ಬಹುನಿರೀಕ್ಷಿತ `ಚಿತ್ತಾರ ಸ್ಟಾರ್ ಅವಾರ್ಡ್ಸ್-2025’ರ ವೋಟಿಂಗ್ ಲೈನ್ ಓಪನ್ ಆಗಿದೆ, ಈ ಕೂಡಲೆ ನಿಮ್ಮ ನೆಚ್ಚಿನ ನಟ/ನಟಿ, ತಂತ್ರಜ್ಞರಿಗೆ ವೋಟ್ ಮಾಡಿ.
Send “Chittara” on WhatsApp to 73 5365 5365 or click the link http://wame.pro/chittara to cast your vote!
ಸಿನಿಮಾ: ಮನದ ಕಡಲು.
ನಿರ್ಮಾಣ: ಇ. ಕೃಷ್ಣಪ್ಪ.
ಕಾರ್ಯಕಾರಿ ನಿರ್ಮಾಪಕರು : ಜಿ.ಗಂಗಾಧರ್
ನಿರ್ದೇಶನ: ಯೋಗರಾಜ್ ಭಟ್.
ಪಾತ್ರವರ್ಗ: ಸುಮುಖ, ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ರಂಗಾಯಣ ರಘು, ದತ್ತಣ್ಣ ಮುಂತಾದವರು.
ರೇಟಿಂಗ್: 3.5/5
ಇ.ಕೃಷ್ಣಪ್ಪ ಮತ್ತು ಯೋಗರಾಜ್ ಭಟ್ ಜೋಡಿ `ಮುಂಗಾರು ಮಳೆ’ಯ ಮೂಲಕ ದಾಖಲೆ ಸೃಷ್ಟಿಸಿತ್ತು. ಗಣೇಶ್-ಪುಜಾ ಗಾಂಧಿ ಪಾತ್ರವನ್ನು ಯುವ ಪೀಳಿಗೆ ಬಾಚಿ ತಬ್ಬಿಕೊಂಡಿತ್ತು. ಅದಾಗಿ ಬರೋಬ್ಬರಿ ಹದಿನೆಂಟು ವರ್ಷಗಳ ನಂತರ `ಮನದ ಕಡಲು’ ಮೂಲಕ ಈ ಟ್ರೆಂಡ್ ಸೆಟ್ಟರ್ ಜೋಡಿ, ಇಂದಿನ ಪ್ರೇಕ್ಷಕನ ಬದಲಾದ ಮನಸ್ಥಿತಿಯಲ್ಲೂ ಗೆದ್ದು ತೋರಿಸುತ್ತೇವೆ ಎಂದು ಬಂದಿದ್ದಾರೆ. ಹಾಗಿದ್ದರೆ ಅವರಿಬ್ಬರ ಕನಸಿನ ಕೂಸು ಹೇಗಿದೆ?
