ಸಿನಿಮಾ: ಮ್ಯಾಕ್ಸ್.
ನಿರ್ಮಾಣ: ಕಲೈಪುಲಿ ಎಸ್. ಧಾನು.
ನಿರ್ದೇಶನ: ವಿಜಯ್ ಕಾರ್ತಿಕೇಯ.
ಪಾತ್ರವರ್ಗ: ಕಿಚ್ಚ ಸುದೀಪ್, ಸುನಿಲ್, ವರಲಕ್ಷ್ಮಿ ಶರತ್ ಕುಮಾರ್, ಉಗ್ರಂ ಮಂಜು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ, ವಿಜಯ್ ಚಂಡೂರು ಮುಂತಾದವರು.
ಸ್ಟಾರ್: 4/5
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ತೆರೆಕಂಡಿದೆ. ‘ವಿಕ್ರಾಂತ್ ರೋಣ’ ಬಳಿಕ ಎರಡೂವರೆ ವರ್ಷದ ಗ್ಯಾಪ್‌ನ ನಂತರ ಸುದೀಪ್ ಅವರು ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಈ ಚಿತ್ರಕ್ಕೆ ಫಿಧಾ ಆಗಿದ್ದಾರಾ? ಮ್ಯಾಕ್ಸಿಮಮ್ ಮಾಸ್ ಚಿತ್ರ ‘ಮ್ಯಾಕ್ಸ್’ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾಯ್ತಾ? ಮ್ಯಾಕ್ಸ್ ವಿಮರ್ಶೆ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ UI Review: ಪ್ರೇಕ್ಷಕನನ್ನೇ ವಿಮರ್ಶೆಗೆ ಒಡ್ಡುವ ಉಪ್ಪಿ ಪ್ರಪಂಚ!
‘ಮ್ಯಾಕ್ಸ್’ ಸಿನಿಮಾದಲ್ಲಿ ಕಳ್ಳ-ಪೊಲೀಸ್ ಕಥೆ ಇದೆ. ಸಾಕಷ್ಟು ಸಿನಿಮಾಗಳಲ್ಲಿ ಪೊಲೀಸರು ಕಳ್ಳರನ್ನು ಹಿಡಿಯಲು ಪ್ರಯತ್ನಿಸುತ್ತಾರೆ. ಆದರೆ ಮ್ಯಾಕ್ಸ್ ಸಿನಿಮಾದಲ್ಲಿ, ಒಳ್ಳೆತನದ ಮುಖವಾಡ ಹಾಕಿಕೊಂಡ ಕಳ್ಳರೇ ಪೊಲೀಸರನ್ನು trap ಮಾಡಲು ಒದ್ದಾಡುತ್ತಾರೆ. ಇಲ್ಲಿ ಕಿಚ್ಚ ಸುದೀಪ್ ಅವರು ಯೂನಿಫಾರ್ಮ್ ಇಲ್ಲದ ಖಡಕ್ ಪೊಲೀಸ್ ಆಫೀಸರ್ ಪಾತ್ರವನ್ನು ಮಾಡಿದ್ದಾರೆ. ಅವರ ಜೊತೆ ಉಗ್ರಂ ಮಂಜು , ಸುಕೃತಾ ವಾಗ್ಳೆ, ಸಂಯುಕ್ತಾ ಹೊರನಾಡು, ವಿಜಯ್ ಚಂಡೂರು ಮುಂತಾದವರು ಇರುವ ಒಂದು ರಾತ್ರಿಯ ಕಥೆಯಲ್ಲಿ ಪೊಲೀಸ್ ಯೂನಿಫಾರ್ಮ್ನಲ್ಲೇ ಮಿಂಚಿದ್ದಾರೆ! ಒಂದು ಇಂಟ್ರೆಸ್ಟಿ0ಗ್ ಕಥೆಯನ್ನು ಇಟ್ಟುಕೊಂಡು ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ‘ಮ್ಯಾಕ್ಸ್’ ಸಿನಿಮಾವನ್ನು ಮ್ಯಾಕ್ಸಿಮಮ್ ಮನೋರಂಜನೆಯೊ0ದಿಗೆ ಕಟ್ಟಿಕೊಟ್ಟಿದ್ದಾರೆ.
