“ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರ್ನಾ ಬಾರಸ್ತಿ..” ಎಂಬ ಉತ್ತರ ಕರ್ನಾಟಕ ಶೈಲಿಯ “ಪಕ್ಕಾ ಜವಾರಿ” ಹಾಡೊಂದು ಸಖತ್ ಸೌಂಡು ಮಾಡುತ್ತಿದೆ. ಹೌದು ಹಿರಿಯ ನಟ “ವೈಜನಾಥ ಬಿರಾದಾರ್” ತನ್ನ ಎಪ್ಪತ್ತರ ವಯಸ್ಸಲ್ಲಿ ಕಮರ್ಷಿಯಲ್ ಹೀರೋ ಆಗಿ ಬಡ್ತಿ ಪಡೆದ ಸಿನಿಮಾ “90 ಬಿಡಿ ಮನೀಗ್ ನಡಿ”. ಈ ಸಿನಿಮಾದ “ಸಿಂಗಲ್ ಕಣ್ಣಾ” ಎಂಬ ಹಾಡನ್ನು “ಮಾಧ್ಯಮ ಮಿತ್ರರ”ನ್ನೇ ಅತಿಥಿಗಳನ್ನಾಗಿಸಿ ಬಿಡುಗಡೆ ಮಾಡಲಾಗಿತ್ತು.

ಇದೀಗ ಹಾಡು “ಹತ್ತು ಲಕ್ಷ” ವೀಕ್ಷಣೆ ಕಂಡು ವೈರಲ್ ಆಗಿದೆ. ತನ್ನ “ಎಪ್ಪತ್ತರ ಇಳಿ ವಯಸ್ಸಲ್ಲಿ ಇಪ್ಪತ್ತರ ಯುವಕನಂತೆ ಸ್ಟೆಪ್” ಹಾಕಿದ ಬಿರಾದಾರರ ಎನರ್ಜಿ ಕಂಡು “ಕನ್ನಡಿಗರು ಫುಲ್ ಫಿದಾ” ಆಗಿ ಹಾಡಿಗೆ ಜೈ ಅಂದಿದ್ದಾರೆ.

ಅಲ್ಲಿಗೆ ಉತ್ತರ ಕರ್ನಾಟಕ ಶೈಲಿಯ ಹಾಡಿಗೆ ಇಡಿಯ ಕರ್ನಾಟಕ ಜೈ ಎಂದಿದೆ ಎನ್ನಬಹುದು. A2 ಮ್ಯೂಸಿಕ್ ಯೂಟ್ಯೂಬ್ನಲ್ಲಿ ಹಾಡು ಸದ್ದು ಮಾಡುತ್ತಿದ್ದು, ಹಿಟ್ಟಾದ ಖುಷಿಯಲ್ಲಿ ಚಿತ್ರತಂಡ “ಸಲಾಮ್ ಕರ್ನಾಟಕ” ಎನ್ನುತ್ತಿದೆ. ಅಮ್ಮ ಟಾಕೀಸ್ ಬಾಗಲಕೋಟ ಸಂಸ್ಥೆಯ ರತ್ನಮಾಲಾ ಬಾದರದಿನ್ನಿ ಹಣ ಹೂಡಿಕೆಯಲ್ಲಿನ ಈ ಚಿತ್ರಕ್ಕೆ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಎಂಬಿಬ್ಬರು ಜಂಟಿ ನಿರ್ದೇಶಕರು. ಶಿವು ಭೇರ್ಗಿ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿರುವ ಈ ಜವಾರಿ ಹಾಡಿಗೆ ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಕೃಷ್ಣ ನಾಯ್ಕರ್ ಛಾಯಾಗ್ರಹಣ ಮತ್ತು ಯುಡಿವಿ ವೆಂಕಿ ಸಂಕಲನದಲ್ಲಿ ಹಾಡು ಸೊಗಸಾಗಿ ಮೂಡಿ ಬಂದಿದ್ದು, ಹಾಡಿನಲ್ಲಿ ಬಿರಾದಾರ್ ಜೊತೆ ನೀತಾ ಮೈಂರ್ಗಿ ಎಂಬ ರಂಗಭೂಮಿ ಕಲಾವಿದೆ ಮೈ ಬಳುಕಿಸಿ ಸೈ ಎನಿಸಿಕೊಂಡಿದ್ದಾರೆ. ಹಾಡು ಹಿಟ್ ಆದ ಖುಷಿಯಲ್ಲಿರುವ ನೈಂಟಿ ತಂಡ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದೆ. ಕಾಲ ಕೂಡಿ ಬಂದರೆ ಇದೇ ತಿಂಗಳಲ್ಲಿ ಪ್ರೇಕ್ಷಕರಿಗೆ “ನೈಂಟಿ” ಸಿಗಲಿದೆ.
