ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಈಗ ಕೆಲವೇ ಗಂಟೆಗಳು ಬಾಕಿ. ಸೆಪ್ಟೆಂಬರ್ 28ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಬಾರಿ ಶೋ ಅದ್ದೂರಿಯಾಗಿ ಆರಂಭವಾಗಲಿದೆ. ಪ್ರತೀ ಬಾರಿಯೂ ಶೋಗೆ ಹೊಸ ತಂತ್ರ ಬಳಸುವ ವಾಹಿನಿ, ಈ ಬಾರಿ “ಮಾಸ್ಕ್ ಮ್ಯಾನ್” ಮೂಲಕ ಕುತೂಹಲ ಮೂಡಿಸಿತ್ತು.

ಮಾಸ್ಕ್ ಧರಿಸಿದ ವ್ಯಕ್ತಿ “ನಾನು ಬಿಗ್ ಬಾಸ್ ಮನೆಗೆ ಹೋಗುತ್ತಿದ್ದೇನೆ” ಎಂದು ಘೋಷಿಸಿದರೂ, ಧ್ವನಿ ಬದಲಾಯಿಸಿದ್ದರಿಂದ ಗುರುತಿಸಲು ಸಾಧ್ಯವಾಗಲಿಲ್ಲ. ಆದರೂ, ಬಿಗ್ ಬಾಸ್ ಅಭಿಮಾನಿಗಳ ತೀಕ್ಷ್ಣ ಗಮನ ತಪ್ಪಲಿಲ್ಲ. ವಿಡಿಯೋದಲ್ಲಿದ್ದ ಟ್ಯಾಟೂ ಕ್ಲೂ ಆ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಿದೆ.
ಫ್ಯಾನ್ಸ್ ಹೇಳುವುದೇನಂದರೆ – ಆ ಮಾಸ್ಕ್ ಮ್ಯಾನ್ ಬೇರೆ ಯಾರೂ ಅಲ್ಲ, ‘ಟಗರು’ ಚಿತ್ರದ ಮೂಲಕ “ಕಾಕ್ರೋಚ್ ಸುಧಿ” ಹೆಸರಿನಿಂದ ಜನಪ್ರಿಯರಾದ ನಟ ಸುದೀರ್. ಅವರ ಟ್ಯಾಟೂಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು, ವೀಕ್ಷಕರು ತಕ್ಷಣವೇ ಅವರನ್ನು ಗುರುತಿಸಿದ್ದಾರೆ.
ಹೆಚ್ಚು ಕುತೂಹಲಕರ ವಿಷಯವೇನೆಂದರೆ, ಕೆಲ ದಿನಗಳ ಹಿಂದೆ ಸುದೀರ್ ಸ್ವತಃ “ನನಗೆ ಹೊರಗಿನ ಕಮಿಟ್‌ಮೆಂಟ್‌ಗಳು ಇದ್ದು, ಬಿಗ್ ಬಾಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದ್ದರು. ಈ ಮೂಲಕ ಸುದ್ದಿಯನ್ನು ಫೇಕ್ ಎಂದು ತಳ್ಳಿ ಹಾಕಿದ್ದರು. ಆದರೆ, ಇದೀಗ ಫ್ಯಾನ್ಸ್ ಅಂದಾಜು ಸತ್ಯವಾಗಿದ್ದು, ಅವರು ಬಿಗ್ ಬಾಸ್ ಮನೆಯಲ್ಲಿ ಪ್ರವೇಶಿಸುತ್ತಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ.
‘ಕಾಕ್ರೋಚ್ ಸುಧಿ’ ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ, ‘ಟಗರು’ ಸಿನಿಮಾದಲ್ಲಿನ ಅವರ ಪಾತ್ರವೇ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಅದೇ ಪಾತ್ರದ ಹೆಸರೇ ಇಂದಿಗೂ ಅವರಿಗೊಂದು ಪರ್ಮನೆಂಟ್ ಟ್ಯಾಗ್ ಆಗಿದೆ.
ಈಗ ಎಲ್ಲರಿಗೂ ಕುತೂಹಲ ಒಂದೇ – ಬಿಗ್ ಬಾಸ್ ಮನೆಗೆ ಕಾಲಿಟ್ಟ ನಂತರ “ಕಾಕ್ರೋಚ್ ಸುಧಿ” ಯಾವ ರೀತಿಯ ಆಟ ಆಡಲಿದ್ದಾರೆ?
ಇದಕ್ಕೆ ಉತ್ತರ ಸಿಗುವುದು ಸೆಪ್ಟೆಂಬರ್ 28ರ ಎಪಿಸೋಡ್‌ನಲ್ಲಿ!
