ಓ ಎಂಬ ಹಾರರ್ ಸಿನಿಮಾ ನಿರ್ದೇಶಿಸಿದ್ದ ಮಹೇಶ ಸಿ ಅಮ್ಮಳ್ಳಿದೊಡ್ಡಿ ಎರಡನೇ ಹೆಜ್ಜೆ ಲವ್. ಟೈಟಲ್ ಹೇಳುವಂತೆ ಇದೊಂದು ಪ್ರೇಮ ಕಥಾಹಂದರದ ಚಿತ್ರ. ಈ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಈ ಹಿಂದೆ ರಿಲೀಸ್ ಆಗಿದ್ದ ಕಣ್ಮಣಿ ಹಾಡಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಅದರ ಬೆನ್ನಲ್ಲೇ ಈಗ ಒಂಟಿ ಅಲ್ಲ ನಾನೀಗ ಎಂಬ ಮಲೋಡಿ ಗಾನಲಹರಿ ಬಿಡುಗಡೆಯಾಗಿದೆ. ಹೃದಯ ಶಿವ ಸಾಹಿತ್ಯ ಬರೆದಿರುವ ಹಾಡಿಗೆ ಕೀರ್ತಿ ಮಾರಾತೆ ಧ್ವನಿಯಾಗಿದ್ದು, ಸಾಯಿ ಶ್ರೀ ಕಿರಣ್ ಟ್ಯೂನ್ ಹಾಕಿದ್ದಾರೆ. ಪ್ರೇಮಿಗಳ ನಡುವಿನ ಮಧುರ ಪ್ರೇಮಗೀತೆಯಾಗಿರುವ ಈ ಹಾಡಿನಲ್ಲಿ ಯುವ ಪ್ರತಿಭೆಗಳಾದ ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ್ ಕಾಣಿಸಿಕೊಂಡಿದ್ದಾರೆ.
ಶ್ರೀಕಾಲ ಭೈರವೇಶ್ವರ ಮೂವೀ ಮೇಕರ್ಸ್ ನಡಿ ದಿವಾಕರ್.ಎಸ್ ಲವ್ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಮೂಲಕ ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ ನಾಯಕ ಹಾಗೂ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾಗುತ್ತಿದ್ದಾರೆ. ಕಾಂತಾರ ಸಿನಿಮಾ ಖ್ಯಾತಿಯ ಪ್ರಭಾಕರ್ ಕುಂದರ್ ಬ್ರಹ್ಮಾವರ, ಸತೀಶ್ ಕಾಂತಾರ ಸೇರಿದಂತೆ ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ತಿಲಕ, ಪ್ರಸಾದ್ ಭಟ್, ಹರೀಶ್ ಶೆಟ್ಟಿ, ಸೌರಭ್ ಶಾಸ್ತ್ರೀ, ರಜತ್ ಶೆಟ್ಟಿ ಹಲವರು ಚಿತ್ರದ ಭಾಗವಾಗಿದ್ದಾರೆ. ಸಿದ್ದಾರ್ಥ್ ಹೆಚ್ ಆರ್ ಛಾಯಾಗ್ರಹಣ, ರೋಸಿತ್ ವಿಜಯನ್, ಶ್ರೀ ಸಾಯಿ ಕಿರಣ್ ಸಂಗೀತ, ಕಂಬಳಿಹುಳ ಖ್ಯಾತಿಯ ಶಿವ ಪ್ರಸಾದ್ ಹಿನ್ನಲೆ ಸಂಗೀತ, ಲೋಕೇಶ್ ಪುಟ್ಟೇಗೌಡ ಸಂಕಲನ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ. ನೈಜ ಘಟನೆಗಳಿಂದ ಪ್ರೇರಿತವಾದ ಕಥೆಯಾಗಿರುವ ಲವ್ ಸಿನಿಮಾವನ್ನು ಉಡುಪಿ, ಕೋಟ, ಕುಂದಾಪುರ, ಬೈಂದೂರ್, ಬಾಗಲಕೋಟೆ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಈಗಾಗಲೇ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಿದ್ದವಾಗಿರುವ ಸಿನಿಮಾ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ.
https://youtu.be/DqUuxF3kbSY