1962 ರಲ್ಲಿ ಬಿಡುಗಡೆಯಾದ “ಕರುಣೆಯೇ ಕುಟುಂಬದ ಕಣ್ಣು” ಚಿತ್ರ ಕಾದಂಬರಿ ಆಧಾರಿತ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ಸಂಪಾದಿಸಿದೆ. ಶೈಲಶ್ರೀ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಪಕ ಎ.ಸಿ.ನರಸಿಂಹಮೂರ್ತಿ ನಿರ್ಮಿಸಿದ ಕಪ್ಪು ಬಿಳುಪಿನ ಸಾಮಾಜಿಕ ಚಿತ್ರ.
ಟಿ.ವಿ.ಸಿಂಗ್ ಠಾಕೂರ್ ನಿರ್ದೇಶಿಸಿದ ಈಚಿತ್ರದ ಸಹ ನಿರ್ದೇಶಕರು ಎಸ್.ಕೆ. ಭಗವಾನ್.
ಖ್ಯಾತ ಕಾದಂಬರಿಕಾರ ಕೃಷ್ಣ ಮೂರ್ತಿ ಪುರಾಣಿಕರ “ಧರ್ಮದೇವತೆ” ಕಾದಂಬರಿ ಆಧಾರಿತವಾದ ಈ ಚಿತ್ರಕ್ಕೆ “ಕರುಣೆಯೇ ಕುಟುಂಬದ ಕಣ್ಣು” ಅಂತ ಹೆಸರಿಡಲಾಯಿತು. ಚಿತ್ರಕ್ಕೆ ಚಿ. ಸದಾಶಿವಯ್ಯ ಸಂಭಾಷಣೆ ನೀಡಿದರೆ, ಶಂಕಾರನಂದ ಯೋಗಿಗಳು ಗೀತರಚನೆ ಮಾಡಿದ್ದರು. ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಗಾಯಕರಾದ ಪಿ.ಬಿ. ಶ್ರೀನಿವಾಸ್ಮತ್ತು ಎಸ್. ಜಾನಕಿ ಹಾಡಿದ್ದರು. ಚಿತ್ರಕ್ಕೆ ‘ದೊರೆಭಗವಾನ್’ ಜೋಡಿಯ ಬಿ.ದೊರೈ ರಾಜ್ ಛಾಯಾಗ್ರಹಣ ನೀಡಿದ್ದರು. ಸಂಕಲನ: ವೆಂಕಟರಾಂ ಮತ್ತು ವಿ.ಎನ್.ರಘುಪತಿ ಮಾಡಿದರೆ, ಆರ್.ಬಿ.ಎಸ್. ಮಣಿ ಕಲಾಸೇವೆ ಒದಗಿಸಿದ್ದಾರೆ ಧ್ವನಿಗ್ರಹಣವನ್ನು ಇ.ಐ.ಜೀವ, ಸಿ.ಡಿ.ವಿಶ್ವನಾಥ್, ಕೆ.ಎನ್. ಷಣ್ಮುಗಂ ನೀಡಿದರೆ,
ನೃತ್ಯ ಸಂಯೋಜನೆಯನ್ನು ಎ.ಕೆ. ಛೋಪ್ರಾ ಮತ್ತು ರತನ್ ಮಾಡಿದ್ದರು. ವಸ್ತಾçಲಂಕಾರವನ್ನು ರಾಮಮೂರ್ತಿ, ಕೆ.ಎ. ರೆಹಮಾನ್ ಮತ್ತು ಮಾಣಿಕ್ಯಂ ನಿರ್ವಹಿಸಿದ್ದಾರೆ. ಪ್ರಸಾಧನವನ್ನು ನಾರಾಯಣಸ್ವಾಮಿ, ದೊರೆಸ್ವಾಮಿ ಒದಗಿಸಿದ್ದರು. ಚೆನ್ನೆನ ಎ.ವಿ.ಎಂ ಜೆಮಿನಿ ಮತ್ತು ಅರುಣಾಚಲಂ ಫಿಲಂ ಸೆಂಟರ್ ಸ್ಟುಡಿಯೊಗಳಲ್ಲಿ ಚಿತ್ರೀಕರಣವಾಗಿತ್ತು.
