ಸೈಕೋ ಥ್ರಿಲ್ಲರ್ “ಮೇನಿಯಾ” ಸಿನ್ಸ್ 1999 ಚಿತ್ರ ಜುಲೈನಲ್ಲಿ ಆರಂಭ.
ನಾಯಕನ ಹುಟ್ಟುಹಬ್ಬಕ್ಕೆ ಶೀರ್ಷಿಕೆ ಅನಾವರಣ ಮಾಡಿದ ಚಿತ್ರತಂಡ.
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾವಸ್ತುವುಳ್ಳ ಚಿತ್ರಗಳು ಹೆಚ್ಚುತ್ತಿದೆ. ಪ್ರೇಕ್ಷಕರಿಗೆ ಅದನ್ನು ಮೆಚ್ಚಿಕೊಳ್ಳುತ್ತಿದ್ದಾರೆ.
ಸೈಕೋ ಥ್ರಿಲ್ಲರ್ ಕಥಾಹಂದರವಿರುವ “ಮೇನಿಯಾ” ಸಿನ್ಸ್ 1999 ಚಿತ್ರ ಕೂಡ ವಿಭಿನ್ನ ಕಥಾವಸ್ತು ಹೊಂದಿರುವ ಚಿತ್ರ. ಜುಲೈನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಅದಕ್ಕೂ ಮುನ್ನ ನಾಯಕ ಸ್ವಸ್ತಿಕ್ ಆರ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಶೀರ್ಷಿಕೆ ಅನಾವರಣ ಮಾಡಿದೆ.
ಮಧು.ಎಸ್ ಈ ಚಿತ್ರದ ನಿರ್ದೇಶಕರು. ಲೂಸ್ ಮಾದ ಯೋಗಿ ಅಭಿನಯದ “ಲಂಕೆ” ಸೇರಿದಂತೆ ಕನ್ನಡದ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಮಧು ಎಸ್, ದೊರೆ – ಭಗವಾನ್ ಅವರ ಇನ್ಸ್ಟಿಟ್ಯೂಟ್ ನಲ್ಲಿ ನಿರ್ದೇಶನ ತರಭೇತಿ ಸಹ ಪಡೆದಿದ್ದಾರೆ. ಕೆಲವು
ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಮಧು ಅವರೆ ಬರೆಯುತ್ತಿದ್ದಾರೆ. ಇದು ಮಧು ಅವರಿಗೆ ಚೊಚ್ಚಲ ನಿರ್ದೇಶನದ ಚಿತ್ರ. ಸ್ಚಸ್ತಿಕ್ ಆರ್ಯ ಈ ಚಿತ್ರದ ನಾಯಕ.
“ರಂಗನಾಯಕಿ” ಧಾರಾವಾಹಿಯಲ್ಲಿ ನಟಿಸುರುವ ಇವರು, ವಿಜಯ್ ಪ್ರಕಾಶ್ ಹಾಡಿರುವ “ಜಿಯಾ” ಆಲ್ಬಂ ನಲ್ಲೂ ಅಭಿನಯಿಸಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಈ ಆಲ್ಬಂ ಸಾಂಗ್ ಮೂಡಿ ಬಂದಿತ್ತು. ನೀನಾಸಂ ನಲ್ಲಿ ಅಭಿನಯಕ್ಕೆ ಬೇಕಾದ ತರಭೇತಿಯನ್ನು ಸ್ವಸ್ತಿಕ್ ಆರ್ಯ ಪಡೆಯುತ್ತಿದ್ದಾರೆ.
ಸ್ವಸ್ತಿಕ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಾಯಕ ಸ್ವಸ್ತಿಕ್ ಆರ್ಯ ಅವರು ಅರುಣ್ ಭಟ್ ಅವರೊಡಗೂಡಿ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.
ಬೆಂಗಳೂರು- ಮಂಗಳೂರಿನಲ್ಲಿ ನಲವತ್ತು ದಿನಗಳ ಚಿತ್ರೀಕರಣ ನಡೆಯಲಿದೆ. ಎರಡು ಹಾಡುಗಳಿರುತ್ತದೆ. ವಿಶಾಲ್ ಕುಮಾರ್ ಗೌಡ ಛಾಯಾಗ್ರಾಹಕರಾಗಿ ಹಾಗೂ ಮಧು ತುಂಬಕೆರೆ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.