ನೃತ್ಯದ ಮೇಲೆ ಅಪಾರ ವ್ಯಾಮೋಹವಿದ್ದ ಮೋಹನ್ ಮಾಸ್ಟರ್, ತಮ್ಮ ಬಾಲ್ಯದಿಂದಲೂ ನನಗೆ ನೃತ್ಯ ಎಂದರೇ ಇಷ್ಟ, ನಾನು ಡ್ಯಾನ್ಸ್ ಕಲಿಯಬೇಕು ಅಥವಾ ಕಲಿತುಕೊಳ್ಳುತ್ತೇನೆ ಎಂದು ಯಾವತ್ತೂ ಎಲ್ಲಿಯೂ ಯಾರ ಬಳಿಯೂ ಹೇಳಿಕೊಳ್ಳಲಿಲ್ಲ. ತಮ್ಮಲ್ಲಿಯೇ ಆ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಹುದುಗಿಸಿಟ್ಟುಕೊಂಡು ಶಿಲೆಯಂತೆ ಇದ್ದರು. ಪದವಿ ಓದುವ ಸಮಯದಲ್ಲಿ ಆ ಶಿಲೆಗೆ ಅದೆಲ್ಲಿಂದ ಜೀವ ಬಂತೋ ಗೊತ್ತಿಲ್ಲಾ.. ಆ ಕಾಲಿಗೆ ಅದೆಲ್ಲಿಂದ ಶಕ್ತಿ ಬಂದಿತೋ ಗೊತ್ತಿಲ್ಲಾ.. ಆ ದಿನದಿಂದ ಹಿಡಿದು ಈ ದಿನದವರೆಗೂ ದಣಿವಿಲ್ಲದೆ ಕುಣಿಯುತ್ತಿದೆ ಆ ಶರೀರ. ಹೀಗೆ ಕಳೆದ ಎರಡು ದಶಕಗಳಿಗೂ ಮೇಲ್ಪಟ್ಟು ಇವರು ಕನ್ನಡ ಚಿತ್ರೋದ್ಯಮದ ನೃತ್ಯ ವಿಭಾಗದಲ್ಲಿ ನಿಷ್ಠೆಯಿಂದ ತಮ್ಮ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಸುಮಾರು ಮೂರು ಸಾವಿರ ಹಾಡುಗಳಿಗೆ ನೃತ್ಯ ಸಂಯೋಜನೆ, ನೃತ್ಯ ನಿರ್ದೇಶನ ಜೊತೆಗೆ ಮೂರು ಸಾವಿರಕ್ಕೂ ಮೇಲ್ಪಟ್ಟು ಹಾಡುಗಳಿಗೆ ಸಹ ನೃತ್ಯಗಾರನಾಗಿ ನಾಟ್ಯಸೇವೆಯನ್ನು ಮಾಡಿರುವ ಛಲಗಾರ ಭಜರಂಗಿ `ಮೋಹನ್’ ಮಾಸ್ಟರ್. ಇವರು ತಮ್ಮ ವೃತ್ತಿ ಬದುಕಿನ ರೋಚಕ ದಿನಗಳ ಬಗ್ಗೆ ಚಿತ್ತಾರದೊಂದಿಗೆ ಹಂಚಿಕೊAಡಿದ್ದಾರೆ.
