ಸೈಫ್ ಅಲಿಖಾನ್ ಮನೆಗೆ ಒಳನುಗ್ಗಿದ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಈ ಘಟನೆಯಿಂದ ಬಾಲಿವುಡ್ ಸೆಲೆಬ್ರಿಟಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿಯೊಬ್ಬರೂ ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಾ ಇದ್ದಾರೆ. ಬಿಗಿ ಭದ್ರತೆಯ ನಡುವೆಯೂ ಸೆಲೆಬ್ರಿಟಿಗಳ ಮನೆಗೆ ಅಪರಿಚಿತರು ನುಗ್ಗಿ ದಾಳಿ ನಡೆಸುತ್ತಿರುವುದು ಸಿನಿಮಾ ತಾರೆಯರನ್ನು ಆತಂಕಕ್ಕೆ ದೂಡಿದೆ. ಆದರೆ ಹೀಗಾಗುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಶಾರುಖ್ ಖಾನ್ ಅವರ ಮನ್ನತ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿ ಈಜುಕೊಳದಲ್ಲಿ ಮೋಜಿನ ಸ್ನಾನ ಮಾಡಿದ್ದ. ಈ ಬಗ್ಗೆ ಶಾರುಖ್ ಈ ಮೊದಲು ಹೇಳಿದ್ದರು.
ಈ ಹಿಂದೆ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದ ಬಾಲಿವುಡ್ ಬಾದ್ ಷಾ ಈ ಮಾಹಿತಿ ಹಂಚಿಕೊಂಡಿದ್ದರು. ‘ಒಮ್ಮೆ ಅಭಿಮಾನಿಯೊಬ್ಬ ತಮ್ಮ ಮನೆಯಲ್ಲಿ ಪಾರ್ಟಿಯ ವೇಳೆ ಮನ್ನತ್‌ಗೆ ಪ್ರವೇಶಿಸಿದ್ದ’ ಎಂದು ಕಿಂಗ್ ಖಾನ್ ಹೇಳಿದ್ದಾರೆ. ‘ಒಮ್ಮೆ ನನ್ನ ಮನೆಯಲ್ಲಿ ಹುಟ್ಟುಹಬ್ಬದ ಪಾರ್ಟಿ ಇತ್ತು. ಈ ವೇಳೆ ಹಲವು ಪತ್ರಕರ್ತರು ಕೂಡ ಉಪಸ್ಥಿತರಿದ್ದರು. ಬಿಗಿ ಭದ್ರತೆಯ ನಡುವೆಯೂ ಅಭಿಮಾನಿಯೊಬ್ಬ ನನ್ನ ಮನೆಗೆ ನುಗ್ಗಿದ್ದಾನೆ. ಅವರು ಮೋಜಿಗಾಗಿ ನಮ್ಮ ಈಜುಕೊಳದಲ್ಲಿ ಸ್ನಾನ ಮಾಡಿದ’ ಎಂದಿದ್ದರು ಶಾರುಖ್.
‘ಅಚ್ಚರಿಯ ಸಂಗತಿ ಎಂದರೆ ಸ್ನಾನಕ್ಕೆ ಬೇಕಾದ ಎಲ್ಲಾ ಸಲಕರಣೆಗಳ ಜೊತೆಗೆ ಅಭಿಮಾನಿ ತನ್ನ ಟವೆಲ್ ಅನ್ನು ತಂದಿದ್ದ. ಸ್ನಾನ ಮುಗಿಸಿ ಬಟ್ಟೆ ಧರಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ತಡೆದರು. ಆದರೆ ಅವರು ನನ್ನನ್ನು ಭೇಟಿಯಾಗಲು ಬಂದಿಲ್ಲ, ಯಾವುದೇ ಕಳ್ಳತನ ಮಾಡಲು ಬಂದಿಲ್ಲ. ನಾನು ಸ್ನಾನ ಮಾಡುತ್ತಿದ್ದ ಈಜುಕೊಳದಲ್ಲಿ ಅವನು ಸ್ನಾನ ಮಾಡಲು ಬಯಸಿದ್ದ. ಕೆಲಸ ಮುಗಿದ ಕೂಡಲೇ ಸ್ಥಳದಿಂದ ತೆರಳಿದ’ ಎಂದಿದ್ದರು ಶಾರುಖ್. ಶಾರುಖ್ ಖಾನ್ಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಅವರನ್ನು ಹುರಿದುಂಬಿಸಲು ಅಭಿಮಾನಿಗಳು ಮನ್ನತ್ ಹೊರಗೆ ಸೇರುತ್ತಾರೆ. ಪ್ರತಿ ಹುಟ್ಟುಹಬ್ಬದಂದು ಅವರು ತಮ್ಮ ಅಭಿಮಾನಿಗಳನ್ನು ಭೇಟಿಯಾಗುತ್ತಾರೆ.