ಇದನ್ನೂ ಓದಿ :PRK ಪ್ರೊಡಕ್ಷನ್ ನಿಂದ ಮತ್ತೊಂದು ಸಿನಿಮಾ : ‘O2’ ಮೇಲೆ ಹೆಚ್ಚಾಯ್ತು ನಿರೀಕ್ಷೆ
ಚಿತ್ರದ ಕಥಾ ಸಾರಾಂಶ:
ಕುಣಿಗಲ್ಲಿನ sಸ್ಟಾಂಪ್ ವೆಂಡರ್ ವೆಂಕಣ್ಣ ಹಾಗೂ ಇವನ ತಮ್ಮ ರಂಗಣ್ಣ ಪರಸ್ಪರ ಅನ್ಯೋನ್ಯವಾಗಿರುತ್ತಾರೆ. ತನ್ನ ತಮ್ಮನಿಗೆ ಅಸ್ಟಿಸ್ಟೆಂಟ್ ಕ್ಯಾಷಿಯರ್ ಕೆಲಸ ಸಿಕ್ಕಿದಾಗ ವೆಂಕಣ್ಣ ತನ್ನ ಪಾಲಿನ ನಾಲ್ಕು ಎಕರೆ ಜಮೀನನ್ನು ಒತ್ತೆಯಾಗಿಟ್ಟು ಆ ಕೆಲಸ ಕೊಡಿಸುತ್ತಾನೆ. ಇದಕ್ಕೆ ಪ್ರತಿಯಾಗಿ ರಂಗಣ್ಣ ಕೂಡ ತನ್ನ ತಿಂಗಳ ಸಂಬಳದಲ್ಲಿ ತಪ್ಪದೆ ಅಣ್ಣನಿಗೆ ಸ್ವಲ್ಪ ಹಣ ಕಳುಹಿಸುತ್ತಿರುತ್ತಾನೆ. ಹಿರಿಯವನಾದ ವೆಂಕಣ್ಣನ ಹೆಂಡತಿ ಶಾಂತಮ್ಮ ಧರ್ಮದೇವತೆಯಂಥ ಹೆಣ್ಣು. ಇವರ ಮಗ ಚಂದ್ರು ವಿಧೇಯ ಸ್ವಭಾವದನಾಗಿದ್ದು, ವಿದ್ಯಾಭ್ಯಾಸದಲ್ಲಿ ಸದಾ ಮುಂದಿರುತ್ತಾನೆ. ಕಿರಿಯವನಾದ ರಂಗಣ್ಣನ ಹೆಂಡತಿ ಸುಮ ದುರಾಸೆ ಸ್ವಭಾವದವಳು. ಶ್ರೀಮಂತಿಕೆಯಿಂದ ಮೆರೆಯಬೇಕಂಬ ಹುಚ್ಚಿಗೆ ಬಿದ್ದು ಸದಾ ದುಂದುವೆಚ್ಚ ಮಾಡುತ್ತಿರುತ್ತಾಳೆ. ಇವರ ‘ಕುಮಾರ ಕಂಠೀರವ’ನೇ ಕುಮಾರ್ (ರಾಜಕುಮಾರ್) ಹುಟ್ಟಿನಿಂದ ತುಂಟ ಸ್ವಭಾವದವನು, ಜೊತೆಗೆ ಸೋಮಾರಿ. ಅಮ್ಮನ ಅತೀ ಮುದ್ದಿನಿಂದಾಗಿ ವಿದ್ಯೆಗೆ ಶರಣು ಹೇಳಿರುತ್ತಾನೆ. ದೊಡ್ಡವನಾದಂತೆ ಕೆಟ್ಟ ಹವಸ್ಯಾಗಳಿಗೆ ಬಿದ್ದು ಅಡ್ಡದಾರಿ ಹಿಡಿಯುತ್ತಾನೆ. ಇವನು ಮಾಡುವ ತಪ್ಪುಗಳಿಗೆಲ್ಲ ಅಮ್ಮನ ಬೆಂಬಲ ಸದಾ ಇರುತ್ತದೆ. ರಂಗಣ್ಣ ಹೆಂಡತಿ ಸುಮಳ ತಾಳಕ್ಕೆ ತಕ್ಕಂತೆ ಕುಣಿದು ಹತ್ತಾರು ಬಾರಿ ಜೀವನದಲ್ಲಿ ಎಡವಿ ಅಸಹಾಯಕನಾಗಿರುತ್ತಾನೆ.