ಹುಟ್ಟಿದ್ದು ಬೆಂಗಳೂರಿನ ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ.. ಬೆಳೆದದ್ದು ಜ್ಞಾನಭಾರತಿಯ ಕ್ವಾಟ್ರರ್ಸ್ನಲ್ಲಿ.. ಓದಿದ್ದು ಬೆಂಗಳೂರಿನ ಮೈಸೂರು ರಸ್ತೆಯ ಅಕ್ಕ ಪಕ್ಕದ ಏರಿಯಾಗಳಲ್ಲಿ. ಇವರು ಬಿ.ಕಾಂ ಓದುತ್ತಿದ್ದಾಗ ಇವರಿಗೆ ಡ್ಯಾನ್ಸ್ ಕಲಿಯಬೇಕೆನಿಸಿತು ಆಗ ಕಲಿಯಲು ಶುರುಮಾಡ್ತಾರೆ. ಅಲ್ಲಿಯವರೆಗೂ ಇವರಿಗೆ ನಾನೊಬ್ಬ ಡ್ಯಾನ್ಸರ್ ಆಗಬೇಕು ಅನ್ನುವ ಯಾವ ಕಲ್ಪನೆಯೂ ಇರಲಿಲ್ಲಾ. ಇವರು ಮನೆಯಲ್ಲಿ ಡ್ಯಾನ್ಸ್ ಮಾಡುವುದಾಗಲಿ, ಸ್ಕೂಲ್ ಮತ್ತು ಕಾಲೇಜಿನ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಮಾಡುವುದಾಗಲೀ ಮಾಡಲಿಲ್ಲ, ಅದು ಹೋಗಲಿ ಬಿಡಿ, ಅಣ್ಣಮ್ಮ ತಾಯಿಯ ಉತ್ಸವದಲ್ಲಿ, ಬೆಂಗಳೂರಿನ ಕರಗದಲ್ಲಿ ಕುಣಿಯದ ಬೆಂಗಳೂರಿನ ಹುಡುಗರೇ ಇಲ್ಲಾ! ಆದರೇ ಈ ಮೋಹನ್‌ರವರು ಮಾತ್ರ ಎಲ್ಲೂ ಹೋಗಿ ಕುಣಿದವರಲ್ಲ.. ಎಲ್ಲೂ ಯಾರನ್ನೂ ನೋಡಿ ಪ್ರೇರಣೆಗೊಂಡವರಲ್ಲ.. ಹೀಗಿದ್ದ ಈ ಯುವಕ ನೃತ್ಯ ಲೋಕಕ್ಕೆ ಕಾಲಿಟ್ಟಿದ್ದೆ ಒಂದು ವಿಶೇಷ. ಆ ವಿಶೇಷ ಏನೆಂದರೇ ಇವರಿಗೆ ಚಿಕ್ಕಂದಿನಿಂದ ಡ್ಯಾನ್ಸ್ ಮಾಡೋದು ಅಂದ್ರೇ ಇಷ್ಟ, ಇಷ್ಟ, ಇಷ್ಟ, ಅಷ್ಟಿಷ್ಟ. ಇವರಿಗೆ ಚಿಕ್ಕಂದಿನಿಂದಲೂ ಡ್ಯಾನ್ಸ್ ಇಷ್ಟವಿದ್ದರೂ ಡ್ಯಾನ್ಸ್ ಕಲಿಯದೆ ಡ್ಯಾನ್ಸ್ ನೋಡದೆ. ಡ್ಯಾನ್ಸ್ ಮೇಲೆ ತನಗಿದ್ದ ವ್ಯಾಮೋಹವನ್ನು ಯಾರ ಬಳಿಯೂ ಹೇಳಿಕೊಳ್ಳದೆ ಸರಿಯಾದ ಸಮಯಕ್ಕಾಗಿ ಕಾಯುತಿದ್ದರು.
ನಾಲ್ಕು ಪಾಸ್‌ಪೋರ್ಟ್ ಮುಗಿದುಹೋಗಿವೆ!
