Sandalwood Leading OnlineMedia

ಮಹೇಶ್‌ ಬಾಬು ಪಾಸ್‌ಪೋರ್ಟ್‌ ಕಿತ್ತುಕೊಂಡಿಟ್ಟುಕೊಂಡಿದ್ದಾರಾ ರಾಜಮೌಳಿ..?

ಆರ್‌ಆರ್‌ಆರ್‌ ಬಳಿಕ ಮಹೇಶ್ ಬಾಬು ನಟನೆಯ ಚಿತ್ರಕ್ಕೆ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೊಸ ವರ್ಷದ ಆರಂಭದಲ್ಲೇ ಚಿತ್ರದ ಮುಹೂರ್ತ ನೆರವೇರಿತ್ತು. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಆರಂಭಿಸಲಾಗಿದೆ ಎಂದು ಮಾತುಗಳು ಕೇಳಿಬರ್ತಿದೆ. ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಮೌಳಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಅಂದಾಜು 1000 ಕೋಟಿ ರೂ. ಬಜೆಟ್‌ನಲ್ಲಿ ಎರಡು ಭಾಗಗಳಾಗಿ ಸಿನಿಮಾ ನಿರ್ಮಾಣವಾಗುತ್ತದೆ ಎಂದು ಫಿಲ್ಮ್‌ನಗರ್‌ನಲ್ಲಿ ಚರ್ಚೆ ನಡೀತಿದೆ. ಆದರೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಮಹೇಶ್ ಬಾಬು ನಟನೆಯ 29 ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಸದ್ಯಕ್ಕೆ SSMB29 ಎಂದು ಕರೆಯಲಾಗುತ್ತಿದೆ. ಸಾಮಾನ್ಯವಾಗಿ ರಾಜಮೌಳಿ ತಮ್ಮ ಸಿನಿಮಾಗಳನ್ನು ಕಟ್ಟಿಕೊಡಲು ಮೂರ್ನಾಲ್ಕು ವರ್ಷ ವ್ಯಯಿಸುತ್ತಾರೆ. ಅಲ್ಲಿಯವರೆಗೂ ಚಿತ್ರದ ನಾಯಕ ನಟ ಬೇರೆ ಸಿನಿಮಾಗಳಲ್ಲಿ ನಟಿಸುವುದು ಬೇಡ ಎಂದು ಷರತ್ತು ಹಾಕುತ್ತಾರೆ. ಕೇಳಿದಾಗ ಕಾಲ್‌ಶೀಟ್ ಕೊಡಬೇಕು ಎನ್ನುತ್ತಾರೆ. ಈ ಹಿಂದೆ ‘ಬಾಹುಬಲಿ’ ಸರಣಿ ಹಾಗೂ ‘ಆರ್‌ಆರ್‌ಆರ್‌’ ಸಿನಿಮಾಗಳ ಸಮಯದಲ್ಲಿ ಇದೇ ರೀತಿ ಆಗಿತ್ತು. ಈ ಬಾರಿ ಪ್ಯಾನ್ ವರ್ಲ್ಡ್ ಸಿನಿಮಾ ಆಗಿರುವುದರಿಂದ ಮಹೇಶ್ ಬಾಬು, ಪ್ರಿಯಾಂಕ ಚೋಪ್ರಾ ಕೂಡ ಹೆಚ್ಚಿನ ಕಾಲ್‌ಶೀಟ್ ಕೊಡಬೇಕಿದೆ. ಇನ್ನು ಮಹೇಶ್ ಬಾಬು ಆಗಾಗ್ಗೆ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಅದೇ ಕಾರಣಕ್ಕೆ ಬಹಳ ತಮಾಷೆಯಾಗಿ ಇತ್ತೀಚೆಗೆ ರಾಜಮೌಳಿ ಒಂದು ಪೋಸ್ಟ್ ಮಾಡಿದ್ದರು. ಆ ಮೂಲಕ SSMB29 ಶೂಟಿಂಗ್ ಶುರುವಾಯಿತು. ಇನ್ನು ಮುಂದೆ ಮಹೇಶ್ ಬಾಬು ಪದೇ ಪದೆ ವಿದೇಶ ಪ್ರವಾಸ ಕೈಗೊಳ್ಳುವಂತಿಲ್ಲ. ಕಾರಣ ಪಾಸ್‌ಪೋರ್ಟ್ ನನ್ನ ಬಳಿಯಿದೆ ಎನ್ನುವಂತೆ ವೀಡಿಯೋ ಮಾಡಿ ಹಂಚಿಕೊಂಡಿದ್ದರು.

ಅಧಿಕೃತವಾಗಿ ಚಿತ್ರತಂಡ ಬಿಡುಗಡೆ ಮಾಡುವರೆಗೂ ಯಾವುದೇ ಮೇಕಿಂಗ್ ಫೋಟೊ, ವೀಡಿಯೋ ಹೊರಗೆ ಬರಬಾರದು ಎಂದು ಕಠಿಣ ನಿರ್ಧಾರಕ್ಕೆ ಬರಲಾಗಿದೆಯಂತೆ. ಹಾಗಾಗಿ ಚಿತ್ರದ ಕಲಾವಿದರು, ತಂತ್ರಜ್ಞರ ಜೊತೆ ನಿರ್ಮಾಪಕರು ನಾನ್‌-ಡಿಸ್‌ಕ್ಲೋಸ್ ಅಗ್ರೀಮೆಂಟ್‌ಗೆ ಸಹಿ ಹಾಕಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಅದರ ಅರ್ಥ ಚಿತ್ರದ ಬಗ್ಗೆ ಯಾರು ಕೂಡ ಮಾಧ್ಯಮಗಳ ಮುಂದೆ ಮಾತನಾಡಬಾರದು, ಯಾವುದೇ ಫೋಟೊ, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬಾರದು ಎಂದು ಅದರಲ್ಲಿ ಬರೆಯಲಾಗಿದೆಯಂತೆ. ಅದನ್ನು ಮೀರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಂಡ ಎಚ್ಚರಿಕೆ ನೀಡಿ ಅಗ್ರೀಮೆಂಟ್‌ಗೆ ಸಹಿ ಹಾಕಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

Share this post:

Related Posts

To Subscribe to our News Letter.

Translate »