ಚಪಲಚಿತ್ತಳಾದ ಸುಮಾಗೆ ಊರಿನ ಜನ ತನ್ನ ಓರಗಿತ್ತಿ ಶಾಂತಮ್ಮನಿಗೆ ಕೊಡುತ್ತಿದ್ದ ರ‍್ಯಾದೆ ಕಂಡು ಅಸಾಧ್ಯ ಕಿರಿಕಿರಿಯಾಗುತ್ತಿರುತ್ತದೆ. ಹೇಗಾದರು ಮಾಡಿ ‘ತಾನು ತನ್ನ ಗಂಡ, ಮಗ- ಸೊಸೆಯರಿಂದ ಮಾತ್ರ ಕೂಡಿದ ಒಂದು ಪ್ರತ್ಯೇಕ ಪ್ರಪಂಚ’ ನಿರ್ಮಿಸಲು ಹೊರಡುತ್ತಾಳೆ. ಇದಕ್ಕೆ ಸರಿಯಾಗಿ ರಂಗಣ್ಣನಿಗೆ ಬೇರೆ ಊರಿನಲ್ಲಿ ಕೆಲಸ ಸಿಕ್ಕಿದ್ದು ನೆಪವಾಗುತ್ತದೆ. ರಂಗಣ್ಣ, ಸುಮಾ ಮತ್ತು ಮಗ ಕುಮಾರ್ ಮೂವರು ಅಣ್ಣನ ಕುಟಂಬದಿಂದ ಬೇರೆಯಾಗುತ್ತಾರೆ. ಆಗ ಸುಮಾಳೇ ರಾಣಿ-ಅವಳದೇ ರಾಜ್ಯ! ಅವಳ ದುರಾಸೆ, ಬೇಡಿಕೆಗಳು ಮಿತಿಮೀರುತ್ತವೆ. ಅವನ್ನೆಲ್ಲ ಪೂರೈಸುವುದಕ್ಕಾಗಿ ರಂಗಣ್ಣ ಅಡ್ಡದಾರಿ ಹಿಡಿಯುತ್ತಾನೆ. ಸಹೋದ್ಯೋಗಿಯ ಪ್ರಚೋದನೆಯಿಂದ ತನಗೆ ಅನ್ನ ನೀಡುತ್ತಿದ್ದ ಸಂಸ್ಥೆ ಹಣವನ್ನೇ ದುರುಪಯೋಗಿಪಡಿಸಿಕೊಳ್ಳಲು ಆರಂಭಿಸುತ್ತಾನೆ.