ಅಣ್ಣಾವ್ರು ಬಿಟ್ಟರೇ ಬಹುಪಾಲು ಹೀರೊಗಳಿಗೆ ಕೋರಿಯೋಗ್ರಫಿ ಮಾಡಿರುವ ಮೋಹನ್ ಮಾಸ್ಟರ್, ಕಿರುತೆರೆಯ ರಿಯಾಲಿಟಿ ಶೋಗಳು, ವಿದೇಶದಲ್ಲಿ ನಡೆಯುವ ಕನ್ನಡದ `ಅಕ್ಕ’ಕಾರ್ಯಕ್ರಮ, ಹಲವು ಅವಾರ್ಡ್ ಫಂಕ್ಷನ್ಸ್, ಹೀಗೆ ನೃತ್ಯದಲ್ಲಿ ಸದಾ ಬ್ಯುಸಿಯಾಗಿರುವ ಈ ಮೋಹನ್ ಮಾಸ್ಟರ್ ಎಲ್ಲರಿಗೂ ಅಚ್ಚು ಮೆಚ್ಚಿನ ಕೋರಿಯೋಗ್ರಾಫರ್. ಇವರೆಂದರೇ ರೆಬೆಲ್ ಸ್ಟಾರ್ ಅಂಬರೀಶ್ ರವರಿಗೆ ಬಹಳ ಅಚ್ಚುಮೆಚ್ಚಂತೆ, ಇವರ ಡ್ಯಾನ್ಸ್ ಸ್ಪೀಡ್ ಅಂದ್ರೇ ಅಪ್ಪುರವರಿಗೆ ಮತ್ತು ಯಶ್‌ರವರಿಗೆ ಬಹಳ ಇಷ್ಟ. ಇವರ ಜೊತೆ ಅವರೂ ಸರಿಸಮವಾಗಿ ಕುಣಿದಾಗ ಇವರಿಗೆ ಎಲ್ಲಿಲ್ಲದ ಖುಷಿ. ಹೊಸಬರಿಗಾಗಲಿ, ಸ್ಟಾರ್‌ಗಳಿಗಾಗಲಿ ಭೇದ ಭಾವ ತೋರದೆ ಎಲ್ಲರನ್ನೂ ಹುಚ್ಚು ಉತ್ಸಾಹದಿಂದ ಡ್ಯಾನ್ಸ್ ಮಾಡಿಸುತ್ತಾ, ಹೆಚ್ಚು ಬಜೆಟ್ನ.. ಸಿನಿಮಾ ಕಡಿಮೆ ಬಜೆಟ್ನಾ.. ಸಿನಿಮಾ ಎಂದೇನೂ ಎಣಿಸದೆ ಎಲ್ಲಾ ಚಿತ್ರಗಳಿಗೂ ಮನಸಾರೆ ದುಡಿಯುತ್ತಾರೆ. ಇವರ ಮತ್ತು ಹರ್ಷ ಮಾಸ್ಟರ್ ಸ್ನೇಹಕ್ಕೆ ಎರಡು ದಶಕಗಳು ತುಂಬಿವೆ. ಚಂದನವನದ ಎಲ್ಲಾ ನೃತ್ಯ ನಿರ್ದೇಶಕರೊಂದಿಗೆ ಒಳ್ಳೆಯ ಸ್ನೇಹ ಬಾಂಧವ್ಯವನ್ನು ಹೊಂದಿರುವ ಮೋಹನ್ ಮಾಸ್ಟರ್ ಇವತ್ತಿಗೂ ಬೇಡಿಕೆಯಲ್ಲಿರುವ ನೃತ್ಯ ನಿರ್ದೇಶಕ ಮತ್ತು ಗೀತ ರಚನೆಕಾರ ಇವರ ಕೈಯಲ್ಲಿ ಸಾಹಿತ್ಯ ಕೃಷಿಯೂ ನಡೆಯುತ್ತಿದೆ. ಇಲ್ಲಿವರೆಗೂ ಇವರ ನಾಲ್ಕು ಪಾಸ್‌ಪೋರ್ಟ್ ಪುಸ್ತಕಗಳು ಮುಗಿದಿವೆ. ಅಷ್ಟು ವಿದೇಶ ಸುತ್ತಿದ್ದಾರೆ ಅಂದರೆ ಅದೆಷ್ಟು ಕುಣಿದಿರಬೇಡಾ ಆ ಕಾಲ್ಗಳು.
