ಎಂ.ಎಸ್. ಉಮೇಶ್ (ಮೈಸೂರು ಶ್ರೀಕಂಠಯ್ಯ ಉಮೇಶ್) ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ಪ್ರಸಿದ್ಧ ನಟರು. ಅವರು 24 ಏಪ್ರಿಲ್ 1945ರಂದು ಮೈಸೂರಿನಲ್ಲಿ ಜನಿಸಿದರು. ಬಾಲ್ಯದಲ್ಲೇ ರಂಗಭೂಮಿಯತ್ತ ಆಸಕ್ತಿ ಬೆಳೆಸಿಕೊಂಡ ಅವರು, ಕೇವಲ ನಾಲ್ಕು ವರ್ಷದ ವಯಸ್ಸಿನಲ್ಲಿ ಹಲವಾರು ನಾಟಕ ತಂಡಗಳೊಂದಿಗೆ ಅಭಿನಯ ಪ್ರಾರಂಭಿಸಿದರು.
1960ರಲ್ಲಿ ಬಿಡುಗಡೆಯಾದ ಮಕ್ಕಳ ರಾಜ್ಯ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸುವ ಮೂಲಕ ಚಲನಚಿತ್ರ ಕ್ಷೇತ್ರಕ್ಕೆ ಕಾಲಿಟ್ಟರು. ನಂತರ ಕೆಲ ವರ್ಷಗಳ ವಿರಾಮದ ಬಳಿಕ, ರಂಗಭೂಮಿ ಮೂಲಕ ಮತ್ತೆ ಸಿನಿರಂಗ ಪ್ರವೇಶಿಸಿದರು. ಕಥಾಸಂಗಮ (1977) ಚಿತ್ರದ ಮೂಲಕ ಗಮನ ಸೆಳೆದ ಅವರು, ಈ ಪಾತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದರು.
ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ಜನಪ್ರಿಯ ಹಾಸ್ಯ ಕಲಾವಿದರಾಗಿ ಉಮೇಶ್ ಗುರುತಿಸಿಕೊಂಡಿದ್ದರು. “ಅಯ್ಯಯ್ಯೋ ಇವ್ರೂ ನನ್ನ ಅಪಾರ್ಥ ಮಾಡ್ಕೊಂಬಿಟ್ರಲ್ಲ” ಎನ್ನುವ ತಮ್ಮ ಜನಪ್ರಿಯ ಡೈಲಾಗ್ ಮೂಲಕ ಉಮೇಶ್ ಮನೆಮಾತಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಎಂ.ಎಸ್. ಉಮೇಶ್ ಎಂದೇ ಜನಪ್ರಿಯರಾಗಿದ್ದ ಇವರು ಆರು ದಶಕಗಳಿಂದಲೂ ಅವರು ಕನ್ನಡ ಸಿನಿಪ್ರೇಕ್ಷಕರನ್ನು ನಕ್ಕು ನಗಿಸಿದ್ದರು. ಸಿನಿಮಾವೊಂದರಲ್ಲಿ ವೃದ್ಧ ವಿಧವೆ ಅಜ್ಜಿಯ ಪಾತ್ರವೂ ಮೆಚ್ಚುಗೆ ಪಡೆದಿತ್ತು. ರಾಜ್ಕುಮಾರ್ ಅವರ “ಬೊಂಬೆಯಾಟವಯ್ಯಾ” ಹಾಡಿನಲ್ಲೂ ಉಮೇಶ್ ಕಾಣಿಸಿಕೊಂಡಿದ್ದಾರೆ.
ಉಮೇಶ್ ಅವರು 350ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಹಾಸ್ಯ ಮತ್ತು ಸ್ವಭಾವ ಪಾತ್ರಗಳಲ್ಲಿ ಅಭಿನಯಿಸಿ, ತಮ್ಮದೇ ಆದ ವಿಶಿಷ್ಟ ಹಾಸ್ಯಶೈಲಿ ಹಾಗೂ ಸಂಭಾಷಣೆ ಹೇಳುವ ಕ್ರಮದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಗೋಲ್ಮಾಲ್ ರಾಧಾಕೃಷ್ಣ, ವೆಂಕಟ ಇನ್ ಸಂಕಟ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರ ಪ್ರದರ್ಶನವು ಅತ್ಯಂತ ಮೆಚ್ಚುಗೆ ಪಡೆದಿದೆ.
ದೀರ್ಘಕಾಲದ ಕಲಾಜೀವನದಲ್ಲಿ ಅವರು ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹತ್ತುಹಲವು ಗೌರವಗಳನ್ನು ಪಡೆದಿದ್ದರು.
30 ನವೆಂಬರ್ 2025ರಂದು, 80 ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ವಿಧಿವಶರಾದರು. ಕನ್ನಡ ಚಿತ್ರರಂಗ ಕಳೆದುಕೊಂಡ ಅನನ್ಯ ಹಾಸ್ಯನಟರಲ್ಲಿ ಒಬ್ಬರು ಉಮೇಶ್.
