ತುಮಕೂರಿನ ಅರಳಾಲುಸಂದ್ರದಿಂದ ಬಿ.ಇ ಓದಿಕೊಂಡು ಕಲಾವಿದನಾಗಬೇಕೆಂದು ಚಿಕ್ಕಂದಿನಿಂದಲೇ ಶಾಲಾದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಾಗವಹಿಸುತ್ತಾ, ಒಂದೊಂದೆ ಮೆಟ್ಟಿಲು ಹತ್ತುತ್ತಾ, ಸಾಧನೆಯ ಹಾದಿಯಲ್ಲಿ ತಿರುಗಿ ನೋಡದೆ ಸಾಗುತಿರುವ ಅಚ್ಚ ಕಂನ್ನಡದ ಕಲಾವಿದ ಅರ್ಜುನ್ ಯೋಗಿ.
ರಂಗ ಪ್ರತಿಭೆ
ಚಂದನವನದ ನೆಲದಲ್ಲಿ ಕಲಾವಿದರಿಗೇನು ಬರವಿಲ್ಲ, ಬರುತ್ತಿರುತ್ತಾರೆ ಹೋಗುತ್ತಿರುತ್ತಾರೆ, ಕೆಲವೇ ಕೆಲವು ಮಂದಿ ನೆಲೆ ನಿಲ್ಲುತ್ತಾರೆ. ಹಾಗೇ ನೆಲೆ ನಿಂತವರುಗಳಲ್ಲಿ ಕೆಲವರು ನಟನಾ ರಂಗದಲ್ಲಿ ಪಾತ್ರಗಳಲ್ಲಿ ಬೇಯುತ್ತಾ ಬೇಯುತ್ತಾ ಪಕ್ವವಾಗುತ್ತಾ ಹೋಗುತ್ತಾರೆ. ಅಂತಹ ಕಲಾವಿದರುಗಳಲ್ಲಿ ಅರ್ಜುನ್ ಯೋಗಿ ಒಬ್ಬರು. ಇವರು ೨೦೧೦-೧೧ರಲ್ಲಿ ಕಲ್ಯಾಣಿ ಪ್ರದೀಪ್ ರವರ ರಂಗ ತಂಡದಲ್ಲಿ ತರಬೇತಿಯನ್ನು ಪಡೆದುಕೊಂಡು ರಂಗಭೂಮಿ, ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸುತ್ತಾ ನಟನೆಯಲ್ಲಿ ಪಳಗಿದ್ದಾರೆ. ಸರಿ ಸುಮಾರು ೨೦ ಸೀರಿಯಲ್‌ಗಳಲ್ಲಿ ನಟಿಸಿರುವ ಇವರು `ಅಕ್ಕ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. `ಅಕ್ಕ’ ಧಾರಾವಾಹಿಯಲ್ಲಿ ಕನ್ನಡದ ಖ್ಯಾತ ನಿರೂಪಕಿ ಅನುಪಮ ಗೌಡ ನಾಯಕಿಯಾಗಿ, ಅರ್ಜುನ್ ನಾಯಕರಾಗಿ ನಟಿಸಿದ್ದಾರೆ.
ನಟನೆಗೆ ಮೊದಲ ಪ್ರಾಶಸ್ತ್ಯ
ಅರ್ಜುನ್ ಇವರು ರಂಗಭೂಮಿಯಲ್ಲಿದ್ದಾಗಲೇ ಸುಮಾರು ಸಿನಿಮಾದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. ೨೦೧೧ ರಲ್ಲಿ `ಅಣ್ಣಾಬಾಂಡ್’ ಸಿನಿಮಾದಲ್ಲಿ ನಟಿಸಿದರು ಹಾಗೆ ಸುಮಾರು ಸಿನಿಮಾಗಳಲ್ಲಿ ಚಿಕ್ಕ- ಪುಟ್ಟ ಪಾತ್ರಗಳಲ್ಲಿ ನಟಿಸಿ, ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಹೀಗಿರುವಾಗ ದಿನಕರ್ ತೂಗುದೀಪ್ ರವರ ತೂಗುದೀಪ ಪ್ರೊಡಕ್ಷನ್ ನಲ್ಲಿ ಕವಿರಾಜ್ ನಿರ್ದೇಶನದ `ಮದುವೆಯ ಮಮತೆಯ ಕರೆಯೋಲೆ’ಗೆ ಆಡಿಷನ್ ಕರೆದಿರುತ್ತಾರೆ, ಆ ಆಡಿಷನ್‌ನಲ್ಲಿ ಬಾಗವಹಿಸಿ ಅಲ್ಲಿ ಸೆಲೆಕ್ಟ್ ಆಗಿ ಮದುವೆಯ `ಮಮತೆಯ ಕರೆಯೋಲೆ’ ಚಿತ್ರದಲ್ಲಿ ಎರಡನೇ ಹೀರೊ ಆಗಿ ನಟಿಸಿದರು, ಎಂ.ಡಿ.