ನನ್ನೊಳಗಿನ ಡ್ಯಾನ್ಸರ್ ಕುಣಿಯುತ್ತಿದ್ದ
ʻನನ್ನ ಗುರುಗಳ ಮಗನಿಗೆ ಡ್ಯಾನ್ಸ್ ಕಲಿಸಬೇಕಿತ್ತು.. ಅವರ ಶಾಲೆಯಲ್ಲಿ ಡ್ಯಾನ್ಸ್ ಕಾಂಪಿಟೇಷನ್ ಇತ್ತು. ಡ್ಯಾನ್ಸ್ ಹೇಳಿಕೊಡಲು ಗುರುಗಳು ನನಗೆ ಹೇಳಿದರು. ಅಲ್ಲಿಯವರೆಗೂ ನಾನು ಒಂದು ಹೆಜ್ಜೆ ಕುಣಿದವನಲ್ಲಾ ಆವತ್ತು ನನ್ನ ಗುರುಗಳ ಮಗನಿಗೆ ನಾನು ಡ್ಯಾನ್ಸ್ ಹೇಳಿ ಕೊಟ್ಟೆ. ಆ ಶಾಲೆಯಲ್ಲಿ ನಮ್ಮ ಗುರುಗಳ ಮಗ ಮಾಡಿದ ಡ್ಯಾನ್ಸ್‌ಗೆ ಪ್ರಥಮ ಬಹುಮಾನ ಬಂತು. ನನ್ನ ಗುರುಗಳು ನನ್ನನ್ನು ಕರೆದು ನೀನು ಡ್ಯಾನ್ಸ್ ಮಾಡು ಚೆನ್ನಾಗಿ ಮಾಡ್ತೀಯಾ ಅಂದ್ರು ಅಷ್ಟೆ, ಹಾಗೆ ನನ್ನನ್ನು ಆಶೀರ್ವದಿಸಿದ ನನ್ನ ಮೊದಲ ಗುರುಗಳೇ ವಿಜಯ ರಾಘವನ್ ಸರ್. ಆವತ್ತು ನಾನು ವಿಜಯ ರಾಘವನ್ ಸರ್ ಮಗನಿಗೆ ಡ್ಯಾನ್ಸ್ ಹೇಳಿಕೊಡೋಕೆ ಹೆಜ್ಜೆ ಹಾಕೋಕೆ ಶುರು ಮಾಡಿದ್ದ ಕಾಲು ಇವತ್ತಿಗೂ ಹೆಜ್ಜೆ ಹಾಕುತ್ತಲೇ ಇದೆ. ಅಲ್ಲಿಂದ ನನ್ನ ಡ್ಯಾನ್ಸ್ ಜೀವನ ಶುರುವಾಯ್ತು. ಅದಕ್ಕೂ ಮುಂಚೆ ನಾನು ಎಲ್ಲೇ ಡ್ಯಾನ್ಸ್ ನೋಡಿದ್ರು ನಾನು ಕುಣಿತಿರಲಿಲ್ಲಾ ನನ್ನೋಳಗಿನ ಡ್ಯಾನ್ಸರ್ ಕುಣಿತಿದ್ದ. ಅದು ಪ್ರಪಂಚಕ್ಕೆ ಕಾಣಿಸುತ್ತಿರಲಿಲ್ಲ ಅದು ನನಗೆ ಮಾತ್ರ ಗೊತ್ತಾಗುತ್ತಿತ್ತು.ʼ
ಗುರುಗಳ ಕರುಣೆಯ ಭಿಕ್ಷೆ
ʻಡ್ಯಾನ್ಸ್ ಬಗ್ಗೆ ನನಗೆ ನನ್ನದೇ ಆದ ಒಂದು ಕಲ್ಪನೆ ಇತ್ತು. ನಾನು ಮತ್ತು ಡ್ಯಾನ್ಸ್ ಒಟ್ಟಿಗೆ ಜೀವಿಸುತ್ತಿದ್ದೆವು.. ನನ್ನೊಳಗೆ ಡ್ಯಾನ್ಸ್‌ನ ಹೊಸ ಹೊಸ ಕಲ್ಪನೆಗಳಿದ್ದವು. ಒಮ್ಮೊಮ್ಮೆ ಡ್ಯಾನ್ಸ್‌ನ ಸ್ಟೆಪ್‌ಗಳು