’ಪೊಗರು’ ಸಿನಿಮಾದ ಸಕ್ಸಸ್ ಒಗರು ಆರುವ ಮುನ್ನವೇ ನಟ ಧ್ರುವ ಸರ್ಜಾ, ‘ಮಾರ್ಟಿನ್’ ಸಿನಿಮಾವನ್ನು ಓ.ಕೆ ಮಾಡಿದ್ದರು. ಎಪಿ ಅರ್ಜುನ್ ಇದರ ಡೈರೆಕ್ಟರ್ ಎಂದು ಗೊತ್ತಾದಾಗ ಸಹಜವಾಗಿಯೇ ಡಬಲ್ ‘ಅದ್ಧೂರಿ’ ತನದ ನಿರೀಕ್ಷೆ ಇತ್ತು. ಇದೀಗ ‘ಮಾರ್ಟಿನ್’ ಅದ್ದೂರಿಯಾಗಿಯೇ ಎಂಟ್ರಿ ಕೊಟ್ಟಿದ್ದಾನೆ. ಹಾಗಿದ್ರೆ ಮಾರ್ಟಿನ್ ಖದರ್ ಹೇಗಿದೆ?
ಚಿತ್ರದ ಕಥೆ ಹೇಳುವುದಾದ್ರೆ, ಪಾಕ್ನಲ್ಲಿ ಇಂಡಿಯನ್ ಒಬ್ಬ (ಧ್ರುವ ಸರ್ಜಾ) ಸೆರೆಯಾಗುತ್ತಾನೆ. ಗಾಯಗೊಂಡಿರುವ ಅವನಿಗೆ ಅಲ್ಲಿನ ಮಿಲಿಟರಿ ಪಡೆ ಚಿಕಿತ್ಸೆ ನೀಡಿ, ನಂತರ ಬಂಧಿಸುತ್ತದೆ. ಆದರೆ ಅಮ್ನೇಶಿಯಾದಿಂದಾಗಿ ಆತನಿಗೆ ತಾನು ಯಾರೆಂಬುದೇ ಗೊತ್ತಿರುವುದಿಲ್ಲ. ತನ್ನ ಗುರುತನ್ನು ತಾನೇ ಪತ್ತೆ ಮಾಡುವ ದೊಡ್ಡ ಸವಾಲು ಆತನಲ್ಲಿ ಹುಟ್ಟಿಕೊಳ್ಳುತ್ತದೆ. ಇಂತಹ ಮಿ.ಘಜನೀಷ್ಗೆ ಫೈಟ್ ಎಂದರೆ ಗೋಲಿ ಆಟದಷ್ಟು ಸಲೀಸು. ಆತನಿಗೆ ತಾನು ಯಾರೆಂಬುದೇ ದೊಡ್ಡ ಪ್ರಶ್ನೆ! ಅಂತಿಮವಾಗಿ ಆತನಿಗೆ ಉತ್ತರ ಸಿಗುತ್ತದಾ? ‘ಮಾರ್ಟಿನ್’ ಯಾರು? ಉತ್ತರಕ್ಕೆ ಸಿನಿಮಾ ನೋಡಿ.
ನಟ ಧ್ರುವ ಸರ್ಜಾ ಅವರನ್ನು ‘ಆ್ಯಕ್ಷನ್ ಪ್ರಿನ್ಸ್’ ಎಂಬುವುದನ್ನು ನಿರ್ದೇಶಕರು ಮತ್ತೆ ಮತ್ತೆ ಪ್ರೂವ್ ಮಾಡುತ್ತಲೇ ಹೋಗುತ್ತಾರೆ.
ಅವು ಒಂದಕ್ಕಿಂತ ಒಂದು ಮಾಸ್ ಆಗಿದ್ದು ನೋಡುಗನ ಕಾಸ್ ವಾಪಾಸ್ ಆಗುತ್ತಿದೆ. ಜೊತೆಗೆ ಚೇಸಿಂಗ್ ಸೀನ್ಸ್ ಹಾಲಿವುಡ್ಗೆ ಟಕ್ಕರ್ ನೀಡಿದೆ. ಚಿತ್ರಕ್ಕೆ ನಿರ್ಮಾಪಕ ಉದಯ್ ಮೆಹ್ತಾ ದುಡ್ಡು ಖರ್ಚು ಮಾಡಿಲ್ಲ, ಸುರಿದಿದ್ದಾರೆ! ಸುರಿದ ದುಡ್ಡಿಗೆ ತಕ್ಕುದಾದ ಸಿಜಿ, ವಿಎಫ್‌ಎಕ್ಸ್ ಗುಣಮಟ್ಟ ಇದೆಯಾ? ನಿರ್ದೇಶಕರು ಧ್ರುವ ಸರ್ಜಾ ಮತ್ತು ಮೇಕಿಂಗ್ ಕಡೆಗೆ ಹೆಚ್ಚಿನ ಗಮನ ನೀಡಿದ್ದಾರೆ.
