ದಕ್ಷಿಣ ಭಾರತ ಸಿನಿಮಾ ಲೋಕವನ್ನು ಕಂಗೊಳಿಸಿದ ಈ ಸುದ್ದಿ ಈಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ! ಭೂತಾನ್ ಮೂಲದ ಐಷಾರಾಮಿ ವಾಹನಗಳ ಅಕ್ರಮ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆಯ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ಇಂದು ಬೆಳಗ್ಗಿನಿಂದಲೇ ಮಲಯಾಳಂ ತಾರೆಯರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ.

ಚೆನ್ನೈನಲ್ಲಿ ಇರುವ ಮಮ್ಮುಟ್ಟಿ ಅವರ ಚಿತ್ರ ನಿರ್ಮಾಣ ಸಂಸ್ಥೆ, ದುಲ್ಕರ್ ಸಲ್ಮಾನ್ ಅವರ ಕಚೇರಿ, ಪೃಥ್ವಿರಾಜ್ ಹಾಗೂ ಅಮಿತ್ ಚಕ್ಕಲಕಲ್ ಮನೆಗಳ ಮೇಲೂ ಶೋಧ ಕಾರ್ಯಾಚರಣೆ ನಡೆದಿದೆ. ಈ ದಾಳಿ ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್, ಮಲಪ್ಪುರಂ, ಕೊಟ್ಟಾಯಂ ಮತ್ತು ಕೊಯಮತ್ತೂರು ಸೇರಿದಂತೆ 17 ಕಡೆಗಳಲ್ಲಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಫೆಮಾ (FEMA) 1999ರ ಕಾಯ್ದೆಯಡಿ ನಡೆಯುತ್ತಿರುವ ಈ ಶೋಧವು ಇಂಡೋ-ಭೂತಾನ್ ಮತ್ತು ನೇಪಾಳ ಮಾರ್ಗಗಳ ಮೂಲಕ ಲ್ಯಾಂಡ್ ಕ್ರೂಸರ್, ಡಿಫೆಂಡರ್, ಮಸೆರಾಟಿ ಸೇರಿದಂತೆ ಅನೇಕ ಐಷಾರಾಮಿ ಕಾರುಗಳನ್ನು ಅಕ್ರಮವಾಗಿ ದೇಶಕ್ಕೆ ತರಿಸಿ, ನಕಲಿ ದಾಖಲೆಗಳ ಆಧಾರದ ಮೇಲೆ ನೋಂದಣಿ ಪಡೆದು ಮಾರಾಟ ಮಾಡುತ್ತಿದ್ದ ಸಿಂಡಿಕೇಟ್‌ನ್ನು ಗುರಿಯಾಗಿಸಿದೆ.
ಆರೋಪದ ಪ್ರಕಾರ, ಅರುಣಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶದ ನೋಂದಣಿ ಸಂಖ್ಯೆಗಳ ಅಡಿಯಲ್ಲಿ ನಕಲಿ ದಾಖಲೆಗಳನ್ನು ಸಿದ್ಧಪಡಿಸಿ, ಸಿನಿಮಾ ನಟರು ಹಾಗೂ ಉದ್ಯಮಿಗಳಿಗೆ ಕಾರುಗಳನ್ನು ಮಾರಾಟ ಮಾಡಲಾಗಿದೆ. ಈ ಪ್ರಕರಣದಲ್ಲಿ ಇನ್ನಷ್ಟು ತಾರೆಯರು ಸಿಲುಕುವ ಸಾಧ್ಯತೆ ಇದೆ ಎಂದು ತನಿಖಾ ಮೂಲಗಳು ಹೇಳುತ್ತಿವೆ.
