Sandalwood Leading OnlineMedia

‘ಮರ್ಯಾದೆ ಪ್ರಶ್ನೆ’ಗೆ ಕಿಚ್ಚ ಸಾಥ್ ಹದಿನಾರು ಪ್ರತಿಭಾವಂತ ನಿರ್ದೇಶಕರಿಗೆ ವೇದಿಕೆಯಾದ `ಮರ್ಯಾದೆ ಪ್ರಶ್ನೆ’ ಚಿತ್ರ ತಂಡ

ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ ‘ಮರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರನ್ನು ಅಭಿನಯ ಚಕ್ರವರ್ತಿ ‘ಕಿಚ್ಚ ಸುದೀಪ್’ ಬಿಡುಗಡೆ ಮಾಡಿ “ಟ್ರೇಲರ್ ನನಗೆ ತುಂಬಾ ಇಷ್ಟವಾಯಿತು. ಸಾಕಷ್ಟು ವಿಚಾರ ತಿಳಿಸಿಯೂ ಕೂಡ ಕುತೂಹಲ ಹುಟ್ಟಿಸುವಂತೆ ಟ್ರೇಲರ್ ಕಟ್ ಮಾಡಿರುವುದು ನನಗೆ ಹಿಡಿಸಿತು. ಈ ಸಿನಿಮಾದಲ್ಲಿ ವಿಭಿನ್ನತೆ ಇದೆ. ಎಲ್ಲಾ ವಿಭಾಗಗಳ ಕೆಲಸವು ಅದ್ಭುತವಾಗಿದೆ. ಕನ್ನಡ ಇಂಡಸ್ಟ್ರಿ ನಡೆಯುತ್ತಿರುವ ದಾರಿಯ ಬಗ್ಗೆ ನನಗೆ ಹೆಮ್ಮೆ ಇದೆ” ಎಂದರು. ಇದೇ ನವೆಂಬರ್ ೨೨ಕ್ಕೆ ಬಿಡುಗಡೆಗೆ ಸಜ್ಜಾಗಿರುವ ‘ಮರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಸುಮಾರು 300ಕ್ಕೂ ಅಧಿಕ ಆರ್‌ಜೆಗಳು, ಗಾಯಕರು, ನಟನಟಿಯರು, ಡಾಕ್ಟರ್‌ಗಳು, ಲಾಯರ್ಗಳು, ಉದ್ಯಮಿಗಳು ಸಿನಿಮಾದ ಟ್ರೇಲರ್ ಮೆಚ್ಚಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮರ್ಯಾದೆ ಪ್ರಶ್ನೆ ಚಿತ್ರಕ್ಕೆ ಯುವ ನಿರ್ದೇಶಕರ ಬೆಂಬಲ: ಹೊಸ‌ ಅಲೆಯ ಕನ್ನಡ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಕನ್ನಡದ ಯುವ ನಿರ್ದೇಶರಾದ ಶಶಾಂಕ್ ಸೋಘಲ್, ಸಿಂಧು ಶ್ರೀನಿವಾಸ್ ಮೂರ್ತಿ, ನಿತಿನ್ ಕೃಷ್ಣಮೂರ್ತಿ, ಉಮೇಶ್ ಕೆ ಕೃಪಾ, ರಾಮೇನಹಳ್ಳಿ ಜಗನ್ನಾಥ, ಶ್ರೀನಿಧಿ ಬೆಂಗಳೂರು, ಸಂದೀಪ್ ಸುಂಕದ, ಚಂದ್ರಜಿತ್ ಬೆಳ್ಳಿಯಪ್ಪ, ರಾಜ್ ಗುರು ಭೀಮಪ್ಪ, ಎಂ ಭರತ್ ರಾಜ್, ಬಿ ಎಸ್ ಪಿ ವರ್ಮಾ, ಉತ್ಸವ್ ಗೊನ್ವರ್, ಜೈಶಂಕರ್ ಆರ್ಯರ್, ಸುನೀಲ್ ಮೈಸೂರು, ಅಕರ್ಶ್ ಹೆಚ್ ಪಿ, ವಿಕ್ಕಿ ವರುಣ್, ಸಾಗರ್ ಪುರಾಣಿಕ್, ಪ್ರತೀಕ್ ಪ್ರಜೋಶ್ ಮತ್ತು ಇನ್ನೂ ಹಲವರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ‘ಮರ್ಯಾದೆ ಪ್ರಶ್ನೆ’ ತಂಡಕ್ಕೆ ಶುಭ ಹಾರೈಸಿದರು. ಇಷ್ಟು ಜನ ಹೊಸ ತಲೆಮಾರಿನ ನಿರ್ದೇಶಕರು ಒಂದೆಡೆ ಸೇರಿ ಬಿಡುಗಡೆಗೆ ತಯಾರಾಗಿರುವ ‘ಮರ್ಯಾದೆ ಪ್ರಶ್ನೆ’ ಚಿತ್ರಕ್ಕೆ ಶುಭ ಹಾರೈಸಿದ್ದು ನೆರೆದಿದ್ದ ಮಾಧ್ಯಮ ಪ್ರತಿನಿಧಿಗಳ ಮನದಲ್ಲಿ ಕನ್ನಡ ಚಿತ್ರರಂಗದ ಭವಿಷ್ಯದ ಬಗ್ಗೆ ಹೊಸ ನಂಬಿಕೆ ಹುಟ್ಟುಹಾಕಿತು.