ಹೆಚ್ಚಿನ ಓದಿಗಾಗಿ;- Interval Movie Review : `ದಿ ಎಂಡ್’ವರೆಗೂ ಮನರಂಜಿಸುವ `ಇಂಟರ್ವಲ್’
`ಮನದ ಕಡಲು’ ಟಿಪಿಕಲ್ ಭಟ್ಟರ ಸಿನಿಮಾ. ಅವರ ಸಿಗ್ನಿಚರ್ ಶೈಲಿಯಂತೆ, ಇಲ್ಲೂ ಪಾತ್ರವೊಂದು ಊರೆಲ್ಲಾ ಬೈಕೊಂಡು ಓಡಾಡ್ತಾ, `ಡೋಂಟ್ ಕೇರ್’ ಪಾಲಿಸಿಯನ್ನು ಚಾಚೂ ತಪ್ಪದೆ ಪಾಲಿಸ್ತಾ ಇರುತ್ತದೆ. ಅಂತಹ ಪಾತ್ರವನ್ನು ಹೊಸ ಮುಖ ಸುಮುಖನ ಮೂಲಕ ಭಟ್ರು ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ.`ಡೋ0ಟ್ ಕೇರ್’ ಪಾಲಿಸಿಯ ಸುಮುಖ, ತನ್ನ ಮನದ ಕಡಲಲ್ಲಿ ಒಲವಿನ ತೆರೆಗಳನನು ಎಬ್ಬಿಸಿದ ಗೆಳೆತಿಯನ್ನು ಹುಡುಕಿಕೊಂಡು, ಕಡಲ ತೆರೆಗಳಿಗೆ ಮುತ್ತಿಕ್ಕುವ ದೋಣಿ ದುರ್ಗ ಎಂಬಲ್ಲಿಗೆ ಬರುತ್ತಾನೆ. ದೋಣಿ ದುರ್ಗ ಅವನಿಗೆ ಇಬ್ಬರು ನಾಯಕಿಯರನ್ನು ಕರುಣಿಸುತ್ತದೆ. ಅಲ್ಲಿಂದ ಕಥೆ `ಟ್ರಾಯಾಂಗಲ್ ಲವ್ ಸ್ಟೋರಿ’ಯತ್ತ ಹೊರಳುತ್ತದೆ. ಇದರ ಮಧ್ಯೆ, ಮನುಷ್ಯನ ಭಾವನೆಯ ಭೋರ್ಗರೆತವನ್ನು ಸಮುದ್ರ ಅಲೆಗಳು ತೋರಿಸಿದರೆ, ಅರ್ಧಕ್ಕೆ ಬಿಟ್ಟ ಎಂಬಿಬಿಎಸ್ ಕೋರ್ಸ್ಗಳು `ಲೈಫು ಇಷ್ಟೇನೆ’ ಅನ್ನವುದನ್ನು ಒತ್ತಿಹೇಳುತ್ತದೆ. ಧನ್ವಂತರಿ ಚಿಕಿತ್ಸೆ, ಕಾಯಿಲೆ-ಕಸಾಲೆ, ಬುಡಕಟ್ಟು ಜನಾಂಗ, ಮೂರು ಹಸಿ ಹೃದಯಗಳು.. ಹೀಗೆ ಭಟ್ರು ಸಾಕಷ್ಟು ಸಂಗತಿಗಳನ್ನು ನಾಜೂಕಾಗು ಹೆಣೆದಿದ್ದಾರೆ. climaxನಲ್ಲಿ ಒಲವಿನ `ನಡು’ ಸಮುದ್ರದಲ್ಲಿ ಬೀಳುವ ಜೀವಗಳು ಎದ್ದು ಬರುತ್ತಾರಾ.. ಅನ್ನುವ ಕುತೂಹಲ ಮೂಡವಾಗಲೇ ಪ್ರೇಕ್ಷಕ ಭಟ್ಟರ ಮ್ಯಾಜಿಕ್‌ಗೆ ಶರಣಾಗಿ, ಒಂದು ಗಾಢವಾದ ಅನುಭವನ್ನು ತನ್ನಲ್ಲಿ ಹೊತ್ತುಕೊಂಡು ಹೋಗುತ್ತಾನೆ.
ಹೆಚ್ಚಿನ ಓದಿಗಾಗಿ;- Kapati Movie Review :`ಡಿಜಿಟಲ್ ಟೋಪಿ’ ಹಾಕುವವರ ಬಗ್ಗೆ, ಟಿಪಿಕಲ್ ಕಹಾನಿ
ಭಟ್‌ಇಸಮ್‌ನ ಭಾಗವಾದ ವಿಕ್ಷಿಪ್ತ ಲವ್ ಸ್ಟೋರಿ ಇಲ್ಲೂ ಮುಂದುವರಿದಿದೆ. ತಮಾಷೆ ಮಾಡುತ್ತಾ, ಛೇಡಿಸುತ್ತಾ `ವ್ಯಂಗ್ಯ’ ಮಾಡುತ್ತಲೇ ಬದುಕಿನ ಗಂಭೀರ ಸಂಗ್ತಿಗಳನ್ನು ಭಟ್ರು ತಾಕುವಂತೆ ಹೇಳಿದ್ದಾರೆ. ನಿಜ ಜೀವನದಲ್ಲಿ `ವ್ಯಂಗ್ಯ’ವನ್ನು ಸಹಿಸದ ಭಟ್ರು, ತೆರೆಯ ಮೇಲೆ ವ್ಯಂಗ್ಯವನ್ನು ಕೂಡ ಅದ್ಭುತವಾಗಿ ಬಳಸಿದ್ದಾರೆ. ನಿರೀಕ್ಷೆ ಮಾಡದ ಕಿಕ್ ನೀಡುವ ಸಂಭಾಷಣೆಗಳು, ರೋದನೆ ಅನ್ನಿಸಿದ ಸಿಂಪಲ್ ಬೋಧನೆ, ಬೆಟ್ಟ-ಗುಡ್ಡ, ಜಲಪಾತ, ಹಿತವಾದ ಮಳೆ.. ಹೀಗೆ ಫ್ರೇಮ್ ಟು ಫ್ರೇಮ್ ಮನದ ಕಡಲು ಮನಕ್ಕೆ ತಾಕುತ್ತದೆ. ಭಟ್ರು ಪೃಕ್ರತಿಯನ್ನು ಪಾತ್ರದೊಡನೆ ಸಮೀಕರಿಸಿ ಕಥೆ ಹೇಳುವ ರೀತಿ, ಸಿನಿಮಾಕ್ಕೊಂದು ಆಧ್ಯಾತ್ಮಿಕ ಭಾವವನ್ನು ನೀಡಿದೆ.
ಹೆಚ್ಚಿನ ಓದಿಗಾಗಿ;- ‘Sanju Weds Geetha 2’ movie review: ನೂಲಿನಂತೆ ಸೀರೆ, ನಿರ್ದೇಶಕರಂತೆ ಸಿನಿಮಾ!
ಕಥೆ ಆರಂಭವಾದ ಕ್ಷಣದಿಂದಲೂ ನೋಡುಗಗನ್ನು ಪಾತ್ರಗಳು ಆವರಿಸಿಕೋಳ್ಳುತ್ತವೆ. ಕೊಟ್ಟ ಪಾತ್ರಗಳ ಜವಾಬ್ದಾರಿಯನ್ನು ಅರಿತ ನಟ/ನಟಿಯರು ಭಟ್ರು ಕಂಡ `ಕಡಲಿ’ನ ಕನಸನ್ನು ನನಸಾಗಿಸಿದ್ದಾರೆ. ಹರಿಕೃಷ್ಣ ಹರಿಸಿರುವ ಸಂಗೀತಸ ಸುಧೆ ಕಡಲಿನ ಆರ್ಭಟದ ಮುಂದೆಯೂ ಹಿತ ನೀಡುತ್ತದೆ. ಸಂತೋಷ್ ರೈ ಪಾತಾಜೆಯ ಕ್ಯಾಮೆರ ಕಣ್ಣಲ್ಲಿ `ಮನದ ಕಡಲು’ ಒಂದು ವಿಶೇಷ ಅನುಭವ ನೀಡುತ್ತದೆ. ಬಹುಶಃ ಪಾತಾಜೆಯ ಕ್ರೀಯಾಶೀಲತೆಗೆ ಸವಾಲೊಡ್ಡಿದ ಚಿತ್ರ ಇದಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಹೆಚ್ಚಿನ ಓದಿಗಾಗಿ;- Max Movie Review: ತಲೆಗೆ ಹೊಕ್ಕಿದ ಬೋಧನೆಯ `ಹುಳ’ಕ್ಕೆ ರಂಜನೆಯ ಲಸಿಕೆ!