ಆದರೆ ಈ ದುರ್ವ್ಯವಹಾರ ಬಹಳ ಬೇಗ ಬಯಲಾಗುತ್ತದೆ. ರಂಗಣ್ಣ ಉದ್ಯೋಗ ಕಳೆದುಕೊಳ್ಳುತ್ತಾನೆ. ಮತ್ತೆ ಅಣ್ಣನೇ ಕನಿಕರದಿಂದ ಆಶ್ರಯ ಕೊಡುವಂಥ ಪರಿಸ್ಥಿತಿ ಬರುತ್ತದೆ. ಈ ನಡುವೆ ವೆಂಕಣ್ಣನ ಮಗ ಚಂದ್ರು ತನ್ನ ಕಾಲೇಜಿನ ಸಹಪಾಠಿ ಲಾಯರ್ ಕಾಶೀಪತಿಯವರ ಮಗಳು ರಜನಿಯನ್ನು ಪ್ರೀತಿಸುತ್ತಾನೆ. ಕೆಟ್ಟದಾರಿಯಲ್ಲಿ ಅಡೆತಡೆಯಿಲ್ಲದೆ ನುಗ್ಗುತ್ತಿದ್ದ ಮಗ ಕುಮಾರನಿಗೆ, ರಂಗಣ್ಣ ಮತ್ತು ಸುಮಾ ಮದುವೆ ಮಾಡಲು ಯೋಚಿಸುತ್ತಾರೆ. ಆ ಮೂಲಕವಾದರೂ ಅವನಿಗೆ ಜೀವನದಲ್ಲಿ ಜವಾಬ್ದಾರಿ ಬರಬಹುದೆಂಬ ನಿರೀಕ್ಷೆ ಅವರದು. ಈ ಬಗ್ಗೆ ಅತ್ತಿಗೆಯ ಬಳಿ ಪ್ರಸ್ತಾಪಿಸಿದಾಗ ಅವರು ತಮ್ಮ ಮಗ ಚಂದ್ರುವಿಗೆ ತಂದುಕೊಳ್ಳಬೇಕೆಂದಿದ್ದ ನಿವೃತ್ತ ಮೇಷ್ಟç ಮಗಳು ತುಂಗಾಳ ಹೆಸರು ಹೇಳುತ್ತಾರೆ. ಎಲ್ಲರ ಸಮ್ಮತಿ ದೊರೆತು ಕುಮಾರ್- ತುಂಗಾಳ ಮದುವೆ ನೆರವೇರುತ್ತದೆ. ಆದರೆ, ಕುಮಾರ್ ಗೆ ಬೇಕಾಗಿದ್ದುದು ಮದುವೆಯಲ್ಲ!.
ಮದುವೆಯೊಂದಿಗೆ ಬಂದ ವರದಕ್ಷಿಣೆ ಮತ್ತು ಚಿನ್ನಾಭರಣ. ಹೆಂಡತಿಯ ಕೊರಳಿನಲ್ಲಿದ್ದ ಸರವವನ್ನು ಕದ್ದು ಸಿನಿಮಾ ನಿರ್ಮಿಸುವ ಹುಚ್ಚಿಗಾಗಿ ಹಾಳುಮಾಡುತ್ತಾನೆ. ಅನೇಕ ದುಶ್ಚಟಗಳು ಅವನಿಗೆ ಅಂಟಿಕೊಳ್ಳುತ್ತವೆ. ದಿನಕಳೆದಂತೆ ಕೆಟ್ಟ ಸಹವಾಸದಿಂದ ಕಣ್ಣುಗಳನ್ನು ಕಳೆದುಕೊಳ್ಳುತ್ತಾನೆ.
ಹಣ, ಐಶ್ವರ್ಯ, ಕಣ್ಣುಗಳಿದ್ದಾಗ ಹೆಂಡತಿ, ತಂದೆ, ಹಾಗೂ ಕುಟುಂಬವನ್ನೇ ಕಡೆಗಣಿಸಿದ್ದ ಕುಮಾರ್‌ಗೆ ದೃಷ್ಟಿ ಇಲ್ಲವಾದಾಗ ಹೆಂಡತಿ ತುಂಗಾಳೇ ಊರುಗೋಲಾಗುತ್ತಾಳೆ. ಅಪಾರ ವಾತ್ಸಲ್ಯ ಪ್ರೀತಿಯಿಂದ ಅವನನ್ನು ನೋಡಿಕೊಳ್ಳುತ್ತಾಳೆ. ಅವಳ ಕರುಣೆ, ಮಮತೆ, ಕುಮಾರ್‌ನ ಒಳಗಣ್ಣು ತೆರೆಸುತ್ತದೆ. ಮನಸ್ಸಿನ ಮದ ಕರಗಿ ಹೋಗುತ್ತದೆ. ಪಾಪಪ್ರಜ್ಞೆಯಿಂದ ನರಳುತ್ತಾನೆ. ಪಶ್ಚಾತ್ತಾಪದಿಂದ ಬೇಯುತ್ತಾನೆ.
