ಜಗತ್ತಿನಲ್ಲಿ ದೆವ್ವ, ಭೂತಗಳು ಇದೆಯೋ ಇಲ್ಲವೊ ಗೊತ್ತಿಲ್ಲ. ಆದರೆ ಅವುಗಳ ಸತ್ಯಾಸತ್ಯತೆಯ ಹುಡುಕಾಟ ಮಾತ್ರ ನಡೆದೇ ಇದೆ. ಅಂಥದೇ ಒಂದು ಹುಡುಕಾಟದ ಪ್ರಯತ್ನದಲ್ಲಿ ಹೊರಬಂದ ಚಿತ್ರವೇ ಮಾಂತ್ರಿಕ. ಐಟಿ ಹಿನ್ನೆಲೆಯಿಂದ ಬಂದ ವ್ಯಾನವರ್ಣ ಜಮ್ಮುಲ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಪ್ರಮುಖ ಪಾತ್ರದಲ್ಲೂ ಸಹ ಕಾಣಿಸಿಕೊಂಡಿದ್ದಾರೆ, ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಘೋಸ್ಟ್ ಹಂಟರ್(ಆತ್ಮಗಳನ್ನು ಪತ್ತೆಹಚ್ಚುವವ) ಸುತ್ತ ನಡೆಯುವ ಇಂಟಲೆಕ್ಚುಯಲ್, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಈ ಚಿತ್ರದಲ್ಲಿದೆ, ದೆವ್ವ ಅನ್ನೋದು ಇದೆಯೋ ಇಲ್ಲವೋ ಅಥವಾ ಅದೆಲ್ಲಾ ನಮ್ಮ ಭ್ರಮೆಯೋ ಎನ್ನುವುದರ ಸುತ್ತ ಸಾಗುವ ಕಥೆ ಈ ಚಿತ್ರದಲ್ಲಿದ್ದು, ರಾಧಿಕಾ ಮಾಲಿ ಪಾಟೀಲ ಹಾಗೂ ಮೈಥಿಲಿ ನಾಯಕ್ ನಾಯಕಿಯರಾಗಿ ನಟಿಸಿದ್ದಾರೆ.
ಈ ಸಂದರ್ಭದಲ್ಲಿ ನಿರ್ಮಾಪಕಿ, ನಿರ್ದೇಶನದಲ್ಲೂ ಸಾಥ್ ನೀಡಿದ ವ್ಯಾನವರ್ಣ ಅವರ ಪತ್ನಿ ಆಯನ ಮಾತನಾಡಿ ನಾನು ಎಂಎನ್ ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು. ಈಗಾಗಲೇ ಸಿನಿಮಾ ನೋಡಿದ್ದೇನೆ. ಜಗತ್ತಿನಲ್ಲಿ ಮಾಟ, ಮಂತ್ರ ಅನ್ನೋದು ಇದೆಯಾ ಎಂಬುದರ ರಿಯಾಲಿಟಿ ಬಗ್ಗೆ ಹೇಳುವ ಚಿತ್ರವಿದು. ಅದೇ ಕಾರಣಕ್ಕೆ ಈ ಸಿನಿಮಾ ನಿರ್ಮಾಣದಲ್ಲಿ ನಾನೂ ಜೊತೆಯಾದೆ. ದಸರಾ ವೇಳೆಗೆ ರಿಲೀಸ್ ಮಾಡುವ ಪ್ಲಾನ್ ಇದೆ ಎಂದರು. ನಂತರ ಮಾತನಾಡಿದ ವ್ಯಾನ ವರ್ಣ ಜಮ್ಮುಲ, ಮಾನವ ದಿನದ 24 ಘಂಟೆಯೂ ಮಾನವ ಭಯದಲ್ಲೇ ಬದುಕುತ್ತಿದ್ದಾನೆ. ಮೊದಲು ಅ ಭಯವನ್ನು ನಮ್ಮ ಮನಸಿನಿಂದ ತೆಗೆದುಹಾಕಿ, ಕಮ್ ಟು ರಿಯಾಲಿಟಿ ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ. ದೆವ್ವ ಇದೆಯೋ, ಇಲ್ವೋ, ಇದ್ರೆ ಅದು ಹೇಗಿರುತ್ತೆ, ಅಥವಾ ಇದು ಸೈಕಲಾಜಿಕಲ್ ಫೀಲಿಂಗೋ ? ಎಂಬುದನ್ನೂ ಸಹ ಚಿತ್ರದಲ್ಲಿ ತೋರಿಸಿದ್ದೇವೆ.ಸಿಟಿಆರ್(ಕಮ್ ಟು ರಿಯಾಲಿಟಿ) ಅರ್ಗನೈಜೇಶನ್ ನಡೆಸೋ ದೆವ್ವಗಳನ್ನು ಹಂಟರ್ ಕೃಷ್ಣನ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ದೆವ್ವಗಳ ಬಗ್ಗೆ ಕೇಳಿ ಬಂದವರಿಗೆ ಸಲಹೆ ನೀಡುವುದು ಆತನ ಕೆಲಸ.