ಏಕಾಂಗಿಯಾದ ಸುಧಾ ಉಮೇಶ್
ಉಮೇಶ್ ಅವರ ಪತ್ನಿ ಸುಧಾ. ಅವರೂ ಕಲಾವಿದರಾಗಿದ್ದವರೇ. ನಾಟಕದಲ್ಲಿ ಕೆಲಸ ಮಾಡುತ್ತಿದ್ದಾಗ, ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಸುಧಾ ಅವರನ್ನು ಮದುವೆಯಾದವರು. ಉಮೇಶ್. ನಮ್ಮದು 57 ವರ್ಷಗಳ ಸಂಸಾರ. ಒಂದು ದಿನವೂ ನಾವು ಜಗಳ ಆಡಲಿಲ್ಲ. ಕಷ್ಟಗಳಿದ್ದವು, ಆದರೆ, ದೇವರು ಸುಖ ಕೊಟ್ಟಾಗ ಹೇಗೆ ಸ್ವೀಕಾರ ಮಾಡ್ತೇವೋ.. ಹಾಗೆಯೇ ಕಷ್ಟ ಬಂದಾಗಲೂ ಸ್ವೀಕರಿಸಬೇಕು ಎನ್ನುತ್ತಿದ್ದರು.. ಒಂಟಿಯಾಗಿರುವುದು ಹೇಗೆ ಎಂಬುದೇ ಸುಧಾ ಅವರ ಚಿಂತೆಯಾಗಿದೆ. ಉಮೇಶ್ ಸುಧಾ ದಂಪತಿಗೆ ಇಬ್ಬರು ಮಕ್ಕಳು. ಜಯಲಕ್ಷ್ಮೀ ಮತ್ತು ಚಂದ್ರಶೇಖರ್. ಮಗ ಚಂದ್ರಶೇಖರ್ ಕ್ರಿಕೆಟ್ ಆಡುತ್ತಿದ್ದಾಗ ಆಕಸ್ಮಿಕವಾಗಿ ರೈಲಿಗೆ ಸಿಕ್ಕು ಸಾವನ್ನಪ್ಪಿದ್ದರು. ರೈಲ್ವೇ ಟ್ರ್ಯಾಕ್ ಪಕ್ಕದ ಫೀಲ್ಡಿನಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಫೀಲ್ಡಿಂಗ್ ಮಾಡ್ತಾ ಚಂದ್ರಶೇಖರ್, ರೈಲ್ವೆ ಟ್ರ್ಯಾಕ್ ಮೇಲೆ ಕ್ಯಾಚ್ ಹಿಡಿಯೋಕೆ ಹೋಗಿ.. ಬರುತ್ತಿದ್ದ ರೈಲನ್ನು ನೋಡದೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದರು. ಅಗ ಚಂದ್ರಶೇಖರ್ ಅವರಿಗೆ ಕೇವಲ 20 ವರ್ಷ ವಯಸ್ಸು. ಮಗನ ಸಾವಿನ ಆಘಾತ ಉಮೇಶ್ ಅವರನ್ನು ಕೊನೆಯವರೆಗೂ ಕಾಡುತ್ತಲೇ ಇತ್ತು.
ʻʻಕ್ಯಾನ್ಸರ್ ಎಂದು ವೈದ್ಯರು ಹೇಳಿದಾಗಲೇ ನಮಗೆ ಗೊತ್ತಿತ್ತು. ಕ್ಯಾನ್ಸರ್ ಗೆಲ್ಲುವುದು ಸಾಧ್ಯವಿಲ್ಲ ಎಂಬ ಸತ್ಯ ನನಗೂ ಗೊತ್ತಿತ್ತುʼʼ ಎನ್ನುವ ಸುಧಾ ಕೂಡಾ ಉಮೇಶ್ ಅವರ ಮನಸ್ಥಿತಿಯವರೇ. ಮುಂದಿನ ಜೀವನ ಹೇಗೆ ಎನ್ನುವುದು ಗೊತ್ತಿಲ್ಲ. ಸೀರಿಯಲ್ ಆಫರ್ ಬಂದಿತ್ತು. ಅವರಿಗೆ ಕಾಯಿಲೆ ಅಂತ ಗೊತ್ತಾಗಿ ಆ ಆಫರ್ ಅನ್ನು ಕ್ಯಾನ್ಸಲ್ ಮಾಡಿದ್ವಿ. ಇನ್ನೂ ನಾನು ದುಡಿಯಬೇಕು, ನಮಗೆ ಊಟ ಹಾಕೋರು ಯಾರು ಅಂತ ಕೊನೆವರೆಗೂ ಹೇಳ್ತಿದ್ರು, ನಾನು ಹೋಗ್ತೀನಿ ದುಡ್ಕೊಂಡು ಬರ್ತೀನಿ ಅಂತಿದ್ರು ಎನ್ನುವ ಸುಧಾ ಅವರಿಗೆ ಮುಂದೆ ಜೀವನ ಹೇಗೆ ಎನ್ನುವುದೇ ದೊಡ್ಡ ಚಿಂತೆ. ಉಮೇಶ್ ಅವರು ರಂಗಭೂಮಿಯಲ್ಲಿದ್ದ ಕಾರಣ ತಿಂಗಳಿಗೆ 2 ಸಾವಿರ ರೂ. ಪಿಂಚಣಿ ಹಣ ಬರುತ್ತಿತ್ತು.ಇನ್ನು ಮುಂದೆ ಅದೂ ನಿಲ್ಲುವ ಸಾಧ್ಯತೆಗಳಿವೆ.

