಂಬಂಧ ಇದೀಗ ಪದ್ಮಜಾ ರಾವ್ ಅವರಿಗೆ 40 ಲಕ್ಷದ 20 ಸಾವಿರ ದಂಡ ವಿಧಿಸಿರುವ ಕೋರ್ಟ್ 40 ಲಕ್ಷದ 17 ಸಾವಿರ ದೂರುದಾರರಿಗೆ ಇನ್ನುಳಿದ 3 ಸಾವಿರ ಸರ್ಕಾರಕ್ಕೆ ಪಾವತಿಸಬೇಕೆಂದು ತಿಳಿಸಿದೆ. ಜೊತೆಗೆ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ಹಿಂದೆ `ಸವರ್ಣ ದೀರ್ಘ ಸಂಧಿ’ ಕನ್ನಡ ಸಿನಿಮಾ ನಿರ್ದೇಶಸಿದ್ದ ರವೀಂದ್ರ ಶೆಟ್ಟಿ, ತುಳು ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.