ಮ್ಯಾಕ್ಸ್ ಕಥೆ ಚಿಕ್ಕ ಮತ್ತು ಚೊಕ್ಕವಾಗಿದೆ. ಅದೇ ಸಿನಿಮಾದ ಅಸಲಿ strength. ರಾಜಕಾರಣಿಗಳ ಮಕ್ಕಳು ಪೊಲೀಸರ ಮೇಲೆ ಕೈ ಮಾಡುತ್ತಾರೆ. ಅಂಥವರಿಗೆ ಬುದ್ಧಿ ಕಲಿಸಲು ಮ್ಯಾಕ್ಸ್ ಅಲಿಯಾಸ್ ಅರ್ಜುನ್ ಮಹಾಕ್ಷಯ್ (ಸುದೀಪ್) ಬರುತ್ತಾನೆ. ಬಂಧನಕ್ಕೆ ಒಳಗಾದ ಬಳಿಕ ರಾಜಕಾರಣಿಗಳ ಮಕ್ಕಳು ಅನುಮಾನಾಸ್ಪದವಾಗಿ ಸಾಯುತ್ತಾರೆ. ಆಗ ಇಡೀ ಪೊಲೀಸ್ ಸ್ಟೇಷನ್‌ಗೆ ಸಂಕಷ್ಟ ಶುರುವಾಗುತ್ತದೆ. ಸೇಡು ತೀರಿಸಿಕೊಳ್ಳಲು ವಿಲನ್‌ಗಳ ದಂಡು ಎಲ್ಲಾ ಬ್ರಾಂಡ್ ಕಾರ್‌ಗಳಲ್ಲಿ ಬರುತ್ತದೆ. ಅವರಿಂದ ತಪ್ಪಿಸಿಕೊಂಡು, ತಮ್ಮವರನ್ನು ಕಾಪಾಡಿಕೊಳ್ಳಲು ಮ್ಯಾಕ್ಸ್ ಪಡುವ ಮ್ಯಾಕ್ಸಿಮಮ್ ಪ್ರಯತ್ನವೇ ಚಿತ್ರದ ಒನ್‌ಲೈನ್.
‘ಮ್ಯಾಕ್ಸ್’ನಂತಹ ಕಥೆ ಸರಳವಾಗಿದ್ದರೂ, ತೆರೆಗೆ ತರುವಲ್ಲಿ ಇಡೀ ತಂಡದ ಶ್ರಮ ಮೆಚ್ಚ ಬೇಕಾದದ್ದೇ. ಸಾಕಷ್ಟು ಥ್ರಿಲ್ಲಿಂಗ್ ಅಂಶಗಳನ್ನು ಪ್ರತಿ ದೃಶ್ಯದಲ್ಲೂ ತೋರಿಸುತ್ತಾ, ಟ್ವಿಸ್ಟ್ಗಳ ಮೇಲೆ ಟ್ವಿಸ್ಟ್ ನೀಡುತ್ತಾ ಮ್ಯಾಕ್ಸ್ ರಂಜಿಸುತ್ತಾ ಹೋಗುತ್ತಾನೆ. `what next’ ಅನ್ನುವ ಕುತೂಹಲ ಚಿತ್ರದ ಆರಂಭದಿ0ದ ಕೊನೆಯವರೆಗೂ ಮುಂದುವರಿಯುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಪ್ರೇಕ್ಷಕರನ್ನು ‘ಮ್ಯಾಕ್ಸ್’ ಸಿನಿಮಾ ಎಲ್ಲಿಯೂ ಬೋಧನೆ ಮಾಡದೆ ರಂಜಿಸುತ್ತಾ ಸಾಗುತ್ತದೆ.