ತನ್ನ ದೊಡ್ಡಪ್ಪ, ದೊಡ್ಡಮ್ಮರ ಬಾಳಿನಲ್ಲಿ ತಾನು ಎಬ್ಬಿಸಿದ್ದ ಬಿರುಗಾಳಿಗೆ ಮಮ್ಮಲ ಮರುಗುತ್ತಾನೆ. ಇದರೊಂದಿಗೆ ರಂಗಣ್ಣ, ಸುಮಾ ಇಬ್ಬರಿಗೂ ಜ್ಞಾನೋದಯವಾಗುತ್ತದೆ. ತಮ್ಮ ಸಂಸಾರದಲ್ಲಿ ಬಂದೊದಗಿದ್ದ ದುರ್ವಿಧಿಯ ದೆಸೆಯಿಂದ ಪಾಠ ಕಲಿತು. ವೆಂಕಣ್ಣ ಮತ್ತು ಶಾಂತಮ್ಮನ ಕ್ಷಮೆಯಾಚಿಸುತ್ತಾರೆ. ಕುರುಡನಾದ ಕುಮಾರ್‌ಗೆ ಹೊಸ ನೋಟ, ಹೊಸಲೋಕ ತೋರಿದ ತುಂಗಾ ‘ಧರ್ಮದೇವತೆ’ ಎನಿಸುತ್ತಾಳೆ. ಲಾಯರ್ ಕಾಶೀಪತಿಯವರ ಮಗಳು ರಜನಿಯೊಂದಿಗೆ ಚಂದ್ರುವಿನ ವಿವಾಹ ನಿಶ್ಚಯವಾಗುವುದರೊಂದಿಗೆ ಮನೆಯಲ್ಲಿ ಮೊದಲಿದ್ದ ನಗು ಮರುಕಳಿಸುತ್ತದೆ.
ಶೈಲಶ್ರೀ ಪ್ರೋಡಕ್ಷನ್ಸ್ ಸಂಸ್ಥೆಯ ಮೊದಲ ಚಿತ್ರವಿದು. ಕನ್ನಡದ ಕಾದಂಬರಿ ಆಧಾರಿತ ಮೊದಲ ಚಿತ್ರ ಕೂಡ. ಕನ್ನಡದಲ್ಲಿ ‘ಕಾದಂಬರಿ ಯುಗ’ ಆರಂಭವಾದದ್ದು ಈ ಚಿತ್ರದಿಂದಲೇ. ತಮ್ಮ ನಿರ್ಮಾಣ ಚಿತ್ರಕ್ಕೆ ಕಥೆಯನ್ನು ಹುಡುಕಿ ಹುಡುಕಿ ಬೇಸತ್ತಿದ್ದ ನಿರ್ಮಾಪಕ ಎ.ಸಿ. ನರಸಿಂಹ ಮೂರ್ತಿ ಅವರು ತಮ್ಮ ಪುತ್ರಿ ಶೈಲಜಾರ ಸಲಹೆಯ ಮೇರೆಗೆ ಕೃಷ್ಣ ಮೂರ್ತಿ ಪುರಾಣಿಕರ “ಧರ್ಮದೇವತೆ” ಕಾದಂಬರಿಯನ್ನು ಆರಿಸಿಕೊಂಡರು. ೬೧ ವರ್ಷಗಳ ಹಿಂದೆ “ಕರುಣೆಯೇ ಕುಟುಂಬದ ಕಣ್ಣು” ಚಿತ್ರದ ಚಿತ್ರೀಕರಣ ಆರಂಭಿಸಿದಾಗಲೇ ಸಾಕಷ್ಟು ಸುದ್ದಿ ಮಾಡಿತ್ತು. ಅದಾಗಲೆ ಒಂದಿಬ್ಬರು ಕಾದಂಬರಿ ಆಧರಿಸಿ ಚಿತ್ರ ತಯಾರಿಸುವ ಬಗ್ಗೆ ಯೋಚಿಸಿದ್ದರೂ ಧೈರ್ಯ ಮಾಡಿರಲಿಲ್ಲ. ಇಂಥ ಸಂದರ್ಭದಲ್ಲಿ ಎ.ಸಿ. ನರಸಿಂಹ ಮೂರ್ತಿಯವರು ತೋರಿದ ಸಾಹಸ ಹಲವರ ಕುತೂಹಲ ಕೆರೆಳಿಸಿತ್ತು. ಆರ್ಥಿಕವಾಗಿ ಸದೃಢರಾಗಿದ್ದರೂ ಎಲ್ಲೋ ಒಂದು ಕಡೆ ತಮ್ಮ ಪ್ರಯತ್ನದ ಬಗ್ಗೆ ಇದ್ದ ಅಳುಕಿನಿಂದಾಗಿ ನರಸಿಂಹಮೂರ್ತಿ ಅವರು ಪ್ರಭಾಕರರಾವ್ ಅವರನ್ನು (ಸಫೈರ್ ಮೂವೀಸ್‌ನ ವಾಸುದೇವರಾವ್ ಅವರ ಚಿಕ್ಕಪ್ಪ) ಸಹ ನಿರ್ಮಾಪಕರಾಗಿ ತೆಗೆದುಕೊಂಡರು.
