ಚಂದನವನದಲ್ಲಿ ದ್ವಾರಕೀಶ್‌ರವರದು ಬೇರೆಯದೇ ಛಾಪು, ದ್ವಾರಕೀಶ್ ಎಂದರೇ ಅದೊಂದು ಮಹಾನ್ ಚೇತನ. ಚಿತ್ರರಂಗದ ಅನೇಕ ಹೊಸ ಆವಿಷ್ಕಾರಗಳನ್ನು ಪರಿಚಯಿಸಿದ ಭೂಪ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಗಾದೆಗೆ ತಕ್ಕ ಉದಾಹರಣೆ. ಇವರು ಕನ್ನಡ ಚಿತ್ರರಂಗಕ್ಕೆ ನಟರಾಗಿ ಬಂದು ನಿರ್ಮಾಪಕರಾಗಿ ನಿರ್ದೇಶಕರಾಗಿ ಚಂದನವನದ ಹಲವು ಹೊಸ ಹುಟ್ಟುಗಳಿಗೆ ಕಾರಣರಾದವರು. ಇವರು ನಟಿಸಿದ ಮೊದಲ ಚಿತ್ರ ವೀರ ಸಂಕಲ್ಪ, ನಿರ್ಮಿಸಿದ ಮೊದಲ ಚಿತ್ರ ಮೇಯರ್ ಮುತ್ತಣ್ಣ. ಇವರು ನಿರ್ದೇಶಿಸಿದ ಮೊದಲ ಚಿತ್ರ ನೀ ಬರೆದ ಕಾದಂಬರಿ. ಇವರು ಕನ್ನಡ ಚಿತ್ರವನ್ನು ವಿದೇಶದಲ್ಲಿ ಶೂಟಿಂಗ್ ಮಾಡಿದ ಮೊದಲ ನಿರ್ದೇಶಕ ಮತ್ತು ನಿರ್ಮಾಪಕ. ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ. ಸುಮಾರು ಹತ್ತೊಂಭತ್ತು ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ. ಇವರು ಇದ್ದಷ್ಟು ದಿನ ದಣಿಯಲೇ ಇಲ್ಲಾ ಬರೀ ದುಡಿದು ದುಡಿದು ಧಣಿಯಾದವರು. ಒಂದಾನೊಂದು ಕಾಲದಲ್ಲಿ ಶ್ರೀಮಂತ ಚಿತ್ರಗಳ ನಿರ್ದೇಶಿಸಿದ, ನಿರ್ಮಿಸಿದ ಧೀಮಂತ ಅರ್ಧ ಶತಮಾನವನ್ನು ಸಿನಿ ಬದುಕಿನಲ್ಲೆ ಕಳೆದ ಕನ್ನಡದ ಕುಳ್ಳ. ಅವರ ಸಿನಿ ಬದುಕಿನಲಿ ಮೊದಲು ನಿರ್ದೇಶಿಸಿದ ಸಿನಿಮಾ `ನೀ ಬರೆದ ಕಾದಂಬರಿ’ ನಿರ್ದೇಶನದ ಅಪರೂಪದ ಘಟನೆಗಳನ್ನು, ಆ ಚಿತ್ರ ಕೊಟ್ಟ ಅನುಭವವನ್ನು `ಚಿತ್ತಾರ’ದೊಂದಿಗೆ ಹಂಚಿಕೊAಡಿದ್ದಾರೆ.
ಕಾಡಿದ ಕ್ಲೈಮ್ಯಾಕ್ಸ್ `ಕಾದಂಬರಿ’ಯಾದ ಕಹಾನಿ!
`ಬ್ರಹ್ಮಗಂಟು’ ಸಿನಿಮಾ ಶೂಟಿಂಗ್‌ಗೆ ಆಂಧ್ರಪ್ರದೇಶದ ವೈಜಾಗ್ ಹೋಗಿದ್ದೆ. ಶೂಟಿಂಗ್ ಮುಗಿಸಿ ವೈಜಾಗ್‌ನಿಂದ ಮದ್ರಾಸ್ಗೆ ಹೋಗಬೇಕಾಯ್ತು, ಆದರೆ ಹೊರಡುವಾಗ ಟ್ರೈನ್ ಮಿಸ್ ಆಯ್ತು. ಬೇರೆ ಟ್ರೈನ್ ಇರಲಿಲ್ಲಾ. ಆಗ ನಾನು ಹೋಗುವ ಮಾರ್ಗ ಬದಲಿಸಿ ವೈಜಾಗ್‌ನಿಂದ ಹೈದರಬಾದ್‌ಗೆ ಹೋಗಿ ಅಲ್ಲಿಂದ ಫ್ಲೈಟ್‌ನಲ್ಲಿ ಮದ್ರಾಸ್‌ಗೆ ಬರಬೇಕಾಗಿ ಬಂತು. ವೈಜಾಗ್ನಿಂದ ಟ್ರೈನ್‌ನಲ್ಲಿ ಹೊರಟು ಹೈದರಾಬಾದ್ಗೆ ಸಂಜೆ ಹೊತ್ತಿಗೆ ತಲುಪಿದೆ. ಹೈದರಾಬಾದ್ ರೈಲ್ವೇ ಸ್ಟೇಷನ್‌ನಿಂದ ನನ್ನನ್ನು ಕರೆದುಕೊಂಡು ಹೋಗಲು ನನ್ನ ಸ್ನೇಹಿತರೊಬ್ಬರು ಬಂದಿದ್ದರು. ಅವರು ಹೈದರಬಾದ್ನಲ್ಲಿರುವ ಒಂದು ಸಿನಿಮಾ ಥಿಯೇಟರ್ ಮಾಲಿಕರು. ರೈಲ್ವೇ ಸ್ಟೇಷನ್ನಿಂದ ಏರ್ಪೋರ್ಟ್‌ಗೆ ಕಾರಿನಲ್ಲಿ ಹೋಗಬೇಕಾದರೆ ನಾನು ಅವರನ್ನು ಸುಮ್ಮನೆ ಕೇಳಿದೆ ನಿಮ್ಮ ಥಿಯೆಟರ್ನಲ್ಲಿ ಯಾವ ಸಿನಿಮಾ ನಡೀತಾ ಇದೆ ಅಂದೆ, ಅದಿಕ್ಕೆ ಅವರು ಹಿಂದಿ ಸಿನಿಮಾ ನಡೀತಾ ಇದೆ ‘ಪ್ಯಾರ್ ಜುಕ್ತಾ ನಹೀಂ’ ಅಂತಾ, ಚೆನ್ನಾಗಿ ಹೋಗ್ತಾ ಇದೆ ಅಂದ್ರು. ನಾನು ಹೇಗಿದ್ರೂ ಮದ್ರಾಸ್ ಪ್ಲೆöÊಟ್ಗೆ ಇನ್ನೂ ಮೂರ್ನಾಲ್ಕು ಗಂಟೆ ಸಮಯವಿದ್ದುದ್ದರಿಂದ ಸಿನಿಮಾ ನೋಡ್ಕೊಂಡು ಸ್ವಲ್ಪ ಸಮಯ ಕಳೆಯೋಣ ಅಂತಾ ನಿರ್ಧರಿಸಿ, ಸರಿ ನಡೀರಿ ಹೇಗೂ ಫ್ಲೈಟ್‌ಗೆ ಸಮಯವಿದೆಯಲ್ಲಾ ನಿಮ್ಮ ಥಿಯೇಟರ್ನಲ್ಲಿ ಒಂದು ಸಿನಿಮಾನಾದ್ರೂ ನೋಡೋಣ, ಅಂತೇಳಿ ಥಿಯೇಟರ್ ಕಡೆಗೆ ಹೊರಡಿಸಿದೆ. ಆದ್ರೇ ಆ ಸಿನಿಮಾ ಶುರುವಾಗಿ ಬಹಳ ಹೊತ್ತಾಗಿತ್ತು, ಇನ್ನೇನೋ ಮುಗಿಯುವ ಸಮಯದಲ್ಲಿತ್ತು ಸರಿ ಅಷ್ಟನ್ನೇ ನೋಡೋಣ ಅಂತಾ ಸಿನಿಮಾ ಹಾಲ್ ಒಳಗಡೆ ಹೋದೆ. ಆಗ ಸರಿಯಾಗಿ ಪ್ಯಾರ್ ಜುಕ್ತಾ ನಹೀಂ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯ ನಡೆಯುತಿತ್ತು. ನಾನು ಆ ಸಿನಿಮಾವನ್ನು ನೋಡುತ್ತಾ ಕುಳಿತೆ. ಆ ಕ್ಲೈಮ್ಯಾಕ್ಸ್ ದೃಶ್ಯದಿಂದಲೇ ಆ ಚಿತ್ರದ ಕಥೆಯ ತಾಕತ್ತು ತಿಳಿಯುತಿತ್ತು. ಆ ಚಿತ್ರದ ಕ್ಲೈಮ್ಯಾಕ್ಸ್ ನನ್ನನ್ನು ಸಿನಿಮಾ ನೋಡುವಂತೆ ಮಾಡಿ ಕೂರಿಸಿಬಿಡ್ತು.