READ MORE ; Bagheera Review: ಸಾಮಾನ್ಯನೊಬ್ಬನ ಅಸಾಮಾನ್ಯ ಕಥೆ!

ಮಾತನಾಡಿದ ಚಿತ್ರದ ನಿರ್ದೇಶಕ ನಾಗರಾಜ ಸೋಮಯಾಜಿ “ತಮ್ಮ ಸುತ್ತಮುತ್ತಲಿನ ಕಥೆಗಳನ್ನ ಜನರು ತುಂಬಾ ಇಷ್ಟಪಡ್ತಾರೆ. ಅದನ್ನ ಸಿನಿಮಾ ಮಾಡುವಾಗ ತುಂಬಾ ನೈಜವಾಗಿ ಮೂಡಿ ಬಂದ್ರೆ, ನೋಡುವವರಿಗೂ ಸಹ ಹತ್ತಿರ ಅನಿಸತ್ತೆ ಅನ್ನೋದು ನನ್ನ ಅನಿಸಿಕೆ. ನಮ್ಮ ಕನ್ನಡದ ಪ್ರೇಕ್ಷಕರು ಇವತ್ತಿನ ತನಕ ಒಳ್ಳೆಯ ಸಬ್ಜೆಕ್ಟ್‌ಗಳನ್ನ ಯಾವತ್ತೂ ಬಿಟ್ಟುಕೊಟ್ಟಿಲ್ಲ‌. ಹಾಗಾಗಿಯೇ ನಮ್ಮ ಕನ್ನಡ ಸಿನಿಮಾಗಳು ಪ್ರಪಂಚದಾದ್ಯಂತ ತಲುಪೋಕೆ ಸಾಧ್ಯ ಆಗಿರೋದು. ಹಾಗೆಯೇ ಕಲಾವಿದರಿಗೆ ನಟನೆ ಹೇಳ್ಕೊಡೋದ್ರ ಬದಲು ನಮ್ಮ ಕಥೆಯ ಸಂದರ್ಭಕ್ಕೆ ಜೀವಿಸೋದನ್ನ ಅರ್ಥ ಮಾಡಿಸಿದ್ರೆ ಸಾಕು ಅವ್ರೆ ನಮನ್ನ ದಡ ಮುಟ್ಟಿಸ್ತಾರೆ” ಎಂದರು. ಚಿತ್ರದ ನಿರ್ಮಾಪಕರಾದ ಸಕ್ಕತ್ ಸ್ಟುಡಿಯೋದ ಆರ್‌ಜೆ ಪ್ರದೀಪಾ “ಸಕ್ಕತ್ ಸ್ಟುಡಿಯೋ ಹೊಸತನದ, ನೆಲಮೂಲದ, ರಿಲೇಟ್ ಆಗುವ ರಿಯಲಿಸ್ಟಿಕ್ ಕತೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ಸುಂದರವಾಗಿ ಪ್ಯಾಕೇಜ್ ಮಾಡಿ ಪ್ರಸ್ತುತಪಡಿಸುವ ಕನಸು‌ ಹೊತ್ತಿದೆ. ನಮ್ಮ ಮೊದಲ ಹೆಜ್ಜೆಯಾದ ‘ಮರ್ಯಾದೆ ಪ್ರಶ್ನೆ’ ಬಗ್ಗೆ ನಮಗೆ ತುಂಬಾ ವಿಶ್ವಾಸವಿದ್ದು, ಪ್ರತಿ ವರ್ಷ ಕನಿಷ್ಠ ಎರಡು ಇಂತಹ ಪ್ರಮಾಣಿಕ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವ ಆಶಯವಿದೆ. ಇವು ಜನತೆಯ ಮನ ತಾಕುವುದರ ಜತೆ ಚರ್ಚೆಗಳನ್ನು ಹುಟ್ಟುಹಾಕಲಿವೆ” ಎಂದರು.