ಇದನ್ನೂ ಓದಿ :ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಕೆಟ್ಟ ಸುದ್ದಿ: ಮುಂಬೈ ಇಂಡಿಯನ್ಸ್ಗೆ ಬಿಗ್ ಶಾಕ್ : Suryakumar Yadav
ಇಷ್ಟಿದ್ದೂ ಅವರ ಮನಸ್ಸಿನೊಳಗಿನ ಭಯ ಹೋಗಿರಲಿಲ್ಲ. ಏಕೆಂದರೆ ಆಗಿನ ಸಂದರ್ಭದಲ್ಲಿ ಸಿನಿಮಾ, ನಾಟಕಗಳೆಂದರೆ ‘ಪುರಾಣ, ಇತಿಹಾಸ ಇಲ್ಲವೇ ಜಾನಪದ’ ಅನ್ನುವಂತಿತ್ತು. ಇಂಥ ಹಿನ್ನೆಲೆಯಲ್ಲಿ ತನ್ನದೆ ದಾರಿಯನ್ನು ಸೃಷ್ಟಿಸಿಕೊಂಡು ನಡೆದ ಈ ಚಿತ್ರ ಬೆಂಗಳೂರಿನ ಕೆಂಪೇಗೌಡ ಹಾಗೂ ಭಾರತ್ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಯಿತು. ರಾಜ್ ಅವರು ಅದೇ ಮೊದಲ ಬಾರಿಗೆ ಆ್ಯಂಟಿ ಹೀರೋ ಆಗಿ ಕಾಣಿಸಿಕೊಂಡರು. ರಾಜ್‌ರ ಅಂದಿನ ಇಂಥ ನಿರ್ಧಾರದ ಹಿಂದೆ ಒಬ್ಬ ಕಲಾವಿದನಾಗಿ ಬೆಳೆಯುವಲ್ಲಿ ಅವರಿಗಿದ್ದ ದೂರದೃಷ್ಟಿ, ಶ್ರದ್ಧೆ ಎಂಥದೆಂಬುದು ಅರಿವಾಗುತ್ತದೆ. ಸಿಗರೇಟ್ ಸೇದುವ, ಕೆಟ್ಟದಾಗಿ ನಡೆದುಕೊಳ್ಳುವ ಅವರ ಪಾತ್ರ ಅಂದು ತುಂಬಾ ಜನಪ್ರಿಯತೆಯನ್ನು ಪಡೆಯಿತು. ಇಂಥ ನೆಗೆಟೀವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಅಂದು ಯಾರು ವಿರೋಧ ವ್ಯಕ್ತಪಡಿಸಲಿಲ್ಲ. ಇಂಥ ವೈವಿಧ್ಯಮಯ ಪಾತ್ರಗಳ ಮೂಲಕವೇ ರಾಜ್ ನಂತರದ ದಿನಗಳಲ್ಲಿ ಅಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತೆಂಬುದು ನಿಜ.