ಕ್ಲೈಮ್ಯಾಕ್ಸ್‌ನಿಂದಲೇ ಹೊಸ ಹುಟ್ಟು!
ಬರೀ ಆ ಕ್ಲೈಮ್ಯಾಕ್ಸ್ ದೃಶ್ಯ ನೋಡಿ ಸಿನಿಮಾ ಹಾಲ್ನಿಂದ ಹೊರ ಬಂದವನೇ ಅಲ್ಲಿಯೇ ತೀರ್ಮಾನಿಸಿಬಿಟ್ಟೆ. ದಾರಿಯಲ್ಲಿ ಈ ಸಿನಿಮಾವನ್ನು ಕನ್ನಡದಲ್ಲಿ ರೀಮೇಕ್ ಮಾಡಲೇ ಬೇಕು ಅಂತಾ, ಮನಸಿನಲ್ಲಿಯೇ ಅಂದುಕೊಂಡು ಫ್ಲೈಟ್ ಹತ್ತಿ ಮದ್ರಾಸ್ ಕಡೆ ಹೊರಟೆ. ಹೈದರಾಬಾದ್ ನಿಂದ ಮದ್ರಾಸ್ನ ದಾರಿಯುದ್ದಕ್ಕೂ ನನಗೆ ತಲೆಯಲ್ಲಿದ್ದುದು ಬರೀ ಕ್ಲೈಮ್ಯಾಕ್ಸ್ ಒಂದೆ. ನನಗೆ ಅಷ್ಟು ಹಿಡಿಸಿತ್ತು ಆ ಚಿತ್ರದ ಕ್ಲೈಮ್ಯಾಕ್ಸ್. ಆಗ ನನಗೆ ಚಿತ್ರ ಹೇಗೆ ಶುರುವಾಗುತ್ತದೆ ಅಂತಾನೂ ಗೊತ್ತಿರಲಿಲ್ಲಾ, ಅದರ ಇನ್ನುಳಿದ ಸಿನಿಮಾ ಕಥೆ ಹೇಗಿರುತ್ತದೆ ಅಂತಾನೂ ಗೊತ್ತಿರಲಿಲ್ಲಾ. ಇಂಟರ್ವಲ್ ನಂತರ ಸಿನಿಮಾ ಕಥೆ ಹೇಗೆ ಅಂತಾನೂ ಗೊತ್ತಿರಲಿಲ್ಲಾ. ಆದರೂ ತಲೆಯಲ್ಲಿ ಆ ಕ್ಲೈಮ್ಯಾಕ್ಸ್ ಬಂದು ಕುಳಿತಿತ್ತು. ಆ ಸಿನಿಮಾವನ್ನು ಕನ್ನಡದಲ್ಲಿ ನಿರ್ಮಾಣ ಮಾಡುವುದಂತೂ ನಿಶ್ಚಯ ಆಗಿತ್ತು. ನಮ್ಮ ಮ್ಯಾನೇಜರ್‌ಗೆ ಹೇಳಿ ಆ ಚಿತ್ರದ ಹಕ್ಕನ್ನು ಖರೀದಿಸಲು ಹೇಳಿದೆ. ಮತ್ತು ಆ ಚಿತ್ರದ ಸಿನಿಮಾ ಮೇಕಿಂಗ್‌ನ ಎಲ್ಲಾ ದಾಖಲಾತಿ ತರಿಸಿಕೊಳ್ಳಲು ಹೇಳಿದ್ದೆ. ಆತ ಆ ಕೆಲಸ ಮಾಡಲು ತಡಮಾಡಲಿಲ್ಲಾ ಎಂದಿದ್ದಾರೆ.
(ದ್ವಾರಕೀಶ್ ಅವರ ಮನದಾಳದ ಮಾತು ಮುಂದುವರೆಯಲಿದೆ)