ರಾತ್ರಿ ಶುರುವಾಗುವ ಒಂದು ಕಿರಿಕ್ ಕಿಕ್, ಮರುದಿನ ಬೆಳಕು ಹರಿಯುವುವರೆಗೂ ಪ್ರೇಕ್ಷಕನಿಗೆ ಇರುತ್ತದೆ. ಕೆಲವೇ ಗಂಟೆಗಳ ಒಳಗೆ ಮನುಷ್ಯನ ಆಂತರಿ0ಕ ಯುದ್ಧ ಮತ್ತು ಬಹಿರಂಗ ಯುದ್ಧವನ್ನು ಅತ್ಯಂತ ಸಮರ್ಥವಾಗಿ ಚಿತ್ರ ತೆರೆದಿಡುತ್ತದೆ. ಹೊಡಿ-ಬಡಿ ಜೊತೆ, ಮೈಂಡ್ ಗೇಮ್‌ಗೂ ಇಲ್ಲಿ ಸಾಕಷ್ಟು ಸ್ಪೇಸ್ ಕೊಡಲಾಗಿದೆ. ಮ್ಯಾಕ್ಸ್ ಪರಮ ಬುದ್ಧಿವಂತ ಹೇಗೆ? ಹೇಗೆ ಒಂದೇಸಲ ಎಷ್ಟೇ ವಿಲನ್‌ಗಳು ಎದರುದಾರೂ ಎಲ್ಲರನ್ನೂ ಬಾಲೆ ದಂಡುಗಳನ್ನು ಕೊಚ್ಚಿದಂತೆ ಕೊಚ್ಚುತ್ತಾನೆ? ಎಂಬ ಪ್ರಶ್ನೆ ಕೇಳಬಾದರು. ಏಕೆಂದರೆ ಸಿನಿಮಾ ಹೆಸರೇ `ಮ್ಯಾಕ್ಸ್’. ತಲೆಗೆ ಅದು-ಇದು `ಹುಳ’ ಬಿಟ್ಟುಕೊಳ್ಳದೇ ನೋಡುತ್ತಾ ಮೈ ಮರೆಯಬೇಕು. ಇನ್ನು, `ಮ್ಯಾಕ್ಸ್’ ಬಾಯಲ್ಲಿ ಬರುವ `ತೋಳ’ದ ಕಥೆ ಕನ್ನಡಕ್ಕಿಂತ ಇತರೇ ಭಾಷೆಗಳಲ್ಲಿ ಇನ್ನಷ್ಟು effective ಆಗಿ ಕಾಣಿಸಬಹುದು. ಒಟ್ಟಾಗಿ ಸಿನಿಮಾ ತಮಿಳು ಭಾಷೆಯನ್ನೇ ತಲೆಯಲ್ಲಿಟ್ಟಿಕೊಂಡು ನಿರ್ಮಿಸಲಾಗಿದೆ ಎಂದು ಅಲ್ಲಲ್ಲಿ ಅನ್ನಿಸದಿರದು.
ಸಿನಿಮಾದಲ್ಲಿ ‘ಮ್ಯಾಕ್ಸ್’ ಹೆಚ್ಚು ಇಷ್ವಾಗುವುದು, ಅವನು ಲವ್, ರೊಮ್ಯಾನ್ಸ್, ಕಾಮಿಡಿ ಇತ್ಯಾದಿ ವಿಷಯಗಳಲ್ಲಿ ಕಾಲ ಹರಣ ಮಾಡದೇ ಟೀ-ಸಿಗರೇಟ್ ಅಷ್ಟಕ್ಕೇ ಸಮಯ ಕೊಟ್ಟು, ಉಳಿದಂತೆ ಒಂದು ಕ್ಷಣವೂ ವೇಸ್ಟ್ ಮಾಡುವುದಿಲ್ಲ. ಚಿತ್ರದ ಆರಂಭದಲ್ಲಿ ತೋರಿಸುವ ಸಿ.ಜಿ ನಿರ್ಮಿತ ಇಲಿಮರಿಯಿಂದಲೇ ಕಥೆ ನೇರವಾಗಿ ಕಥೆ ತೆರೆದುಕೊಳ್ಳುತ್ತದೆ. ಯಾವುದೇ ಟಸ್ಕು-ಪುಸ್ಕು ಅಂಶಗಳಿಗೂ ಕಥೆಯಲ್ಲಿ ಜಾಗವಿಲ್ಲ, ನೋ ವೇ! ಆರಂಭದಲ್ಲಿ ಬರುವ ಒಂದು ಸ್ಪೆಶಲ್ ಸಾಂಗ್ ಬಿಟ್ಟರೆ, ಒಮ್ಮೆ ಶುರುವಾದ ಕಥೆ ಕೊನೆವರೆಗೂ ಬುಲೆಟ್ train ಥರ ಸಾಗುತ್ತದೆ. ಇದು ಈ ‘ಮ್ಯಾಕ್ಸ್’ನ ಅತಿ ದೊಡ್ಡ ಪ್ಲಸ್ ಪಾಯಿಂಟ್. 2 ಗಂಟೆ 13 ನಿಮಿಷದಲ್ಲಿ ‘ಮ್ಯಾಕ್ಸ್’ ಮ್ಯಾಕ್ಸಿಮಮ್ ಮನರಂಜನೆ ನೀಡಿ ನೋಡುಗನಿಗೆ ಒಂದು ರಿಲೀಫ್ ಫೀಲ್ ನೀಡುತ್ತದೆ.