ಹೊಸ ಪ್ರತಿಭೆಗಳಾದ ಸುಮುಖ, ಅಂಜಲಿ, ರಾಶಿಕಾ ನಟನೆ ಇವರು ಹೊಸಬರ `ಅಲ್ಲ’ ಅನ್ನುವುದನ್ನು ಸಾರಿ ಸಾರಿ ಹೇಳುತ್ತದೆ. ಸುಮುಖ ಅಲ್ಲಲ್ಲಿ `ವಾವ್’ ಅನ್ನುವಂತಹ ಅಭಿನಯದ ಮೂಲಕ ಅಚ್ಚರಿ ಮೂಡಿಸುತ್ತಾರೆ. ರಂಗಭೂಮಿಯ ಹಿನ್ನಲೆಯಿಂದ ಬಂದ ಈ ಹುಡುಗನಿಗೆ ನಿಜಕ್ಕೂ ಉಜ್ವಲ ಭವಿಷ್ಯವಿದೆ. ಡೈಲಾಗ್ ಡೆಲಿವರಿ, ತುಂಟತನ, ಎಮೋಷನಲ್ ದೃಶ್ಯಗಳು.. ಎಲ್ಲದರಲ್ಲೂ ಸುಮುಖ ಇಷ್ಟವಾಗುತ್ತಾರೆ. ನಟಿಯರಾದ ರಾಶಿಕಾ ಮತ್ತು ಅಂಜಲಿ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ಧನ್ವಂತರಿ ವೈದ್ಯರಾಗಿ ದತ್ತಣ್ಣ ಸೂಪರ್. ಇತ್ತೀಚಿಗೆ ಏಕಾತಾನತೆಯ ಪಾತ್ರಗಳನ್ನೇ ಮಾಡಿ ಬೇಸತ್ತಿದ್ದ ರಂಗಾಯಣ ರಘು ಅವರಿಗೆ ಭಟ್ರು ಬಿಗ್ ರಿಲೀಫ್ ನೀಡುವಂತಹ ಚಾಲೆಂಜಿಗ್ ಪಾತ್ರ ಕೊಟ್ಟು ಪ್ರೇಕ್ಷಕರಿಗೆ ಹತ್ತಿರವಾಗಿಸಿದ್ದಾರೆ. ರಂಗಾಯಣ ರಘು ಅವರ ಪಾತ್ರ ನೋಡಿದ ಮೇಲೆ, ಈ ಪಾತ್ರವನ್ನು ಅವರು ಬಿಟ್ಟು ಬೇರೆ ಯಾರೂ ಮಾಡಲು ಅಸಾಧ್ಯ ಅನ್ನಿ ಸು ವುದು ಸುಳ್ಳಲ್ಲ.
ಕೊನೆಯದಾಗಿ, ಕನ್ನಡದಲ್ಲಿ ಕಪ್ಪು-ಕಪ್ಪು, ರಕ್ತ-ರಕ್ತ.. ಇಂತಹುದೇ ಚಿತ್ರಗಳೇ ಬರುತ್ತವೆ ಎಂದು ದೂರುವ ಪ್ರೇಕ್ಷಕರು ಒಲವಿನ ಕಡಲಿನ ವಿಶ್ವರೂಪವನ್ನು ಮಿಸ್ ಮಾಡಿಕೊಳ್ಳಬಾರದು. ಭಟ್&ಟೀಮ್ ನಿಜಕ್ಕೂ ಒಂದು ಸದಭಿರುಚಿಯ ಚಿತ್ರವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಭಟ್ಟರ ಕನಸಿನ ಬೆನ್ನಿಗೆ ನಿಂತ ಇ.ಕೃಷ್ಣಪ್ಪ ಮತ್ತು ಜಿ.ಗಂಗಾದರ್ ಅವರ ಸಿನಿಮಾ ಪ್ರೀತಿಗೊಂದು ಬಿಗ್ ಸಲ್ಯೂಟ್.
by-NaveenKrishna.B