ಸ್ಯಾಂಡಲ್‌ವುಡ್‌ನ ತಾರಾ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು, ‘ಲವ್ ಬರ್ಡ್ಸ್’ ಚಿತ್ರದ ಮೂಲಕ ಪ್ರೇಕ್ಷಕರ ಮನಗೆಲಲ್ಲಲು ಮತ್ತೆ ಜೋಡಿಯಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರವನ್ನು ಕಡ್ಡಿಪುಡಿ ಚಂದ್ರು ಅವರು ನಿರ್ಮಾಣ ಮಾಡುತ್ತಿದ್ದು, ಪಿಸಿ ಚಂದ್ರಶೇಖರ್ ಅವರು ಚಿತ್ರಕ್ಕೆ ಆ್ಯಕ್ಷನ್, ಕಟ್ ಹೇಳುತ್ತಿದ್ದಾರೆ.
ಚಿತ್ರದ ನಾಯಕ ನಟನ ಪಾತ್ರಕ್ಕೆ ಡಾರ್ಲಿಂಗ್ ಕೃಷ್ಣ ಅವರನ್ನು ಫೈನಲ್ ಮಾಡಿದ್ದ ಚಿತ್ರ ತಂಡ, ನಾಯಕ ನಟಿಗಾಗಿ ಹುಡುಕಾಟ ನಡೆಸಿತ್ತು. ಇದೀಗ ನಟಿಯ ಪಾತ್ರಕ್ಕೆ ಮಿಲನಾ ನಾಗರಾಜ್ ಅವರನ್ನೇ ಆಯ್ಕೆ ಮಾಡಿದೆ.
‘ಲವ್ ಮಾಕ್ಟೇಲ್ 2’ ಯಶಸ್ಸಿನ ಸಂತಸದಲ್ಲಿರುವ ಈ ಜೋಡಿ ಮತ್ತೊಂದು ಚಿತ್ರದಲ್ಲಿ ತೆರೆ ಹಂಚಿಕೊಳ್ಳುವುದು ಸಿನಿ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಮದುವೆ ಆದ ಮೇಲಿನ ಪ್ರೀತಿಯ ಕತೆಯೊಂದರಲ್ಲಿ ಇಬ್ಬರೂ ಕಾಣಿಸಿಕೊಳ್ಳುತ್ತಿದ್ದಾರೆ.
ನಿಜ ಜೀವನದಲ್ಲಿಯೂ ದಂಪತಿಗಳಾಗಿರುವ ಈ ಜೋಡಿ ಚಿತ್ರದಲ್ಲಿ ಜೋಡಿಯಾಗಿ ನಟಿಸುತ್ತಿರುವುದಕ್ಕೆ ನಿರ್ದೇಶಕ ಶೇಖರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನಿಜವಾದ ಜೋಡಿಗಳು ಚಿತ್ರದಲ್ಲಿ ನಟಿಸುತ್ತಿದ್ದು, ಇದು ಚಿತ್ರವನ್ನು ಮತ್ತಷ್ಟು ಆಸಕ್ತಿದಾಯಕವಾಗುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಮದುವೆಗೆ ಮುನ್ನ ಪ್ರೀತಿ ಮಾಡುವವರಿಗಿಂತ ಮದುವೆಯಾದ ಮೇಲೆ ತಮ್ಮ ಪತ್ನಿ ಅಥವಾ ಪತಿಯನ್ನು ಪ್ರೀತಿಸುವವರು ಇರುತ್ತಾರೆ. ಅಂತಹ ಒಂದು ಜೋಡಿಯ ಕಥೆಯೇ ‘ಲವ್ ಬರ್ಡ್ಸ್’ ಸಿನಿಮಾ. ಇದರ ಜತೆಗೆ ಮೊದಲೆಲ್ಲಾ ಮಹಿಳೆಯರು ಪತಿಯ ದುಡಿಮೆಯ ಮೇಲೆ ಅವಲಂಬಿತರಾಗುತ್ತಿದ್ದರು. ಈಗ ಅದು ಬದಲಾಗಿದೆ. ಕೆಲಸಕ್ಕೆ ಹೋಗಿ ತಾವೇ ದುಡಿಯುವ ಗೃಹಿಣಿಯರ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿ ಗೃಹಿಣಿ ದುಡಿಯಲು ಆರಂಭಿಸಿದರೆ ಬದುಕು ಮತ್ತು ಆಲೋಚನಾ ಶೈಲಿ ಎಲ್ಲವೂ ಬದಲಾಗಿರುತ್ತವೆ. ಈ ಬದಲಾವಣೆಯಲ್ಲಿ ಬರುವ ಸಣ್ಣ ಸಣ್ಣ ಸಮಸ್ಯೆಗಳನ್ನು ನಿರ್ವಹಿಸಿ, ಪತಿ-ಪತ್ನಿಯ ನಡುವೆ ಪ್ರೀತಿಯೇ ಅಂತಿಮ ಎಂದು ಸಾರುವ ಕಥೆ ಈ ಸಿನಿಮಾದಲ್ಲಿದೆ. ಇದರಲ್ಲಿ ದುಡಿಯುವ ಗೃಹಿಣಿಯರನ್ನು ಮಿಲನಾ ನಾಗರಾಜ್ ಪ್ರತಿನಿಧಿಸಲಿದ್ದಾರೆ’ ಎಂದು ಹೇಳಿದ್ದಾರೆ ನಿರ್ದೇಶಕ ಪಿ.ಸಿ. ಶೇಖರ್.
ಬೆಂಗಳೂರಿನ ಎಚ್‌ಎಂಟಿ ಫ್ಯಾಕ್ಟರಿಯಲ್ಲಿ 18 ಸೆಟ್ ಹಾಕಿ ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ಮುಗಿಸಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಇದು ಪಿ. ಸಿ. ಶೇಖರ್ ಮತ್ತು ಅರ್ಜುನ್ ಜನ್ಯರ 9ನೇ ಕಾಂಬಿನೇಶನ್ ಆಗಿದೆ.
ಚಿತ್ರದ ಚಿತ್ರೀಕರಣ ಮೇ.30 ರಿಂದ ಆರಂಭವಾಗುತ್ತಿದ್ದು, ಸುಮಾರು 55 ದಿನಗಳ ಕಾಲ ಚಿತ್ರೀಕರಣ ಮುಂದುವರೆಯಲಿದೆ. ಚಿತ್ರೀಕರಣಕ್ಕೆ 18 ಪ್ರದೇಶಗಳನ್ನು ಫೈನಲ್ ಮಾಡಲಾಗಿದೆ. ಈ ಪ್ರದೇಶಗಳಲ್ಲಿಯೇ ಬಹುತೇಕ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಚಿತ್ರದಲ್ಲಿ ಒಟ್ಟು ಹಾಡುಗಳಿವೆ. ‘ಲವ್ ಬರ್ಡ್ಸ್ ಮ್ಯೂಸಿಕಲ್ ಲವ್ ಸ್ಟೋರಿ ಆಗಿದ್ದು, ಇದರಲ್ಲಿ ನಾಯಕ ಮತ್ತು ನಾಯಕಿಯ ಕೋಪ, ಪ್ರೀತಿ, ಸಂತೋಷವನ್ನು ವ್ಯಕ್ತಪಡಿಸುವಂತಹ ಹಾಡುಗಳಿವೆ ಎಂದು ಮಾಹಿತಿ ನೀಡಿದ್ದಾರೆ.