ಕನಸು ಬೀಳುತ್ತಿದ್ದವು. ನನ್ನೊಳಗೆ ನಾಟ್ಯ ಬೆರೆತುಹೋಗಿತ್ತು. ಆ ನೃತ್ಯ ನನ್ನನ್ನು ನನಗೆ ಗೊತ್ತಿಲ್ಲದಂತೆ ಆವರಿಸಿಕೊಂಡಿತ್ತು. ಅದಕ್ಕೆ ಏನೋ ನನಗೆ ಡ್ಯಾನ್ಸ್ ಗೊತ್ತಿಲ್ಲದಿದ್ದರೂ ನನ್ನ ಗುರುಗಳ ಮಗನಿಗೆ ನಾನು ಡ್ಯಾನ್ಸ್ ಕಲಿಸಿಕೊಟ್ಟೆ. ಆದರೇ ನನ್ನ ಗುರುಗಳಾದ ವಿಜಯ ರಾಘವನ್ ಸರ್ ನನಗೆ ಡ್ಯಾನ್ಸ್ ಗೊತ್ತಿಲ್ಲದಿದ್ದರೂ ಅವರ ಮಗನಿಗೆ ಡ್ಯಾನ್ಸ್ ಕಲಿಸಿಕೊಡಲು ಹೇಳಿದರಲ್ಲ, ಅವರಿಗೆ ಹೇಗೆ ಗೊತ್ತಾಗಿತ್ತೋ ನನ್ನೊಳಗೆ ಒಬ್ಬ ಡ್ಯಾನ್ಸ್ರ್ ಇದ್ದಾನೆ ಅಂತಾ.. ಅವನು ಅದಾಗಲೇ ಕುಣಿಯುತ್ತಿದ್ದಾನೆ ಅಂತಾ. ಅಷ್ಟಿಲ್ಲದೆ ಹೇಳ್ತಾರಾ ಗುರುವಿನ ಗುಲಾಮನಾಗುವವರೆಗೂ ದೊರಕದಯ್ಯ ಮುಕುತಿ ಅಂತಾ.. ಆವತ್ತೆ ನನ್ನ ಗುರುಗಳು ಡ್ಯಾನ್ಸ್ ಕಲಿಯೋಕೆ ಹೇಳಿದರು ಅಲ್ಲಿಂದ ನನ್ನ ಡ್ಯಾನ್ಸ್ ಕಲಿಕೆ ಶುರುವಾಯ್ತು.ʼ
`ಭದ್ರ’ಬುನಾದಿ
ನನ್ನನ್ನು ಮೊದಲು ಇಂಡಸ್ಟಿçಗೆ ಪರಿಚಯ ಮಾಡಿಸಿದ ಡ್ಯಾನ್ಸ್ ಮಾಸ್ಟರ್ ಅಂದ್ರೇ ಭದ್ರ ಸರ್. ಅವರೇ ನನ್ನ ಮೊದಲು ಇಂಡಸ್ಟ್ರಿಗೆ ಪರಿಚಯ ಮಾಡಿಸಿದರು. ಅಲ್ಲಿಂದ ಇಲ್ಲಿಯವರೆಗೂ ನನಗೆ ಒಂದು ಹೆಜ್ಜೆ ಹಾಕೋಕೆ ಹೇಳಿಕೊಟ್ಟವರೆಲ್ಲಾ ನನ್ನ ಗುರುಗಳೇ ಎಂದು ಭಾವಿಸುತ್ತೇನೆ. ಇವತ್ತಿಗೂ ನಾನು ಶೂಟಿಂಗ್ ಸೆಟ್‌ನಲ್ಲಿ ಮಾಸ್ಟರ್ ತರ ಇರೊಲ್ಲ ಅಸಿಸ್ಟೆಂಟ್ ತರಾನೆ ಇರೋಕೆ ಇಷ್ಟಪಡ್ತೀನಿ. ನನಗೆ ಇವತ್ತು ಡ್ಯಾನ್ಸ್ ಎಲ್ಲವನ್ನೂ ಕಲಿಸಿಕೊಟ್ಟಿದೆ ಮತ್ತು ಕಲ್ಪಿಸಿಕೊಟ್ಟಿದೆ. ನನಗೆ ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಬದುಕಿಗೆ ಅಪಾರ ಗೌರವ ತಂದು ಕೊಟ್ಟಿದೆ. ಎಲ್ಲರಿಗೂ ಗೌರವ ಕೊಡುವುದನ್ನು ಹೇಳಿಕೊಟ್ಟಿದೆ. ಗೌರವ ಒಂದಿದ್ದರೇ ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಬದುಕಬಹುದು ಇದು ನನಗೆ ನೃತ್ಯ ಕಲಿಯುವಾಗ ನನ್ನ ಗುರುಗಳು ಪದೇ ಪದೇ ಹೇಳುತ್ತಿದ್ದ ಮಾತು.ʼ
ಜನ್ಮ ಸಾರ್ಥಕವಾದ ಭಾವನೆ
ʻಕೆಲವೊಂದು ಸಿನಿಮಾ ಮಾಡುವಾಗ ಒಮ್ಮೊಮ್ಮೆ ನನ್ನ ಗುರುಗಳಿಗೇ ಕೊರಿಯೊಗ್ರಫಿ ಮಾಡುವ ಅವಕಾಶ ಸಿಕ್ಕ ಸೌಭಾಗ್ಯವಂತ ನಾನು. ನಮ್ಮ ಬಾಲ್ಯದಲ್ಲಿ ನಮ್ಮನ್ನು ಕೈ ಹಿಡಿದು ನಡೆಸಿದ ಅಪ್ಪ ಅಮ್ಮನನ್ನು ಮುಪ್ಪುಗಾಲದಲ್ಲಿ ನಾವು ಕೈ ಹಿಡಿದು ನಡೆಸುವಾಗ ಸಿಗುವ ಆತ್ಮತೃಪ್ತಿ ನನ್ನ ಗುರುಗಳಿಗೆ ಕೋರಿಯೋಗ್ರಫಿ ಮಾಡುವಾಗ ಹಾಗೆ ಅನ್ನಿಸುತ್ತಿತ್ತು. ಜನ್ಮವೊಂದು ಸಾರ್ಥಕವೆನಿಸುವುದು, ಮುಪ್ಪುಗಾಲದಲ್ಲಿ ತಂದೆ ತಾಯಿಗಳಿಗೆ ನಾವು ತಂದೆ ತಾಯಾದಾಗ, ಮತ್ತು ಕಲಿಸಿದ ಗುರುಗಳಿಗೆ ನಾವು ಹೊಸತೇನೋ ಕಲಿತು ಹೇಳಿಕೊಡುವಾಗ ಅನ್ನೋದು ನನ್ನ ಅಭಿಪ್ರಾಯ. ಚಿನ್ನಿಮಾಸ್ಟರ್, ಪ್ರಭುದೇವ ಸರ್, ಮೂಗೂರು ಸುಂದರA ಸರ್, ಇನ್ನೂ ದೊಡ್ಡ ದೊಡ್ಡ ಮಾಸ್ಟರ್‌ಗಳಿಗೆ ಕೊರಿಯೋಗ್ರಫಿ ಮಾಡುವ ಸಂದರ್ಭ ಬಂದಾಗ ನನ್ನ ಜನ್ಮ ಸಾರ್ಥಕ, ನಾನೆ ಭಾಗ್ಯವಂತ ಎಂದೆನಿಸುತ್ತದೆ. ನನ್ನ ಜನ್ಮ ಸಾರ್ಥಕವಾಯಿತು ಅನ್ನಿಸುತಿತ್ತು. ಗುರುದೇವೋಭವ.ʼ ಎಂದು ತಮ್ಮ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ.