ಕನಸುಗಳೇ ಹಾಗೇ ದಾರಿ ಕಷ್ಟವಾದರೂ ಆ ದಾರಿಯಲ್ಲಿ ನಡೆದೇ ತೀರಬೇಕೆನಿಸುವಷ್ಟು ಹುಮ್ಮಸ್ಸನ್ನು ಹುಟ್ಟು ಹಾಕುತ್ತವೆ. ಚಿಕ್ಕವಯಸ್ಸಿನಲ್ಲಿ ಹುಟ್ಟಿಕೊಂಡ ಮನಸ್ಸಿನಾಳದ ಪ್ಯಾಷನ್ ಪರಿಚಯವೇ ಇಲ್ಲದ ನಾಡಿಗಾದರೂ ತಂದು ಬಿಟ್ಟು ಬಿಡುತ್ತದೆ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಲಕ್ಕಿ ರಾಮ್. ಈತ ಗಾಂಧಿನಗರಕ್ಕೆ ಹೀರೋ ಆಗಬೇಕೆಂಬ ಕನಸು ಹೊತ್ತು ಬಂದಿದ್ದು. ಊರು ಉತ್ತರ ಕರ್ನಾಟಕದ ಒಂದು ಹಳ್ಳಿ. ಚಿಕ್ಕ ವಯಸ್ಸಿನಿಂದಾನೂ ಡ್ಯಾನ್ಸ್ ಅಂದ್ರೆ ವಿಪರೀತ ಮೋಹ. ಆ ಮೋಹಕ್ಕೆ ಬಿದ್ದವ ಗಣೇಶ ಫೆಸ್ಟಿವಲ್ ಆಗಲೀ, ಹಬ್ಬ ಹರಿದಿನಗಳಾಗಲೀ ಸಿಕ್ಕಿದ ಕಡೆ ಸ್ಟೆಪ್ ಹಾಕುವಂತೆ ಮಾಡುತ್ತಿತ್ತು. ಮಗನ ಆಸೆ ಅರಿತಿದ್ದ ತಾಯಿ, ಇದರಲ್ಲಿಯೇ ಏನಾದರೊಂದು ಸಾಧನೆ ಮಾಡು ಎಂದಿದ್ದರು. ಆದರೆ ಮಗನ ಸಾಧನೆಗೆ ಬೆನ್ನೆಲುಬಾಗಿ ನಿಲ್ಲಬೇಕಾದ, ಮಗನ ಯಶಸ್ಸನ್ನು ಕಾಣಬೇಕಾದ ತಾಯಿ ಅರ್ಧಕ್ಕೆ ಹೋಗಿದ್ದು ಮಾತ್ರ ದುರಂತ.
ತಾಯಿಯ ಸಾವಿನ ನೋವಿನ ಜೊತೆಗೆ ಜೇಬಲ್ಲಿ 100 ರೂಪಾಯಿ ಇಟ್ಟುಕೊಂಡು ಬೆಂಗಳೂರಿಗೆ ಟ್ರೈನ್ ಹತ್ತಿದವ ಲಕ್ಕಿ ರಾಮ್. ಅದಾಗಲೇ ಕನ್ನಡ ಇಂಡಸ್ಟ್ರೀಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸಂಬಂಧಿಯ ಸಹಾಯ ಪಡೆದು ತಾನೂ ಕ್ಲ್ಯಾಪ್ ಬಾಯ್ ಆಗಿ ಕೆಲಸಕ್ಕೆ ಸೇರಿದ. ಆದರೆ ಆ ಸಂಬಂಧಿಯೂ ಹೆಚ್ಚು ದಿನ ಜೊತೆಗೆ ಇರಲಿಲ್ಲ. ಮತ್ತೆ ಒಂಟಿಯಾದ ರಾಮ್, ಧೈರ್ಯವಾಗಿ ಜೀವನ ಕಟ್ಟಿಕೊಳ್ಳಲೇಬೇಕು, ಕಂಡ ಕನಸನ್ನು ನನಸು ಮಾಡಿಕೊಳ್ಳಲೇಬೇಕೆಂದು ಕನಸಿನ ಹಕ್ಕಿಗೆ ರೆಕ್ಕೆ ಕಟ್ಟುವ ಕೆಲಸ ಮಾಡಿದರು. ಆ ಪರಿಶ್ರಮವೇ ಜೂನಿಯರ್ ಆರ್ಟಿಸ್ಟ್ ಆಗುವುದಕ್ಕೆ ಅವಕಾಶಗಳು ಸಿಕ್ಕವು. ಕನ್ನಡತಿ, ಜೊತೆ ಜೊತೆಯಲಿ ಸೇರಿದಂತೆ ಹಲವು ಫೇಮಸ್ ಸೀರಿಯಲ್‌ಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ನಟಿಸಿದರು.
ನಟಿಸುವುದರ ಜೊತೆಗೆ ಡ್ಯಾನ್ಸ್ ಕ್ಲಾಸ್ ಸೇರಿಕೊಂಡರು. 100 ರೂಪಾಯಿ ಇಟ್ಟುಕೊಂಡು ಬೆಂಗಳೂರಿಗೆ ಬಂದಿದ್ದ ರಾಮ್, ಎಷ್ಟೋ ಸಲ ನಡೆದುಕೊಂಡೆ ಡ್ಯಾನ್ಸ್ ಕ್ಲಾಸ್ ತಲುಪಿದ್ದಾರೆ. ಇಷ್ಟೆಲ್ಲಾ ಕಷ್ಟದ ನಡುವೆ ಆಡಿಷನ್ ಕೊಡುವುದನ್ನು ನಿಲ್ಲಿಸಿರಲಿಲ್ಲ. ಒಂದಿನ ಆ ಹೀರೋ ಆಗುವ ಅದೃಷ್ಟವೂ ಒಲಿದಿತ್ತು. 2018ರಲ್ಲಿ ನಿಮ್ಮೂರು ಎಂಬ ಸಿನಿಮಾಗೆ ನಾಯಕನಾಗಿ ಸೆಲೆಕ್ಟ್ ಆದರೂ. ಆದರೆ ಅದರಿಂದ ಪೈಸೆ ಹಣವೂ ಸಿಕ್ಕಿರಲಿಲ್ಲ. ಮನದ ಆಸೆ ಈಡೇರಿತಲ್ಲ ಎಂಬ ಕಾರಣಕ್ಕಾಗಿ, ಮುಂದೆ ಅವಕಾಶಗಳಿಗೆ ಸಹಾಯವಾಗುತ್ತದೆ ಎಂಬುದಕ್ಕಾಗಿ ರಾಮ್ ಕೂಡ ಅದಕ್ಕೆ ಕಾಂಪ್ರೂಮೈಸ್ ಆಗಿ ಬಿಟ್ಟಿದ್ದರು.
ಊರಿನಿಂದ ಏನಾದರೂ ಸಾಧಿಸುತ್ತೀನಿ ಎಂದು ಬಂದಿದ್ದ ಲಕ್ಕಿ ರಾಮ್ ಊರಿಗೆ ಹೋಗಿನೇ ಆರೂವರೆ ವರ್ಷವಾಗಿತ್ತು. ಸಿನಿಮಾ ರಿಲೀಸ್ ಆದ ಮೇಲೆ ಊರಿಗೆ ಹೋಗಿದ್ದರು. ಸಿನಿಮಾದಲ್ಲಿ ಊರಿನ ಮಗನನ್ನು ಕಂಡು ನಿಜಕ್ಕೂ ಊರಿನ ಜನ ಖುಷಿ ಪಟ್ಟಿದ್ದರು. ಎಲ್ಲರ ಬೆಂಬಲವೂ ಸಿಕ್ಕಿತ್ತು. ಆದರೆ ಅಷ್ಟು ಹೆಸರು ಸಿಕ್ಕ ಮೇಲೂ ಲಕ್ಕಿ ರಾಮ್‌ಗೆ ಹೇಳಿಕೊಳ್ಳವಂತಹ ಅವಕಾಶಗಳೇನು ಸಿಕ್ಕಿರಲಿಲ್ಲ. ಮತ್ತೆ ಜೂನಿಯರ್ ಆರ್ಟಿಸ್ಟ್ ಆಗಿನೇ ಕೆಲಸ ಶುರು ಮಾಡಿದರು.
ಸದ್ಯಕ್ಕೆ ಕಠೋರ, ಜನತಾ ಬಜಾರ್, #19, ಅಕ್ಷರಾ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಶಿವ ರಾಜ್‌ಕುಮಾರ್ ಅವರ ಮುಂದಿನ ಸಿನಿಮಾದಲ್ಲೂ ಅವಕಾಶ ಸಿಕ್ಕಿರುವುದು ಕೂಡ ಲಕ್ಕಿ ರಾಮ್ ಅದೃಷ್ಟ ಎಂದೇ ಭಾವಿಸುತ್ತಾರೆ. ಹೀಗೆ ಸಿನಿ ಇಂಡಸ್ಟ್ರೀಯಲ್ಲಿ ದಾಪುಗಾಲು ಇಡುತ್ತಿರುವ ಲಕ್ಕಿ ರಾಮ್‌ಗೆ ಅದೃಷ್ಟ ಎಂಬುದು ಹರಸಿ ಬರಲಿ ಎಂದೇ ಚಿತ್ತಾರವೂ ಬಯಸುತ್ತದೆ.