READ MORE ;  Ibbani Tabbida Ileyali review: ಬೆಳ್ಳಿತೆರೆಯಲ್ಲಿ ಬೆಳ್ಳಿಯಪ್ಪ `ಮ್ಯಾಜಿಕ್’

ಬಿಡುಗಡೆಗೊಂಡು ಎಲ್ಲೆಡೆ ಉತ್ತಮ ಸ್ಪಂದನೆ ಗಳಿಸುತ್ತಿರುವ ‘ಮಾರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರನ್ನು ಈಗ ಸಕ್ಕತ್ ಸ್ಟುಡಿಯೋ ಯೂಟ್ಯೂಬ್ ಚಾನೆಲ್ಲಿನಲ್ಲಿ ವೀಕ್ಷಿಸಬಹುದು. ‘ಮರ್ಯಾದೆ ಪ್ರಶ್ನೆ’ ಚಿತ್ರದ ತಾರಾಗಣದಲ್ಲಿ ತೇಜು ಬೆಳವಾಡಿ, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪ್ರಭು ಮುಂಡ್ಕುರ್ ಇದ್ದಾರೆ. ಉಳಿದಂತೆ ಹಿರಿಯ ನಟರಾದ ನಾಗಾಭರಣ, ಪ್ರಕಾಶ್ ತುಂಭಿನಾಡು, ನಂದಗೋಪಾಲ್, ನಾಗೇಂದ್ರ ಷಾ, ರೇಖಾ ಕುಂಡ್ಲಿಗಿ, ಶ್ರವಣ್, ಹರಿಹರನ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿವೆ. ಎಲ್ಲ ಹಾಡುಗಳಿಗೆ ಅರ್ಜುನ್ ರಾಮು ರಾಗ ಸಂಯೋಜಿಸಿದ್ದು, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ರಚಿಸಿದ್ದಾರೆ. ಸಕುಟುಂಬ ಸಮೇತ, ಗೌಳಿ ಮತ್ತು ಚಾರ್ಲಿ ಸಿನಿಮಾಗೆ ಕೆಲಸಮಾಡಿರುವ ಸಂದೀಪ್ ವೆಲ್ಲುರಿ ಈ ಸಿನಿಮಾದ ಛಾಯಾಗ್ರಾಹಕರು. ಈಗಾಗಲೇ ಲೂಸ್ ಕನೆಕ್ಷನ್, ಹನಿಮೂನ್ ವೆಬ್ ಸೀರೀಸ್ಗಳನ್ನು ನಿರ್ಮಿಸಿ ಸದ್ದು ಮಾಡಿದ್ದ ಆರ್‌ಜೆ ಪ್ರದೀಪಾ ಅವರ ‘ಸಕ್ಕತ್ ಸ್ಟೂಡಿಯೋ’ ಈ ಚಿತ್ರವನ್ನು ನಿರ್ಮಿಸಿದೆ. ಪ್ರದೀಪಾ ಅವರೇ ಬರೆದ ಕಥೆಗೆ ನಾಗರಾಜ ಸೋಮಯಾಜಿ ಅವರ ಚಿತ್ರಕತೆ, ಸಂಭಾಷಣೆ, ನಿರ್ದೇಶನವಿದೆ. ‘ಮರ್ಯಾದೆ ಪ್ರಶ್ನೆʼ ನವೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

 

 

 

 

 

Share this post:

Translate »