Sandalwood Leading OnlineMedia

ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಆರಂಭ- ಈ ಬಾರಿಯೂ ಭರಪೂರ ಮನರಂಜನೆ ಸಿಗೋದು ಪಕ್ಕಾ

ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ‘ನನ್ನಮ್ಮ ಸೂಪರ್ ಸ್ಟಾರ್’ ಪ್ರೇಕ್ಷಕರನ್ನು ರಂಜಿಸಿದ್ದು ಗೊತ್ತೇ ಇದೆ. ಮೊದಲ ಸೀಸನ್ ಮೆಗಾ ಹಿಟ್ ಬಳಿಕ ಸೀಸನ್ 2 ಮೂಲಕ ಮತ್ತೊಮ್ಮೆ ಕಿರುತೆರೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲು ಇಡೀ ತಂಡ ಸಜ್ಜಾಗಿದ್ದು, ಈಗಾಗಲೇ ‘ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2’ ಗ್ರ್ಯಾಂಡ್ ಒಪನಿಂಗ್ ಕೂಡ ಆಗಿದೆ. ಮೊದಲ ಸೀಸನ್ ನಲ್ಲಿ ಸೆಲೆಬ್ರೆಟಿ ತಾಯಿ ಮಕ್ಕಳಿಂದ ಕೂಡಿದ್ದ ಈ ಶೋ ಈ ಬಾರಿ ಸೆಲೆಬ್ರೆಟಿಗಳ ಜೊತೆ ಸಾಮಾನ್ಯ ಜನರನ್ನು ಒಳಗೊಂಡಿದೆ. ಅಕ್ಟೋಬರ್ 15ರಂದು ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗ್ರ್ಯಾಂಡ್ ಒಪನಿಂಗ್ ಆಗಿದ್ದು, ಎರಡು ಎಪಿಸೋಡ್ ಗಳು ಪ್ರಸಾರವಾಗಿದೆ.
 
 
 
ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಸ್ಪೆಷಲ್ ಎಪಿಸೋಡ್ ಚಿತ್ರೀಕರಣದಲ್ಲಿ ತಂಡ ಬ್ಯುಸಿಯಾಗಿದ್ದು, ಹಬ್ಬದ ಸಡಗರ ಹೆಚ್ಚಿಸಲು ಅಮ್ಮ ಮಕ್ಕಳ 12 ಹೊಸ ಜೋಡಿಗಳು ರೆಡಿಯಾಗಿದ್ದಾರೆ. ಇದೇ ಖುಷಿಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ ತಂಡ ಮಾಧ್ಯಮದವರನ್ನು ಎದುರು ಗೊಂಡಿತ್ತು.‘ನನ್ನಮ್ಮ ಸೂಪರ್ ಸ್ಟಾರ್’ ಕಿರುತೆರೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿತ್ತು. ಸೀರಿಯಲ್ ನಡುವೆ ಈ ಶೋ ಹೊಸ ಬಗೆಯ ಕಾನ್ಸೆಪ್ಟ್ ನೊಂದಿಗೆ ಮನೆ ಮಂದಿಗೆಲ್ಲ ರಂಜನೆ ನೀಡಿತ್ತು. ತಾಯಿ ಮಕ್ಕಳ ಆಟ, ನಗು, ಅಳು, ತಮಾಷೆ ವೀಕ್ಷಕರ ಮನಗೆದ್ದಿತ್ತು. ಕಾರ್ಯಕ್ರಮವೂ ಜನಪ್ರಿಯವಾಗಿ ಯಶಸ್ವಿಯಾಗಿತ್ತು. ಆ ಯಶಸ್ಸಿನ ಬೆನ್ನಲ್ಲೇ ಸೀಸನ್ 2 ಆರಂಭವಾಗಿದೆ. ಈ ಬಾರಿ ನಿರಂಜನ್ ದೇಶಪಾಂಡೆ ಕಾರ್ಯಕ್ರಮ ನಿರೂಪಣೆ ಮಾಡಲಿದ್ದು, ಇವರ ಜೊತೆಗೆ ಮೊದಲ ಸೀಸನ್ ವಿನ್ನರ್ ವಂಶಿಕಾ ನಿರೂಪಕಿಯಾಗಿ ರಂಜಿಸಲಿದ್ದಾರೆ. ಹಿಂದಿನಂತೆ ಈ ಸೀಸನ್ ನಲ್ಲಿಯೂ ನಟಿ ತಾರಾ, ಅನು ಪ್ರಭಾಕರ್ ಹಾಗೂ ಸೃಜನ್ ಲೋಕೇಶ್ ಜಡ್ಜಸ್ ಗಳಾಗಿರಲಿದ್ದಾರೆ.
 