ಭಯ ಅನ್ನೋದು ಎಲ್ಲರಿಗೂ ಕನೆಕ್ಟ್ ಆಗುತ್ತೆ. ಜನರಿಗೆ ಆ ಬಗ್ಗೆ ಎಜುಕೇಟ್ ಮಾಡಬೇಕು, ಜೊತೆಗೆ ಎಂಟರ್ ಟೈನ್ ಮೆಂಟ್ ಕೊಡಬೇಕೆಂದು ಮಾಡಿದ ಚಿತ್ರವಿದು. ಮೂಢನಂಬಿಕೆಗಳಿಂದ ಮೂಢರಾಗಬೇಡಿ, ಅದರ ಹಿಂದಿನ ಸತ್ಯಾಂಶ ಬೇರೇನೇ ಇರುತ್ತೆ, ಅದನ್ನು ನೋಡಿದ ಮೇಲೆ ನಿರ್ಧರಿಸಿ ಅಂತ ಇದರಲ್ಲಿ ಹೇಳಿದ್ದೇವೆ. ಬೆಂಗಳೂರು, ಮಂಗಳೂರು ಅಲ್ಲದೆ ಬೆಂಗಳೂರಿನಲ್ಲಿ ಖಾಲಿ ಇದ್ದ ಮಾಲ್‌ವೊಂದರಲ್ಲಿ ಪ್ರಮುಖ ಭಾಗದ ಚಿತ್ರೀಕರಣ ಮಾಡಿದ್ದೇವೆ. ಮಾಲ್‌ನಲ್ಲಿ ಶೂಟ್ ಮಾಡುವಾಗ ಚಿತ್ರತಂಡಕ್ಕೆ ಸಾಕಷ್ಟು ವಿಚಿತ್ರ ಅನುಭವಗಳಾಗಿವೆ ಎಂದು ಹೇಳಿದರು, ನಿರ್ಮಾಣದಲ್ಲಿ ಕೈ ಜೋಡಿಸಿದ ದುಶ್ಯಂತ್ ಗೋಲ್ಡ್, ಅಲ್ಲದೆ ಬೆಳ್ಳಿದೀಪ ಗೋವಿಂದ್, ದೇವೇಂದ್ರ, ಮುಂಜಾನೆ ಮಂಜು, ಜಗದೀಶ್ ಎಲ್ಲರೂ ಚಿತ್ರದ ಬಗ್ಗೆ ಮಾತನಾಡಿದರು. ಕೃಷ್ಣ ಸಂಕುಲ ಬ್ರಾಂಡಿಂಗ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸೆನ್ಸಾರ್ ನಿಂದ ಯು/ಎ ಪ್ರಮಾಣಪತ್ರ ಸಿಕ್ಕಿದ್ದು ಮುಂದಿನ ತಿಂಗಳು ರಿಲೀಸ್ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಇನ್ನು ಈ ಚಿತ್ರಕ್ಕೆ ನಿರ್ದೇಶಕರೇ ಸಂಕಲನ ಮಾಡಿದ್ದು, ಸ್ಟಾಲಿನ್ ಅವರ ಸಂಗೀತ ಸಂಯೋಜನೆ, ಅನಿಲ್ ಆಂಟೋನಿ ಹಾಗೂ ರಮೇಶ್ ಮರ‍್ರಿಪಲ್ಲಿ ಅವರ ಛಾಯಾಗ್ರಹಣ, ಲಯನ್ ಜಿ.ಗಂಗರಾಜು ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.