ಸುದೀಪ್ ಅವರು ಮ್ಯಾಕ್ಸ್ ಆಗಿ ಇಡೀ ಸಿನಿಮಾವನ್ನು ಹೊತ್ತು ಸಾಗಿದ್ದಾರೆ, ಅವರ ನಟನೆ, style ಸ್ಟೇಟ್ ಮೆಂಟ್, ಸಾಹಸ ದೃಶ್ಯಗಳು ಕಣ್ಣಿಗೆ ಹಬ್ಬ. ಇನ್ನು, ಉಗ್ರಂ ಮಂಜು ಅವರ ಉಗ್ರವಾತಾರ ಇಷ್ಟವಾಗುತ್ತದೆ. ಸುಕೃತಾ ವಾಗ್ಳೆ, ಸಂಯುಕ್ತಾ ಹೊರನಾಡು ಅವರ ಹೆಂಗರಳು ಕೆಲಸ ಮಾಡಿದೆ. ವಿಜಯ್ ಚಂಡೂರು ಕಾಮಿಡಿ ಬಿಟ್ಟು ಎಂಥಹ ಪಾತ್ರವನ್ನೂ ಲೀಲಾಜಾಲವಾಗಿ ನಿಭಾಯಿಸಬಲ್ಲರು ಎಂಬುದನ್ನು ನಿರೂಪಿಸಿದ್ದಾರೆ. ಅಮ್ಮನಾಗಿ ಸುಧಾ ಬೆಳವಾಡಿ screen ಮೇಲೆ ಇನ್ನಷ್ಟು ಹೊತ್ತು ಇರಬೇಕಿತ್ತು ಎಂದೆನಿಸುತ್ತದೆ. ಸುನಿಲ್, ಶರತ್ ಲೋಹಿತಾಶ್ವ, varalakshmi ಶರತ್ ಕುಮಾರ್, pramod ಶೆಟ್ಟಿ, ಕೊಟ್ಟ ಅವಕಾಶವನ್ನು ಉಪಯೋಗಿಸಿಕೊಂಡಿದ್ದಾರೆ.
ಅಜನೀಶ್ ಲೋಕನಾಥ್ ಅವರ ಸಂಗೀತ, ಶೇಖರ್ ಚಂದ್ರ ಅವರ ಛಾಯಾಗ್ರಹಣ ಸೂಪರ್. ಎಡಿಟರ್ ಗಣೇಶ್ ಬಾಬು ಮುಲಾಜಿಲ್ಲದೆ ಕತ್ತರಿ ಪ್ರಯೋಗ ಮಾಡಿರೋದು ಮೊದಲ ಇಪ್ಪತ್ತು ನಿಮಷದಲ್ಲೇ ಗೊತ್ತಾಗಿ ಬಿಡುತ್ತದೆ. costume ಡಿಸೈನರ್‌ಗೆ ಒಂದೇ ರಾತ್ರಿಯ ಕಥೆಯಾಗಿದ್ದರಿಂದ ಕೆಲಸ ಸುಲಭ ಅನ್ನಿಸಬಹುದು, ಆದರೆ ಸಿನಿಮಾದ ಒಳ ಹೊಕ್ಕವರಿಗೆ ಮಾತ್ರ `ಕಂಟ್ಯೂನಿಟೀ’ಯ ಕಷ್ಟದ ಅರಿವಾಗಬಹುದು. ಚೇತನ್ ಡಿಸೋಜಾ, ಕೆವಿನ್ ಕುಮಾರ್ ಅವರ ನಿರ್ದೇಶನದ ಸಾಹಸ ದೃಶ್ಯಗಳು ಮೈ ಜುಂ ಅನ್ನಿಸುತ್ತದೆ. ಮಾಸ್ ಕಮರ್ಷಿಯಲ್ ಸಿನಿಮಾ ಆದ್ದರಿಂದ ಎಲ್ಲ ಕಡೆಯಲ್ಲೂ ಲಾಜಿಕ್ ಹುಡುಕದೆ ಚಿತ್ರಕಥೆಯ ಮ್ಯಾಜಿಕ್ ಅನ್ನು ಎಂಜಾಯ್ ಮಾಡುತ್ತಾ ಹೋದರೆ ಸಿನಿಮಾ ಆವರಿಸಿಕೊಳ್ಳುತ್ತದೆ.
ಕೊನೆಯಲ್ಲಿ: ಯು.ಐ ರಿಲೀಸ್ ನಂತರ ಮ್ಯಾಕ್ಸ್ ರಿಲೀಸ್ ಆಗಿದ್ದು ಚಿತ್ರತಂಡಕ್ಕೆ ಸಾಕಷ್ಟು ಪ್ಲಸ್ ಆಗಲಿದೆ. ಏಕಂದರೆ ಓವರ್ ಡೋಸ್ ನಂತರ ಒಂದು ಸಿಂಪಲ್ ಲಿಂಬೆಹುಳಿ ಶರಬತ್ತು ಸಾಕಷ್ಟು ಅಪ್ಯಾಯಮಾನವಾಗಿರುತ್ತದೆ!