Sandalwood Leading OnlineMedia

ಸದ್ದುಮಾಡುತ್ತಿದೆ ಆಕ್ಷನ್ ಕ್ವೀನ್ ಮಾಲಾಶ್ರೀ ಪ್ರಮುಖಪಾತ್ರದಲ್ಲಿ ನಟಿಸಿರುವ “ಮಾರಕಾಸ್ತ್ರ” ಚಿತ್ರದ ಟೀಸರ್

ಆಕ್ಷನ್ ಕ್ವೀನ್ ಮಾಲಾಶ್ರೀ ಪ್ರಮುಖಪಾತ್ರದಲ್ಲಿ ನಟಿಸಿರುವ “ಮಾರಕಾಸ್ತ್ರ” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಮಾಲಾಶ್ರೀ ಅವರೆ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ನನಗೆ ಧನಕುಮಾರ್‌ ಮಾಸ್ಟರ್ ಮೂಲಕ ಈ ತಂಡದ ಪರಿಚಯವಾಯಿತು. ನಿರ್ದೇಶಕ ಗುರುಮೂರ್ತಿ ಸುನಾಮಿ‌ ಅವರು ಹೇಳಿದ ಕಥೆ ಇಷ್ಟವಾಯಿತು. ನಾನು ಈ ಚಿತ್ರ ಒಪ್ಪಕೊಳ್ಳಲು ನಿರ್ದೇಶಕರೆ ಕಾರಣ. ಏಕೆಂದರೆ ಅವರು ವಿಕಲ ಚೇತನರಾಗಿದ್ದರು ಕೂಡ, ಅವರಲ್ಲಿರುವ ಸಿನಿಮಾ ಪ್ರೀತಿ ಕಂಡು ಸಂತೋಷವಾಯಿತು. ಮೊದಲು ಹನ್ನೊಂದು ದಿನಗಳ ಕಾಲ ನನ್ನ ಚಿತ್ರೀಕರಣ ಎಂದು ನಿಗದಿಯಾಗಿತ್ತು. ಆನಂತರ ಒಟ್ಟು ಅರವತ್ತು ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ನಾಲ್ಕು ಸಾಹಸ ಸನ್ನಿವೇಶಗಳಿದೆ. ನಾನು ಆಕ್ಷನ್ ಕ್ವೀನ್ ಎಂದು‌ ಕರೆಸಿಕೊಳ್ಳಲು‌ ಥ್ರಿಲ್ಲರ್ ಮಂಜು ಮಾಸ್ಟರ್ ಪ್ರಮುಖ ಕಾರಣ. ಅವರ ಜೊತೆಗೆ ಈ ಚಿತ್ರದಲ್ಲೂ ಕೆಲಸ ಮಾಡಿದ್ದು ಖುಷಿಯಾಗಿದೆ . “ಮಾರಕಾಸ್ತ್ರ” ಚಿತ್ರದ ಸಾಹಸ ಸನ್ನಿವೇಶಗಳು ನನ್ನ ಹಿಂದಿನ “ಚಾಮುಂಡಿ”, ” ಶಕ್ತಿ” ಮುಂತಾದ ಚಿತ್ರಗಳ ಸಾಹಸ ಸನ್ನಿವೇಶಗಳನ್ನು ನೆನಪಿಸಿತು. ಇದರಲ್ಲಿ ನನ್ನದು ಪೊಲೀಸ್ ಅಧಿಕಾರಿಯ ಪಾತ್ರ ಎಂದರು ನಟಿ ಮಾಲಾಶ್ರೀ.

ಇದನ್ನೂ ಓದಿ:  ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ನಿರ್ಮಾಣದ ಚಿತ್ರಕ್ಕೆ `ಫೈರ್ ಫ್ಲೈ’ಟೈಟಲ್ ಫಿಕ್ಸ್; `ಬೆಳಕಿನಾಚೆಯ ಬೆಳಕಿನ’ ಹುಡುಕಾಟದಲ್ಲಿ ವಂಶಿ!

ನಾನು ಮೂಲತಃ ಬಳ್ಳಾರಿಯವನು. ಇದು ನನ್ನ ಮೊದಲ ಚಿತ್ರ. ಪ್ರಥಮ ಚಿತ್ರದಲ್ಲೇ ಮಾಲಾಶ್ರೀ ಅವರಿಗೆ ಆಕ್ಷನ್ ಕಟ್ ಹೇಳುತ್ತೀನಿ ಅಂದುಕೊಂಡಿರಲಿಲ್ಲ. “ಮಾರಕಾಸ್ತ್ರ” ಒಂದು ಕೌಟುಂಬಿಕ ಚಿತ್ರ‌. ಇದರಲ್ಲಿ ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ . ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಗುರುಮೂರ್ತಿ ಸುನಾಮಿ ತಿಳಿಸಿದರು.

 

ಇದನ್ನೂ ಓದಿ:ರಾಜಕೀಯರಂಗಕ್ಕೆ ವಿಜಯ್ ಎಂಟ್ರಿ; ಅಣ್ಣಾಮಲೈ ಜನಪ್ರಿಯತೆಗೆ ಅಡ್ಡಿಯಾಗ್ತಾರಾ ದಳಪತಿ?

“ಮಾರಕಾಸ್ತ್ರ” ಚಿತ್ರದ ಕಥೆ ಚೆನ್ನಾಗಿದೆ. ಚಿತ್ರದ ಹಾಡು ಹೇಳುವುದಕ್ಕೆ ಹೋದ ನಾನು ನಿರ್ಮಾಪಕನಾದೆ. ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದೇನೆ. ನನಗೆ ನನ್ನ ದೇಶದ ಮೇಲೆ ಅಭಿಮಾನ ಹೆಚ್ಚು. ಹಾಗಾಗಿ ಈ ಚಿತ್ರದ ಹಾಡೊಂದರ ಚಿತ್ರೀಕರಣವನ್ನು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಸುಮಾರು ಮೂವತ್ತೆರಡು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಸದ್ಯದಲ್ಲೇ ಹಾಡನ್ನು ಬಿಡುಗಡೆ ಮಾಡುತ್ತೇವೆ ಎಂದರು ನಿರ್ಮಾಪಕ ನಟರಾಜ್.
ಈ ಚಿತ್ರದಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ತಮ್ಮ ಪಾತ್ರದ ಬಗ್ಗೆ ಹರ್ಷಿಕಾ ಪೂಣಚ್ಛ ಹೇಳಿದರು. ಚಿತ್ರದಲ್ಲಿ ನಟಿಸಿರುವ ಆನಂದ್ ಆರ್ಯ(ನಾಯಕ), ಭರತ್ ಸಿಂಗ್, ಉಗ್ರಂ ಮಂಜು, ನಿರ್ಮಾಪಕಿ ಕೋಮಲ ನಟರಾಜ್, ಕ್ರಿಯೇಟಿವ್ ಹೆಡ್ ಧನಕುಮಾರ್, ಕಾರ್ಯಕಾರಿ ನಿರ್ಮಾಪಕ ಮಂಜುನಾಥ್ ಹಾಗೂ ಹಿನ್ನೆಲೆ ಸಂಗೀತ ನೀಡಿರುವ ಸತೀಶ್ ಬಾಬು ಮುಂತಾದವರು “ಮಾರಕಾಸ್ತ್ರ” ಚಿತ್ರದ ಕುರಿತು ಮಾತನಾಡಿದರು. ಮಂಜು ಕವಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ ಮಾಡಿದ್ದಾರೆ.

 

Share this post:

Related Posts

To Subscribe to our News Letter.

Translate »