ಕೌಶಿಕ್ ನಿರ್ದೇಶನದ `ಸಂಜೆಯಲ್ಲಿ ಅರಳಿದ ಹೂ’ ಅನ್ನುವ ಕಲಾತ್ಮಕ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾ ಮುಗಿದ ನಂತರ ಸೊಲೊ ಹೀರೊ ಆಗಿ ಬಡ್ತಿ ಪಡೆದು `ಏನೆಂದು ಹೆಸರಿಡಲಿ’ ಎಂಬ ಚಿತ್ರದಲ್ಲಿ ಪೂರ್ಣ ಪ್ರಮಾಣದ ಹೀರೊ ಆಗಿ ನಟಿಸಿ ಹೆಸರುಗಳಿಸಿಕೊಳ್ಳುತ್ತಾರೆ. ಆ ಸಿನಿಮಾದ ನಂತರ `ನನ್ನ ಪ್ರಕಾರ’ ಅನ್ನುವ ಮಲ್ಟಿ ಸ್ಟಾರ್ ನಟನೆಯ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಳ್ಳುತ್ತಾರೆ. ತದ ನಂತರದಲ್ಲಿ `ಚೇಸ್’ ಅನ್ನುವ ಸಿನಿಮಾದಲ್ಲಿ ಎರಡನೆಯ ಹೀರೊ ಆಗಿ ನಟಿಸಿದರು, ಇತ್ತೀಚೆಗೆ `ಲಾಂಗ್ ಡ್ರೈವ್’ ಅನ್ನುವ ಸಿನಿಮಾದಲ್ಲಿ ಮತ್ತೇ ಹೀರೊ ಆಗಿ ನಟಿಸಿದರು. ಈಗ `ಅನಾವರಣ’ ಅನ್ನುವ ಸಿನಿಮಾ ರೀಲೀಸ್‌ಗೆ ರೆಡಿ ಇದೆ. ಇದಲ್ಲದೆ ಕರ‍್ಸ್ ಕನ್ನಡ ಚಾನಲ್ ನಡೆಸಿಕೊಡುವ `ಡ್ಯಾನ್ಸಿಂಗ್ ಚಾಂಪಿಯನ್’ ರಿಯಾಲಿಟಿ ಶೋ ನಲ್ಲಿ ಫೈನಲಿಸ್ಟ್ ಆಗಿದ್ದರು, ಇಷ್ಟೆ ಅಲ್ಲದೆ ಈ ವರ್ಷದ ಸಿ.ಸಿ.ಎಲ್ ಸುದೀಪ್ ತಂಡದಲ್ಲಿ ಕ್ರಿಕೆಟ್ ಆಡಿದ್ದಾರೆ, ಸದಾ ಲವಲವಿಕೆಯ ವ್ಯಕ್ತಿತ್ವ ಹೊಂದಿರುವ ಈ ಅರ್ಜುನ್ ಒಟ್ಟು ಎಂಟು ಸಿನಿಮಾ ಹತ್ತು ಸೀರಿಯಲ್‌ಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ನಟನೆ, ಫೈಟ್ಸ್, ಡ್ಯಾನ್ಸ್ ಎಲ್ಲವನ್ನು ಕಲಿತು ಒಂದು `ಕಂಪ್ಲೀಟ್ ಆ್ಯಕ್ಟರ್’ ಆಗಿ ಒಂದು ಒಳ್ಳೆಯ ಬ್ರೇಕ್‌ಗಾಗಿ ಕಾಯುತಿದ್ದಾರೆ.
ಸಿನಿಮಾಗಳೇ ಸ್ಪೂರ್ತಿ
`ಮುಂಗಾರುಮಳೆ’ ಮತ್ತು `ದುನಿಯಾ’ ನೋಡಿ ಸ್ಪೂರ್ತಿ ಪಡೆದು, ಜನ ಸಾಮಾನ್ಯನೂ ಚಿತ್ರರಂಗದಲ್ಲಿ ನೆಲೆಯೂರಬಹುದು ಎಂದು ಬಂದವರು ಅರ್ಜುನ್. `ಸಿನಿಮಾದಲ್ಲಿ, ಕಿರುತೆರಯಲ್ಲಿ ಪ್ರತಿಯೊಬ್ಬರಿಂದಲೂ ಕಲಿಯುವುದಿದೆ’ ಎಂದು ನಂಬಿರುವ ಈ ನಟ `ಕನ್ನಡ ಚಿತ್ರರಂಗದ ಹಿರಿಯರೆಲ್ಲಾ ನನ್ನ ನಟನೆಗೆ ಗುರುಗಳು’ ಎಂದು ಹೇಳುತ್ತಾರೆ. `ನಾನು ನಟ, ನನ್ನ ಪಾತ್ರ ನನಗೆ ಮತ್ತು ನಟನೆಗೆ ಹೆಸರು ತರುವಂತಿರಬೇಕು ಅಂತಹ ಪಾತ್ರಗಳು ಬಂದಾಗ ನನಗೆ ನಟಿಸಲು ಖುಷಿಯಾಗುತ್ತೆ’ ಎಂದು ಹೇಳುವ ಅರ್ಜುನ್‌ಗೆ, ಪ್ರತಿಯೊಬ್ಬ ನಟರನ್ನು ದೇವರಂತೆ ಭಾವಿಸುತ್ತಾರೆ. `ನನಗೆ ಚಿತ್ರರಂಗದಲ್ಲಿ ಯಾರು ಮೊಸ ಮಾಡಿಲ್ಲಾ ಎಲ್ಲರಿಂದಲೂ ಏನೋ ಒಂದನ್ನು ಕಲಿತಿದ್ದೇನೆ’ ಎಂದು ಹೇಳುವ ಈ ನಟ, ಪಾದರಸದಂತೆ ದುಡಿಯುವ ಇವರ ಶಿಸ್ತು ಮತ್ತು ಡೆಡಿಕೇಶನ್ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ, ಉತ್ತಮ ಪಾತ್ರಗಳು ಅರಸಿ ಬರಲಿ ಎಂಬುದೇ `ಚಿತ್ತಾರ’ದ ಆಶಯ.