ಟಾಲಿವುಡ್ ಕಲೆಕ್ಷನ್ ಕಿಂಗ್ ಅಂತಲೇ ಮೋಹನ್ ಬಾಬು ಸಕ್ಸಸ್ ಕಂಡವರು. ದುಡಿದ ಹಣವನ್ನ ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಸಿ ಭಾರೀ ಆಸ್ತಿಪಾಸ್ತಿ ಸಂಪಾದಿಸಿದ್ದಾರೆ. ಅದಕ್ಕೆ ಈಗ ಮಕ್ಕಳ ನಡುವೆ ಸಂಘರ್ಷ ಏರ್ಪಟ್ಟಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಮಂಚು ಫ್ಯಾಮಿಲಿಯಲ್ಲಿ ಕೌಟುಂಬಿಕ ಕಲಹ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡ್ತಿದೆ. ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲು ಹತ್ತುವಂತಾಗಿದೆ.
ಚಲನಚಿತ್ರ ನಟ ಮಂಚು ಮನೋಜ್ ಮತ್ತೊಮ್ಮೆ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಕೈಯಲ್ಲಿ ಸಿನಿಮಾಗಳ ಕೊರತೆ, ಎರಡನೇ ಮದುವೆ. ಆಸ್ತಿ ವಿವಾದಗಳಿಗಾಗಿ ಸಹೋದರ ಮತ್ತು ತಂದೆಯೊಂದಿಗೆ ಜಗಳ. ಮುಂತಾದವುಗಳಿಂದ ಮಂಚು ಮನೋಜ್ ಸುದ್ದಿಯಾಗುತ್ತಲೇ ಇದ್ದಾರೆ. ಇದೆಲ್ಲದರ ನಡುವೆ ತಿರುಪತಿ ಪೊಲೀಸ್ ಠಾಣೆಯಲ್ಲಿ ಕೂರುವಂತಾಗಿದೆ.
ಪೊಲೀಸರು ವಶಕ್ಕೆ ಪಡೆಯೋದಕ್ಕೆ ಕಾರಣ, ತಂದೆ ಮೋಹನ್ ಬಾಬು ಮಗನ ಮೇಲೆ ಕೊಟ್ಟಿರೋ ಕಂಪ್ಲೇಂಟ್. ಕೌಟುಂಬಿಕ ವಿವಾದಕ್ಕೆ ಸಂಬಂಧಿಸಿದಂತೆ ಮೋಹನ್ ಬಾಬು ಸಲ್ಲಿಸಿದ ದೂರಿನ ಆಧಾರದ ಮೇಲೆಯೇ ಮಂಚು ಮನೋಜ್‌ರನ್ನ ತಿರುಪತಿಯ ನಿವಾಸದಿಂದ ವಶಕ್ಕೆ ಪಡೆದಿದ್ದು, ಭಕರಪೇಟೆ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ನಟ ಮನೋಜ್ ಭಕರಪೇಟೆ ಘಾಟ್ ರಸ್ತೆಯಲ್ಲಿರುವ ಲೇಕ್ ವ್ಯಾಲಿ ರೆಸಾರ್ಟ್ಸ್‌ನಲ್ಲಿ ತಂಗಿದ್ದರು. ರಾತ್ರಿ 11 ಗಂಟೆಗೆ ತಮ್ಮ ಗಸ್ತಿನ ಭಾಗವಾಗಿ ಎಸ್‌ಐ ರಾಘವೇಂದ್ರ ರೆಸಾರ್ಟ್‌ಗೆ ಹೋಗಿ ಮನೋಜ್‌ರನ್ನ ವಶಕ್ಕೆ ಪಡೆದಿದ್ದಾರೆಂದು ನಟ ಮನೋಜ್ ಆರೋಪಿಸಿದ್ದಾರೆ.