ಬಣ್ಣದ ಲೋಕಕ್ಕೆ ಒಂದಾದಮೇಲೆ ಒಂದರಂತೆ ಶಾಕ್ ಎದುರಾಗುತ್ತಲೇ ಇದೆ. ಕಳೆದ ಎರಡು ವರ್ಷಗಳಲ್ಲಿ ಹಿರಿತೆರೆ ಹಾಗೂ ಕಿರುತೆರೆಯ ಅನೇಕ ಕಲಾವಿದರು ಇಹಲೋಕ ತ್ಯಜಿಸಿದ್ದಾರೆ. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಕಿರುತೆರೆ ಕಲಾವಿದ ಮಂಡ್ಯ ರವಿ ಅವರು ನಿಧನ ಹೊಂದಿದ್ದಾರೆ.
ಕನ್ನಡ ಕಿರುತೆರೆಯ ಖ್ಯಾತ ನಟ, ಮಗಳು ಜಾನಕಿ ಧಾರಾವಾಹಿಯ ಚಂದು ಭಾರ್ಗಿ ಪಾತ್ರದಲ್ಲಿ ಪ್ರೇಕ್ಷಕರ ಹೃದಯ ಗೆದ್ದಿದ್ದ ನಟ ಮಂಡ್ಯ ರವಿ ನಿಧನರಾಗಿದ್ದಾರೆ. ಈ ಬಗ್ಗೆ ಬಿಜಿಎಸ್ ಆಸ್ಪತ್ರೆ ವೈದ್ಯರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ನಟ ರವಿ ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ಬಿಜಿಎಸ್ ನಲ್ಲಿ ದಾಖಲಾಗಿದ್ದ ನಟ ರವಿ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಮಂಡ್ಯ ಮೂಲದ ನಟ ರವಿ ಅವರ ಸಂಪೂರ್ಣ ಹೆಸರು ರವಿ ಪ್ರಸಾದ್. ಖ್ಯಾತ ನಿರ್ದೇಶಕ ಟಿಎನ್ ಸೀತರಾಮ್ ಅವರ ಅನೇಕ ಧಾರಾವಾಹಿಗಳಲ್ಲಿ ರವಿ ಅವರು ನಟಿಸಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದ ರವಿ ಧಾರಾವಾಹಿ ಜೊತೆಗೆ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಎಂಎ ಎಲ್ ಎಲ್ ಬಿ ಓದಿರುವ ರವಿ ಅದ್ಭುತ ನಟನೆ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದರು.
ನಟ ರವಿ ಅನೇಕ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಚಿತ್ರಲೇಖ, ಮಿಂಚು, ಮುಕ್ತ ಮುಕ್ತ, ವರಲಕ್ಷ್ಮೀ ಸ್ಟೋರ್ಸ್ ಮುಂತಾದ ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂ ಫೈಲ್ ಕಾರ್ಯಕ್ರಮವನ್ನು ರವಿಪ್ರಸಾದ್ ನಿರೂಪಣೆ ಮಾಡಿದ್ದರು.