 
 
ಈ ಬಗ್ಗೆ ಮಾತನಾಡಿದ ಕಲರ್ಸ್ ಕನ್ನಡದ ಪ್ರೋಗ್ರಾಮ್ ಹೆಡ್ ಪ್ರಕಾಶ್ ‘ನನ್ನಮ್ಮ ಸೂಪರ್ ಸ್ಟಾರ್’ ಮಕ್ಕಳ ಇನೋಸೆನ್ಸ್ ಇಟ್ಟುಕೊಂಡು ಮನರಂಜನೆ ನೀಡುವ ಕಾರ್ಯಕ್ರಮ. ಬುದ್ದಿವಂತಿಕೆ, ಪ್ರತಿಭೆಗಿಂತ ಮಕ್ಕಳ ಮುಗ್ಧತೆಯೇ ಈ ಕಾರ್ಯಕ್ರಮದ ಕೇಂದ್ರ ಬಿಂದು. ಮೊದಲ ಸೀಸನ್ ದೊಡ್ಡ ಮಟ್ಟದಲ್ಲಿ ಹಿಟ್ ಆದ ಕಾರಣದಿಂದ ಸೀಸನ್ 2 ಆರಂಭವಾಗಿದೆ. ಈ ಕಾರ್ಯಕ್ರಮ ಕೂಡ ಸಕ್ಸಸ್ ಆಗಲಿದೆ ಎಂಬ ಭರವಸೆ ಇದೆ ಎಂದು ತಿಳಿಸಿದ್ರು.
 
ನಟಿ ತಾರಾ ಮಾತನಾಡಿ ‘ನನ್ನಮ್ಮ ಸೂಪರ್ ಸ್ಟಾರ್’ ಮೊದಲ ಸೀಸನ್ ಬಹಳ ದೊಡ್ಡ ಹೆಸರು ಮಾಡಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕೂಡ ಜನಪ್ರಿಯತೆ ಗಳಿಸಿಕೊಂಡ್ರು. ಹೊಸತನದಿಂದ ಕೂಡಿದ ಶೋ ಇದಾಗಿತ್ತು. ಮೊದಲ ಸೀಸನ್ ಯಶಸ್ಸೇ ಸೀಸನ್ 2 ಆರಂಭ ಮಾಡಲು ಕಾರಣ. ಈ ಬಾರಿ ಇಡೀ ಕರ್ನಾಟಕವನ್ನು ಸುತ್ತಿ ಅಲ್ಲಿರುವ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಸಾಮಾನ್ಯ ಜನರಿಗೂ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದ್ರು.
 
ಲೋಕೇಶ್ ಪ್ರೊಡಕ್ಷನ್ ಬ್ಯಾನರ್ ನಡಿ ಈ ಕಾರ್ಯಕ್ರಮ ನಿರ್ಮಾಣವಾಗುತ್ತಿದ್ದು, ಈ ಬಗ್ಗೆ ಮಾತನಾಡಿದ ನಟ ಸೃಜನ್ ಲೋಕೇಶ್ ಕಲರ್ಸ್ ಕನ್ನಡದ ಜೊತೆ ನನ್ನದು ಎಂಟು ವರ್ಷಗಳ ಜರ್ನಿ. ಅಲ್ಲಿಂದ ಇಲ್ಲಿಯವರೆಗೂ ನನಗೆ ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ. ನಾನು ಪ್ರೊಡಕ್ಷನ್ ಮಾಡಿರಬಹುದು ಆದ್ರೆ ಒಂದು ತಂಡವಾಗಿ ನಾವು ಗೆದ್ದಿದ್ದೇವೆ. ನನ್ನಮ್ಮ ಸೂಪರ್ ಸ್ಟಾರ್, ರಾಜಾ ರಾಣಿ, ಗಿಚ್ಚಿ ಗಿಲಿ ಗಿಲಿ ಶೋ ಇದೆಲ್ಲದರ ಗೆಲುವಿಗೆ ಡೈರೆಕ್ಷನ್ ತಂಡ ಕಾರಣ. ನಿರ್ದೇಶಕ ಪ್ರಕಾಶ್ ಹಾಗೂ ವಿಜಯ್ ಕ್ರಿಯೆಟಿವಿಟಿ ಎಲ್ಲಾ ಕಾರ್ಯಕ್ರಮಗಳನ್ನು ಇಷ್ಟರ ಮಟ್ಟಿಗೆ ಗೆಲ್ಲಿಸಿದೆ. ಸ್ಪರ್ಧಿಗಳು ಕೂಡ ಅಷ್ಟೇ ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ತಮ್ಮ ಮನದ ಮಾತುಗಳನ್ನು ಹಂಚಿಕೊಂಡ್ರು.

Share this post:

Related Posts

To Subscribe to our News Letter.

Translate »