ಇದೊಂದು ಸಸ್ಪೆನ್ಸ್, ಆಕ್ಷನ್, ಥ್ರಿಲ್ಲರ್ ಮತ್ತು ದೇಶಪ್ರೇಮವನ್ನು ತುಂಬಿಕೊAಡ ಚಿತ್ರ. ಬಹಳ ದಿನಗಳ ನಂತರ ಆಕ್ಷನ್ ಕ್ವೀನ್ ಮಾಲಾಶ್ರೀಯವರು ಮತ್ತೇ ದುರ್ಗಿಯ ಅವತಾರ ಎತ್ತಿದ್ದಾರೆ. ಒಂದು ಅಸ್ತçವನ್ನು ಪ್ರಯೋಗಿಸಿದರೇ ಆ ಅಸ್ತçವು ಯಾವಾಗ ಸಮಾಜಕ್ಕೇ ಮಾರಕವಾಗುವುದೋ ಅಥವಾ ಪೂರಕವಾಗುವುದೋ ಎಂಬ ಎಳೆಯನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ.

ಶ್ರಾವ್ಯ ಕಂಬೈನ್ಸ್ ಲಾಂಛನದಲ್ಲಿ ಶ್ರೀಮತಿ ಕೋಮಲ ನಟರಾಜರವರು ನಿರ್ಮಾಣದಲ್ಲಿ ಗುರುಮೂರ್ತಿ ಸುನಾಮಿ ರವರ ಸಾರಥ್ಯದಲ್ಲಿ ಚಿತ್ರವು ಮೂಡಿಬಂದಿದೆ. ಧನಕುಮಾರ್. ಕೆ ರವರು ಈ ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಈ ಚಿತ್ರದಲ್ಲಿ ಕನಸಿನ ರಾಣಿ, ಆಕ್ಷನ್ ಕ್ವೀನ್, ಮಾಲಾಶ್ರೀಯವರು ಖಡಕ್ ಪೊಲೀಸ್ ಅಧಿಕಾರಿಣಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಕ್ರೈಮ್ ರಿಪೋರ್ಟರ್ ಆಗಿ ಹರ್ಷಿಕಾ ಪೂಣಚ್ಚ ನಟಿಸಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಆನಂದ್ ಆರ್ಯ(ನಾಯಕ), ಅಯ್ಯಪ್ಪ ಶರ್ಮಾ, ಶಿವಮಣಿ, ಉಮೇಶ್, ಹೊನ್ನವಳ್ಳಿ ಕೃಷ್ಣ, ಬ್ಯಾಂಕ್ ಜನಾರ್ಧನ್, ಭರತ್ ಸಿಂಗ್, ಉಗ್ರಂ ಮಂಜು, ಮುಂತಾದವರು ನಟಿಸಿದ್ದಾರೆ. ಹಾಗೂ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ಸತೀಶ್ ಬಾಬು ನೀಡಿದ್ದರೇ, ಸಾಹಿತ್ಯ ಮತ್ತು ಸಂಗೀತವನ್ನು ಮಂಜು ಕವಿ ಯವರು ನೀಡಿದ್ದಾರೆ. ಚಿತ್ರಕ್ಕೆ ಅರುಣ್ ಸುರೇಶ್ ರವರ ಛಾಯಾಗ್ರಹಣವಿದೆ, ಚಿತ್ರಕ್ಕೆ ಎನ್.ವಿಶ್ವ ರವರ ಸಂಕಲನವಿದೆ. ಉಳಿದಂತೆ ಚಿತ್ರದ ಹಾಡುಗಳಿಗೆ,. ಅನನ್ಯ ಭಟ್, ಅನುರಾಧ ಭಟ್, ಸಂತೋಷ್ ವೆಂಕಿ, ವಿಜಯ್ ಪ್ರಕಾಶ್, ಶಮಿತಾ ಮಲ್ನಾಡ್, ನಟರಾಜ್ ರವರ ಕಂಠಸಿರಿ ಇದೆ. ಅನನ್ಯ ಭಟ್‌ರವರು ಹಾಡಿರುವ ‘ಗ್ಲಾಮರ್ ಗಾಡಿ’ ಹಾಡು ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಟೀಸರ್ ಬಿಡುಗಡೆಯಾಗಿದ್ದು, ಅಕ್ಟೋಬರ್ ೧೩ ರಂದು ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಒಟ್ಟಾರೆ ಚಿತ್ರದ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ

ಮಾರಕಾಸ್ತ್ರದ ಹಿಂದಿರುವ ಶಸ್ತ್ರಗಳು
‘ಗುರುಮೂರ್ತಿ’ ಕನ್ನಡ ಚಿತ್ರರಂಗದಲ್ಲಿ ಅರಳುತಿರೋ ಭರವಸೆಯ ಪ್ರತಿಭೆ. ಸಿನಿಮಾ ನಿರ್ದೇಶಕರು. ಮೂಲತಃ ಗುರುಮೂರ್ತಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹೊಸ ದರೋಜಿ ಗ್ರಾಮದವರು. ಓದಿದ್ದು ಬಳ್ಳಾರಿಯ ವಿದ್ಯಾನಗರದಲ್ಲಿರುವ ‘ನವ ಜೀವನ ಅಂಗವಿಕಲರ ಸಂಸ್ಥೆ’ಯಲ್ಲಿ. ಇವರು ರೈತಾಪಿ ಬಡ ಕುಟುಂಬದ ಹಿನ್ನೆಲೆಯಿಂದ ಬಂದವರಾದರೂ ಸಿನಿಮಾ ಮೇಲಿನ ಆಸಕ್ತಿ, ಅಣ್ಣಾವ್ರ ಮೇಲಿನ ಅಭಿಮಾನ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಕನಸಿತ್ತು ಆದರೆ ಆ ಕನಸು ಕಟ್ಟಿದ ಮನಸಿಗೆ ಸಿಕ್ಕ ಉಡುಗೊರೆ ಮಾತ್ರ ಅವಮಾನ. ಗುರುಮೂರ್ತಿ ಅವರು ತಮ್ಮ ಸಿನಿಮಾ ಕನಸುಗಳನ್ನು ಹೊತ್ತು ಬಂಡವಾಳ ಹಾಕುವವರ ಬಳಿಗೆ ಹೋದಾಗ ಕೆಲವರು ಅಣಕಿಸಿದ್ದುಂಟು, ಕೆಲವರು ಅವಮಾನ ಮಾಡಿದ್ದುಂಟು, ಹೆಚ್ಚಿನವರು ಕರುಣೆ ತೋರಿಸಿದ್ದೂ ಉಂಟು. ಆದರೂ ನಿರ್ದೇಶಕನಾಗುವ ಛಲ ಮಾತ್ರ ಬಿಟ್ಟಿರಲಿಲ್ಲ. ತಮ್ಮದೇ ಆದ ಒಂದು ತಂಡ ಕಟ್ಟಿಕೊಂಡು ಸಿನಿಮಾ ಕೆಲಸವನ್ನು ಶುರು ಮಾಡಿಯೇ ಬಿಟ್ಟರು. ಯಾವಾಗ ಸಿನಿಮಾ ಕೆಲಸಗಳು ಶುರುವಾಯಿತೋ ಗುರುಮೂರ್ತಿಯವರ ಆಪ್ತ ಬಳಗದ ಜನರಿಗೆ ಸಿನಿಮಾ ಪ್ರಾರಂಭವಾಗುವುದಾಗಿ ಪ್ರಚಾರ ಆಯಿತು. ಆ ಸಮಯದಲ್ಲಿ ಗುರುಮೂರ್ತಿಯವರಿಗೆ ‘ಕೋಮಲ ನಟರಾಜ್’ ರವರ ಪರಿಚಯವಾಯಿತು. ಅವರೇ ಈ ಚಿತ್ರಕ್ಕೆ ಪೂರ್ತಿ ಬಂಡವಾಳ ಹಾಕುತ್ತೇನೆ ಎಂದು ಮುಂದೆ ಬಂದರು. ಗುರುಮೂರ್ತಿಯವರಿಗಿದ್ದ ಸಿನಿಮಾ ಪ್ರೀತಿಯ ಮೇಲೆ ಅವರಿಗಿದ್ದ ಸಿನಿಮಾ ಆಸಕ್ತಿಯ ಮೇಲೆ, ಅವರು ಮಾಡಿಕೊಂಡಿದ್ದ ಕಥೆಯ ಮೇಲೆ ನಿರ್ಮಾಪಕರಿಗೆ ಪೂರ್ತಿ ನಂಬಿಕೆ ಹುಟ್ಟಿಕೊಂಡಿತ್ತು. ಆಮೇಲೆ ಗುರುಮೂರ್ತಿಯವರ ಸಹಾಯಕ್ಕೆ ಬಂದು ನಿಂತದ್ದು ಆ ಚಿತ್ರದ ಕ್ರಿಯೇಟಿವ್ ಹೆಡ್ ಧನಕುಮಾರ್ ರವರು ಪೂರ್ತಿ ಸಿನಿಮಾ ಮುಗಿಯುವವರೆಗೂ ಗುರುಮೂರ್ತಿಯವರಿಗೆ ಬೆನ್ನೆಲುಬಾಗಿ ಸಾತ್ ನೀಡಿದರು.

“ಮಾರಕಾಸ್ತ್ರ” ಚಿತ್ರಕ್ಕೇ ಹಾಡು ಹಾಡಲು ಹೋದ ನಟರಾಜ್‌ರವರು ಚಿತ್ರದ ಕಥೆ ಕೇಳಿ ಚಿತ್ರದಲ್ಲಿ ಬರುವ ದೇಶಪ್ರೇಮವನ್ನು ಸಾರುವ ಪಾತ್ರ ಒಂದನ್ನು ಒಪ್ಪಿಕೊಂಡು ನಟಿಸಿದ್ದಾರೆ. ನಟರಾಜ್‌ರವರಿಗೆ ದೇಶದ ಮೇಲೆ ಅಪಾರ ಅಭಿಮಾನ ಇದೆ. ಹಾಗಾಗಿ ಈ ಚಿತ್ರದಲ್ಲಿ ಬರುವ ದೇಶಪ್ರೇಮ ಸಾರುವ ಹಾಡೊಂದರ ಚಿತ್ರೀಕರಣವನ್ನು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಹಾಗೂ ಗುಜರಾತ್ ನಿಂದ ಮೇಘಾಲಯದವರೆಗೆ ಚಿತ್ರೀಕರಿಸಿ ಎಂದು ನಿರ್ದೇಶಕರಿಗೆ ಸಲಹೆ ನೀಡಿದರು, ಅದರಂತೆಯೇ ನಿರ್ದೇಶಕರು ಸುಮಾರು ಮೂವತ್ತೆರಡು ದಿನಗಳ ಕಾಲ ಚಿತ್ರೀಕರಣ ಮಾಡಿದ್ದಾರೆ. ಇದು ಈ ಚಿತ್ರದ ಹೈಲೆಟ್,

ಧನಕುಮಾರ್ ಮಾಸ್ಟರ್‌ರವರ ಮೂಲಕ ಮಾಲಾಶ್ರೀಯವರಿಗೆ ಈ ಮಾರಕಾಸ್ತ್ರ ಚಿತ್ರತಂಡದ ಪರಿಚಯವಾಯಿತು. ನಿರ್ದೇಶಕ ಗುರುಮೂರ್ತಿ ಸುನಾಮಿ ಅವರು ಹೇಳಿದ ಕಥೆ ಆ ಕಥೆ ಹೇಳಿದ ರೀತಿ, ಅದನ್ನು ತೆರೆಯ ಮೇಲೆ ತರುವುದಕ್ಕೆ ಅವರು ಮಾಡಿಕೊಂಡಿದ್ದ ಸಿದ್ದತೆ ಎಲ್ಲವೂ ಮಾಲಾಶ್ರೀಯವರಿಗೆ ಬಹಳ ಇಷ್ಟವಾಯಿತು. ಗುರುಮೂರ್ತಿಯವರ ಸಿನಿಮಾ ಪ್ರೀತಿ ಕಂಡು ಮಾಲಾಶ್ರೀಯವರಿಗೆ ಗುರುಮೂರ್ತಿ ಮೇಲೆ ಇನ್ನಿಲ್ಲದ ಅಭಿಮಾನ ಮೂಡಿತು. ಮಾಲಾಶ್ರೀಯವರು ಈ ಸಿನಿಮಾಕ್ಕೆ ಮೊದಲು ಹನ್ನೊಂದು ದಿನಗಳ ಕಾಲ್‌ಶೀಟ್ ನೀಡಿದ್ದರು ಆಮೇಲೆ ಒಟ್ಟು ಅರವತ್ತು ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡರು, ಇದರಿಂದಾಗಿ ನಾಲ್ಕು ಸಾಹಸ ಸನ್ನಿವೇಶಗಳನ್ನು ಅದ್ಧೂರಿಯಾಗಿ ಚಿತ್ರೀಕರಿಸಲು ಸಾದ್ಯವಾಯಿತು. ‘ಮಾರಕಾಸ್ತç’ ಚಿತ್ರದ ಸಾಹಸ ಸನ್ನಿವೇಶಗಳು ಮಾಲಾಶ್ರೀಯವರ ಹಿಂದಿನ ಸಾಹಸ ಭರಿತ ಚಿತ್ರಗಳಾದ ‘ಚಾಮುಂಡಿ’, ‘ದುರ್ಗಿ’, ‘ಶಕ್ತಿ’ ಮುಂತಾದ ಚಿತ್ರಗಳನ್ನು ನೆನಪಿಸುತ್ತದೆ
