ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದ ಮಧುಸೂದನ್ ಕ್ಯಾತನಹಳ್ಳಿ ಅವರು ಇದೀಗ ‘ಮಧುರ ಕಾವ್ಯ’ ಎಂಬ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಆಯುರ್ವೇದ ಮತ್ತು ಅಲೋಪಥಿ ವೈದ್ಯಪದ್ದತಿಯ ನಡುವೆ ನಡೆಯುವ ಘರ್ಷಣೆಯ ಕಥಾವಸ್ತುವನ್ನಿಟ್ಟುಕೊಂಡು ಅವರು ಈ ಚಿತ್ರವನ್ನು ನಿರೂಪಿಸಿದ್ದಾರೆ. ಮಧುಸೂದನ್ ಅವರೇ ನಾಯಕನಾಗಿಯೂ ನಟಿಸಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ವಿಶೇಷವಾಗಿ ಈ ಚಿತ್ರದಲ್ಲಿ ನಾಯಕಿಯ ಪಾತ್ರವಿಲ್ಲ. ಇನ್ನು ನಾಯಕನ ತಾಯಿಯ ಪಾತ್ರದಲ್ಲಿ ಯಶೋಧ ಅವರು ಕಾಣಿಸಿಕೊಂಡಿದ್ದು, ಖಳನಾಯಕನಾಗಿ ರಾಜಕುಮಾರ್ ನಾಯಕ್ ನಟಿಸಿದ್ದಾರೆ. ಸತೀಶ್ ಮೌರ್ಯ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ಕಂ ನಿರ್ದೇಶಕ ಮಧುಸೂದನ್, ನಾನು ಮೂಲತ: ಮಂಡ್ಯ ಬಳಿಯ ಕ್ಯಾತನಹಳ್ಳಿಯವನು. ನಾಟಿ ವೈದ್ಯನೂ ಹೌದು. ಸುಮಾರು ೬೦-೭೦ ವರ್ಷಗಳ ಹಿಂದೆ ಅಲೋಪಥಿ ಆಸ್ಪತ್ರೆಗಳು ತುಂಬಾ ಕಮ್ಮಿ ಇದ್ದವು. ಆಗ ನಾಟಿ ವೈದ್ಯ ಪದ್ದತಿಯೇ ಜನಪ್ರಿಯವಾಗಿತ್ತು. ಆಗ ಹಣದ ಆಸೆ ಯಾರಲ್ಲೂ ಇರಲಿಲ್ಲ, ಆದರೆ ಈಗ ನಾಟಿ ವೈದ್ಯ ಪದ್ದತಿಯನ್ನು ಅಲೋಪಥಿಯವರು ಹೇಗೆ ಹತ್ತಿಕ್ಕುತ್ತಿದ್ದಾರೆ, ಪಾರಂಪರಿಕವಾಗಿ ಜನರ ಸೇವೆ ಮಾಡಿಕೊಂಡು ಬಂದಿರುವ ನಾಟಿ ವೈದ್ಯರನ್ನು ಹೇಗೆ ತುಳಿಯುತ್ತಿದ್ದಾರೆ, ಹಿಂದಿನಿಂದ ಬಂದಿರುವ ಆಯುರ್ವೇದವನ್ನು ಉಳಿಸಬೇಕು, ನಾಟಿ ವೈದ್ಯ ಪದ್ದತಿ ಬೆಳೆಸಬೇಕು ಅಂತ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದೇವೆ, ಆಯುರ್ವೇದ ಸಂಪ್ರದಾಯ ಉಳಿಯಬೇಕು ಎನ್ನುವುದೇ ನಮ್ಮ ಮೂಲ ಉದ್ದೇಶ. ಒಂದು ಚಿತ್ರ ಮಾಡುವಾಗ ಕಥೆಯೇ ಅದರ ನಾಯಕನಾಗಿರುತ್ತಾನೆ. ಜನರಿಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಒಬ್ಬ ನಾಟಿ ವೈದ್ಯನಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ, ಲಾಭಿ ನಡೆಸುವವರ ವಿರುದ್ದ ಹೋರಾಟ ನಡೆಸಿ ನಾಟಿವೈದ್ಯ ಪದ್ದತಿಯನ್ನು ರಕ್ಷಿಸುವಂಥ ಪಾತ್ರವದು. ಚಿತ್ರದಲ್ಲಿ ತಾಯಿ, ಮಗನ ನಡುವಿನ ಪ್ರೀತಿ ವಾತ್ಸಲ್ಯ ಹೇಗಿರುತ್ತೆ ಅಂತಲೂ ಹೇಳಿದ್ದೇವೆ, ನಮ್ಮ ಚಿತ್ರದ ಮೂಲಕ ಸಮಾಜಕ್ಕೆ ಒಂದು ಮೆಸೇಜ್ ಹೇಳಿದ್ದೇವೆ, ಹಾಗಂತ ಇದೇನು ಪಿರಿಯಾಡಿಕ್ ಸ್ಟೋರಿಯಲ್ಲ, ಈಗಿನ ಕಾಲದಲ್ಲೇ ನಡೆಯುವ ಕಥೆ, ತಲತಲಾಂತರದಿಂದ ನಡೆದುಕೊಂಡು ಬಂದಿರುವ ಪಾರಂಪರಿಕ ಆಯುರ್ವೇದ ವೈದ್ಯಕೀಯ ಪದ್ದತಿಯನ್ನು ರಕ್ಷಿಸಿಕೊಂಡು ಹೋಗಬೇಕು ಅಂತ ನಮ್ಮ ಚಿತ್ರದ ಮೂಲಕ ಹೇಳಿದ್ದೇನೆ. ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಸಹ ನಾನೇ ವಹಿಸಿಕೊಂಡಿದ್ದೇನೆ. ಉಡುಪಿ, ಮಂಗಳೂರು, ಶಿರಸಿ ಸುತ್ತಮುತ್ತ ಚಿತ್ರಕ್ಕೆ ಚಿತ್ರೀಕರಣ ನಡೆಸಿದ್ದೇವೆ. ಪ್ರಮುಖ ಪಾತ್ರವನ್ನು ಬೇರೆಯವರಿಂದ ಮಾಡಿಸುವುದಕ್ಕಿಂತ ನಾನೇ ಮಾಡಿದರೆ ಚೆನ್ನಾಗಿರತ್ತೆ ಅಂತ ಎಲ್ಲರೂ ಹೇಳಿದ್ದರಿಂದ ಮಾಡಬೇಕಯಿತು, ಗ್ರಾಮೀಣ ಭಾಗದಲ್ಲಿ ನಡೆಯುವಂಥ ಕಥಾನಕ ಇದಾಗಿದ್ದು, ನಾಟಿ ವೈದ್ಯರ ಕುಟುಂಬವೊAದು ಮೆಡಿಕಲ್ ಲಾಭಿಯ ವಿರುದ್ದ ಹೋರಾಡುವ ಕಥೆಯಿದು. ಈಗಾಗಲೇ ಚಿತ್ರದ ಶೂಟಿಂಗ್ ಮುಗಿದು ಸೆನ್ಸಾರ್ ಹಂತಕ್ಕೆ ಬಂದಿದೆ ಎಂದು ಹೇಳಿದರು.
ಸಂಗೀತ ನಿರ್ದೇಶಕ ಸತೀಶ್ ಮೌರ್ಯ ಮಾತನಾಡಿ ನಾನು ಹಂಸಲೇಖರ ಬಳಿ ೮ ವರ್ಷ ಕೆಲಸ ಮಾಡಿದ್ದೆ, ಈ ಚಿತ್ರದಲ್ಲಿ ೩ ಹಾಡುಗಳು ಹಾಗೂ ೪ ಬಿಟ್ ಸಾಂಗ್ ಇದ್ದು, ದೇಸೀ ಶೈಲಿಯ ವಾದ್ಯಗಳನ್ನೇ ಬಳಸಿ ಮ್ಯೂಸಿಕ್ ಮಾಡಿದ್ದೇನೆ ಎಂದು ಹೇಳಿದರು, ನಂತರ ರಾಜಕುಮಾರ್ ನಾಯಕ್ ಮಾತನಾಡಿ ನಾನು ಈ ಚಿತ್ರದಲ್ಲಿ ಒಬ್ಬ ಮಂತ್ರಿಯ ಪಾತ್ರವನ್ನು ಮಾಡಿದ್ದೇನೆ. ಮೆಡಿಕಲ್ ಮಾಫಿಯಾ ಹೇಗೆ ಆಯುರ್ವೇದವನ್ನು ತುಳಿದು ಹಾಕುತ್ತಿದೆ ಎಂಬುದನ್ನು ಈ ಚಿತ್ರದಲ್ಲಿ ಚೆನ್ನಾಗಿ ತೋರಿಸಿದ್ದಾರೆ ಎಂದು ಹೇಳಿದರು.