ಇನ್ನು, ನರೇಶನ್ ವಿಚಾರಕ್ಕೆ ಬರೋದಾದ್ರೆ, ನಿರ್ದೇಶಕರು ಇಂದಿನ ‘ಸ್ಪೀಡ್ ಜನರೇಶನ್’ಗೆ ತಕ್ಕುದಾದ ಸ್ಪೀಡ್ ಆಗಿ ನರೇಟ್ ಮಾಡಿದ್ದಾರೆ. ಪಸ್ಟ್ ಹಾಫ್ ಸರಕ್.. ಅಂತ ಮುಗಿದು ಬಿಡುತ್ತದೆ. ನಟ ಅರ್ಜುನ್ ಸರ್ಜಾ ಬರೆದಿರುವ ಕಥೆ-ಚಿತ್ರಕಥೆಯಲ್ಲಿ ಬೇರೆ ಸಿನಿಮಾಗಳ ಛಾಯೆ ಇದ್ದರೆ ತಪ್ಪೇನಿಲ್ಲ ಬಿಡಿ!
ತಮ್ಮ ಸಾಕಷ್ಟು ಚಿತ್ರಕ್ಕೆ ಹರಿಕೃಷ್ಣ ಅವರ ಸಂಗೀತದ ಮೂಲಕ ಸೂಪರ್ ಹಿಟ್ ಹಾಡುಗಳನ್ನಿ ನೀಡಿದ್ದ ನಿರ್ದೆಶಕ ಅರ್ಜುನ್, ಮಾರ್ಟಿನ್ನಲ್ಲಿ ಮಣಿಶರ್ಮಾ ಸಂಗೀತದ ಮೂಲಕ ಮತ್ತೆ ಮ್ಯಾಜಿಕ್ ಮಾಡಿದ್ದಾರೆ. ಆದರೆ ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತದಲ್ಲಿ ಅವರದೇ ಹಿಂದಿನ ಸಿನಿಮಾ ಅಲ್ಲಲ್ಲಿ ನೆನಪಾಗುತ್ತದೆ. ಸತ್ಯ ಹೆಗಡೆ ಛಾಯಾಗ್ರಹಣ ನಿಜಕ್ಕೂ ಮಾರ್ಟಿನ್ನ ಶಕ್ತಿ. ಸಂಭಾಷಣೆಗಳಿಗೆ ಇನ್ನಷ್ಟು ಒತ್ತು ನೀಡಬೇಕಿತ್ತು.
‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರಿಗೆ ಒಂದೇ ಸಿನಿಮಾದಲ್ಲಿ ಬೇರೆ ಬೇರೆ ರೀತಿಯ ಶೇಡ್‌ಗಳಲ್ಲಿ ನಟಿಸುವ ಅದ್ಭುತ ಅವಕಾಶವನ್ನು ಅರ್ಜುನ್ ಕಲ್ಪಿಸಿದ್ದಾರೆ. ಸಿಕ್ಕ ಅವಕಾಶವನ್ನು ಅವರು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಆಕ್ಷನ್ ನೋಡಿದ್ರೆ, ಧ್ರುವಾ ಸಿನಿಮಾಗಾಗಿಯೇ ಜನ್ಮವೆತ್ತಿದ್ದಾರೆ ಎಂದು ಭಾಸವಾಗುತ್ತದೆ.
ನಾಯಕಿ ವೈಭವಿ ಶಾಂಡಿಲ್ಯಗೆ ಸಿಕ್ಕ ಅವಕಾಶವನ್ನಿ ಶಾನೆ ಟಾಪಾಗೇ ಬಳಸಿಕೊಂಡಿದ್ದಾರೆ. ಚಿಕ್ಕಣ್ಣನವರ ಚಿಕ್ಕ ಪಾತ್ರಕ್ಕೆ ಧಮ್ಮಿಲ್ಲ. ನಿರ್ದೆಶಕರ ಅನ್ವೇಶಿ ಜೈನ್ ಅನ್ವೇಷಣೆ ವರ್ಕೌಟ್ ಆಗಿದೆ. ಭೂಮಿ ಶೆಟ್ಟಿ, ಸುಕೃತಾ ವಾಗ್ಳೆ, ಪ್ರತಾಪ್ ನಾರಾಯಣ್, ಅಚ್ಯುತ್ ಕುಮಾರ್ ಹೀಗೆ ಅನೇಕರು ಈ ಸಿನಿಮಾದಲ್ಲಿ ಎಂಟ್ರಿಕೊಟ್ಟು ಎಗ್ಸಿಟ್ ಆಗುತ್ತಾರೆ. ಅಚ್ಯುತ್ ಅವರು ಆ ಪಾತ್ರವನ್ನಿ ಒಪ್ಪಿಕೊಂಡಿದ್ದೇ ಸೋಜಿಗ. ವಿಭಿನ್ನ ಶೇಡ್‌ಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿರುವ ಧ್ರುವ ಸರ್ಜಾ ಇಡೀ ಮಾರ್ಟಿನ್ನ ಜೀವಾಳ. ಒಟ್ಟಿನಲ್ಲಿ, ದೇಶಾಭಿಮಾನರ ಕಥೆಯೊಂದನ್ನು ಮಾಸ್ ರೂಪದಲ್ಲಿ ತರೆಗೆ ತಂದಿರುವ ಇಡೀ ಚಿತ್ರತಂಡದ ಶ್ರಮ ಶ್ಲಾಘನೀಯ.