ಈ ಚಿತ್ರದ ಬಿಡುಗಡೆಯ ದಿನ ಒಂದು ಸ್ಮರಣೀಯ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಅಂದು ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರನ್ನು ಮುಖ್ಯ ಅತಿಥಿಗಳಾಗಿದ್ದ ಕನ್ನಡ ಸಾಹಿತ್ಯದ ದಿಗ್ಗಜ ಡಾ| ಡಿ.ವಿ.ಗುಂಡಪ್ಪನವರಿಂದ ಸನ್ಮಾನಿಸಲಾಯಿತು. ಅದೇ ದಿನ ಚಿತ್ರವನ್ನು ವೀಕ್ಷಿಸಿದ ಡಿ.ವಿ.ಜಿ.ಯವರು ರಾಜ್ ಅವರನ್ನು ಹಾಗೂ ಇನ್ನಿತರ ಕಲಾವಿದರು ತಂತ್ರಜ್ಞರನ್ನು ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದರು.
ಸುಮಾರು ೬೦ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜ್‌ರ ತಾಯಿಯಾಗಿ ಅಭಿನಯಿಸಿರುವ ಹಿರಿಯ ನಟಿ ಜಯಶ್ರೀ ಅವರು ರಾಜ್‌ರೊಂದಿಗೆ ಅಭಿನಯಿಸಿದ ಪ್ರಥಮ ಚಿತ್ರ ಇದಾಗಿತ್ತು. ಇದರಲ್ಲಿ ‘ದೊರೆಭಗವಾನ್’ ಜೋಡಿಯ ಎಸ್.ಕೆ.ಭಗವಾನ್ ಸಹ ನಿರ್ದೇಶಕರಾಗಿ ದುಡಿದರೆ, ದೊರೆ ಅವರು ಛಾಯಾಗ್ರಾಹಕರಾಗಿದ್ದರು. ‘ಆಶಗಾನ ಮೋಹನ’, ‘ಪ್ರೇಮಗಾನ ತಂದ ಯೌವನ’, ‘ನಿಜವೋ ಸುಳ್ಳೋ ನಿರ್ಧರಿಸಿ’ ಹಾಡುಗಳು ಅಂದು ಸಾಕಷ್ಟು ಜನಪ್ರಿಯವಾಗಿದ್ದವು.
ಚಿತ್ರದ ತಾರಾಗಣ :
ರಾಜಕುಮಾರ್, ರಾಜಾಶಂಕರ್, ಉದಯಕುಮಾರ್, ಲೀಲಾವತಿ, ಬಾಲಕೃಷ್ಣ, ನರಸಿಂಹರಾಜು, ಕೆ.ಎಸ್. ಅಶ್ವಥ್, ಹರಿಣಿ, ರಾಜಶ್ರೀ, ಜಯಶ್ರೀ, ಮಾ|| ಉದಯಶಂಕರ್.
(ಎ.ಸಿ. ನರಸಿಂಹಮೂರ್ತಿ ಅವರ ಪುತ್ರ), ಆದವಾನಿ ಲಕ್ಷ್ಮಿದೇವಿ ಪದ್ಮಾ, ಕುಪ್ಪುರಾಜ್, ವಿಜಯರಾವ್ ರಾಮನ್, ಗಣಪತಿ ಭಟ್.
ಹಾಡುಗಳು:
೧) ಬಾರಮ್ಮ ಗುರು ಸೇವೆ ಮಾಡುವ
೨) ನಿಜವೋ ಸುಳ್ಳೋ ನಿರ್ಧರಿಸಿ
೩) ನಾಗರಿಕನೆ ನಿನ್ನ ಹೃದಯದಾ ಕರೆಯೋಲೆ
೪) ಆಶಾಗಾನ ಮೋಹನ ಆಶಾಗಾನ
೫) ಪ್ರೇಮಗಾನ ತಂದ ಯೌವನ
೬) ಝಣ್ ಝಣ್ ಝಣ್ ಕಾಲಗೆಜ್ಜೆ ಝಣ್ ಝಣ್
೭) ಕರುಣೆಯೇ ಕುಟುಂಬದ ಕಣ್ಣು
____________________________________________________