ಇತ್ತೀಚೆಗೆ ಹಲವಾರು ಹೊಸ ಜಾನರ್ ಚಿತ್ರಗಳು ತೆರೆಗೆ ಬರುತ್ತಿದ್ದು, ಅಂಥಾ ಚಿತ್ರಗಳಲ್ಲಿ ಪ್ರಶಾಂತ್ ಕೆ.ಶೆಟ್ಟಿ ಅವರ ನಿರ್ದೇಶನದ ನಾನ್‌ರೌಡಿ ಕೂಡ ಒಂದು. ಈ ಹಿಂದೆ ಮನಸಿನ ಪುಟದಲಿ ಹಾಗೂ ಬ್ರಾಂಡ್ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರಶಾಂತ್ ಅವರ ನಿರ್ದೇಶನ ಹಾಗೂ ನಿರ್ಮಾಣದ ಮೂರನೇ ಚಿತ್ರವಿದು. ಸೆ.9ರ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿರುವ ಈ ಚಿತ್ರದಲ್ಲಿ ಪ್ರಶಾಂತ್ ಕೆ.ಶೆಟ್ಟಿ ಅವರೇ ನಾಯಕನಾಗಿ ನಟಿಸಿದ್ದು, ಮುಂಬೈ ಮೂಲದ ತನುಶ್ರೀ ಚಟರ್ಜಿ ನಾಯಕಿಯಾಗಿ ಹಾಗೂ ಐಟಂ ಹಾಡಿನಲ್ಲಿ ಸಮೀರಾಖಾನ್ ಹೆಜ್ಜೆ ಹಾಕಿದ್ದಾರೆ. ಆ ಚಿತ್ರದಲ್ಲಿ 6 ಹಾಡುಗಳಿದ್ದು, ಹಿರಿಯ ಜನಪದ ಗಾಯಕ ಗುರುರಾಜ ಹೊಸಕೋಟೆ ಅವರು 5 ಹಾಡುಗಳಿಗೆ ಸಂಗೀತ, ಸಾಹಿತ್ಯ ರಚನೆಯ ಜೊತೆ ಅವರೇ ಒಂದು ಹಾಡಿಗೆ ದನಿಯಾಗಿದ್ದಾರೆ. ವಿನುಮನಸು ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.
ಇತ್ತೀಚೆಗೆ ನಡೆದ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಟಿಯಲ್ಲಿ ಚಿತ್ರತಂಡ ಹಾಜರಿದ್ದು ಅನುಭವ ಹಂಚಿಕೊಂಡಿತು. ಮೊದಲು ಹಿರಿಯ ಛಾಯಾಗ್ರಾಹಕ ಅಣಜಿ ನಾಗರಾಜ್ ಮಾತನಾಡಿ ಚಿತ್ರದ ಪ್ರತಿ ಸೀನ್‌ಗೂ ತುಂಬಾ ವರ್ಕ್ ಮಾಡಿದ್ದೇವೆ. ಇಂಥ ಸಿನಿಮಾಗಳಿಗೆ ಮಾಧ್ಯಮದ ಸಹಕಾರ ಬೇಕು. ಸಿನಿಮಾ ಪ್ರೇಕ್ಷಕರಿಗೆ ಖಂಡಿತ ಮನರಂಜನೆ ನೀಡುತ್ತದೆ ಎಂದು ಹೇಳಿದರು. ನಟ ಗಣೇಶರಾವ್ ಮಾತನಾಡಿ ಇದು ನನ್ನ 300 ನೇ ಚಿತ್ರ. ಈ ಚಿತ್ರದಲ್ಲಿ ನನ್ನದು ಒಬ್ಬ ಡಾನ್ಸ್ ಟೀಚರ್ ಪಾತ್ರ. ನಾಯಕ ಒಮ್ಮೆ ನನ್ನ ಜೊತೆ ಸ್ಕೂಟರ್ನಲ್ಲಿ ಹೋಗುವಾಗ ರೌಡಿಗಳ ಪೋಸ್ಟರ್ ನೋಡಿ ನಾನೂ ಯಾಕೆ ರೌಡಿಯಾಗಬಾರದು ಎಂದು ಕೇಳುತ್ತಾನೆ. ಮುಂದೆ ದೊಡ್ಡ ರೌಡಿಯನ್ನು ಹೊಡೆದು ಜೈಲಿಗೂ ಹೋಗುತ್ತಾನೆ ಎಂದು ಹೇಳಿದರು. ೧೫೦೦ ಚಿತ್ರಗಳಿಗೆ ಸ್ಟಂಟ್ ಮಾಡಿರುವ ಫಯಾಜ್‌ಖಾನ್ ೩ ಸಾಹಸ ದೃಷ್ಯಗಳನ್ನು ಕಂಪೋಜ್ ಮಾಡಿದ್ದಾರೆ.
ಕೊನೆಯಲ್ಲಿ ಪ್ರಶಾಂತ್ ಶೆಟ್ಟಿ ಮಾತನಾಡುತ್ತ ದಶಕದ ಹಿಂದೆ ಮನಸಿನಪುಟದಲಿ ಹಾಗೂ 5ವರ್ಷಗಳ ಹಿಂದೆ ಬ್ರಾಂಡ್ ಎನ್ನುವ ಚಿತ್ರಗಳನ್ನು ಮಾಡಿದ್ದು, ಇದು 3ನೇ ಚಿತ್ರ. ನನ್ನ ಸ್ನೇಹಿತ ಹೇಳಿದ ಕಂಟೆಂಟ್ ಇಟ್ಟುಕೊಂಡು ಈಚಿತ್ರ ಮಾಡಿದ್ದೇನೆ. ಸಾಧನೆ ಮಾಡಬೇಕೆಂದು ಹೃದಯದಲ್ಲಿ ನೂರಾರು ಕನಸುಗಳನ್ನು ಹೊತ್ತು ಹಳ್ಳಿಯಿಂದ ಬೆಂಗಳೂರಿಗೆ ಬರುವ ನಾಯಕನ ಜೀವನ ಮುಂದೆ ಏನೆಲ್ಲ ತಿರುವುಗಳನ್ನು ಪಡೆದು ಸಾಗುತ್ತದೆ, ಆತ ಏಕೆ ರೌಡಿಯಾದ ಎನ್ನುವುದೇ ಈ ಚಿತ್ರದ ಮುಖ್ಯ ಅಂಶ.
ಬೆಂಗಳೂರು, ದಾವಣಗೆರೆ ಬಳಿಯ ಚನ್ನಗಿರಿ ಹಾಗೂ ಬಾಂಬೆಯಲ್ಲಿ ಚಿತ್ರೀಕರಿಸಿದ್ದೇವೆ. ನಾನು, ಗುರುರಾಜ ಹೊಸಕೋಟೆ ಹಾಗೂ ಅಣಜಿ ನಾಗರಾಜ್ ಸೇರಿ ತುಂಬಾ ಚರ್ಚೆಮಾಡಿ ಈ ಸಿನಿಮಾ ಆರಂಭಿಸಿದೆವು. ನಮ್ಮ ಚಿತ್ರದ ನಾಯಕಿಯಾಗಿ ತನುಶ್ರೀ ಅಭಿನಯಿಸಿದ್ದು, ಈಗಾಗಲೇ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದು ಕಂಪ್ಲೀಟ್ ಮಾಸ್ ಸಿನಿಮಾ ಅಲ್ಲ, ಕಲ್ಟ್ ಸಿನಿಮಾ ಎಂದು ಹೇಳಿದರು. ಮೌಲ್ಯಚೇತನ್ ಅವರು ಈ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ.