ಹೆಸರೇ ಹೇಳುವಂತೆ ಲಾಂಗ್‌ಡ್ರೈವ್ ಒಂದು ಜರ್ನಿ ಕಥೆಯಾಗಿದ್ದು, ರೊಮ್ಯಾಂಟಿಕ್ ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿಬಂದಿದೆ. ಈ ಚಿತ್ರವನ್ನು ಗುಡ್‌ವೀಲ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಮಂಜುನಾಥ್‌ಗೌಡ ಬಿ.ಆರ್.(ಶಬರಿ ಮಂಜು) ಅವರು ನಿರ್ಮಿಸಿದ್ದಾರೆ. ಈಗಿನ ಕಾಲದ ಬಹುತೇಕ ಯುವಕ, ಯುವತಿಯರಲ್ಲಿ ಲಾಂಗ್ ಡ್ರೈವ್ ಹೋಗೋ ಕ್ರೇಜ್ ಇದ್ದೇ ಇರುತ್ತದೆ. ಇಂಥದೇ ಕಂಟೆಂಟ್ ಇಟ್ಟುಕೊಂಡು ಯುವನಿರ್ದೇಶಕ ಶ್ರೀರಾಜ್ ಅವರು ಲಾಂಗ್ ಡ್ರೈವ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಫೆಬ್ರವರಿ ೧೦ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಅರ್ಜುನ್ ಯೋಗಿ, ಸುಪ್ರೀತಾ ಸತ್ಯನಾರಾಯಣ್, ತೇಜಸ್ವಿನಿ ಪ್ರಕಾಶ್ , ಬಲ ರಾಜವಾಡಿ ಸೇರಿದಂತೆ ಅನೇಕರು ನಟಿಸದ್ದಾರೆ. ನಿರ್ಮಾಪಕ ಶಬರಿ ಮಂಜು ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾತನಾಡುತ್ತ, ನನ್ನ ಮೊದಲ ಚಿತ್ರವಿದು, ಸಿನಿಮಾ ಮಾಡಬೇಕೆನ್ನುವುದು ಬಹುದಿನಗಳ ಕನಸು. ಚಿತ್ರದಲ್ಲಿ ಮಣಿ ಎಂಬ ಪಾತ್ರ ಮಾಡಿದ್ದೇನೆ. ಆತ ರೌಡಿನೂ ಅಲ್ಲ, ಒಂಥರಾ ಸೋಂಬೇರಿ, ಆತನಿಗೆ ನಾಟಕದ ಹುಚ್ಚು, ನಾಯಕ ನಾಯಕಿ ಜೊತೆ ಇವನ ಪಾತ್ರ ಹೇಗೆ ಲಿಂಕ್ ಆಗುತ್ತೆ ಅನ್ನೋದು ಚಿತ್ರ ದಲ್ಲಿದೆ. ೨೩ ವರ್ಷದಿಂದ ಟ್ರಾವೆಲ್ ಬ್ಯುಸಿನೆಸ್ ಮಾಡುತ್ತಿದ್ದೇನೆ. ಈ ಥರದ ಘಟನೆ ಎಲ್ಲರ ಲೈಫ್ ನಲ್ಲೂ ಆಗಿರತ್ತೆ. ನಮ್ಮ ಸ್ನೇಹಿತನ ಜೀವನದಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ಈ ಚಿತ್ರ ಮಾಡಿದ್ದೇನೆ. ಈ ಮೂಲಕ ಅಭಿನಯ, ನಿರ್ಮಾಣದ ಎರಡೂ ಕನಸು ನೆರವೇರಿದೆ ಎಂದು ಹೇಳಿದರು. ನಾಯಕ ಅರ್ಜುನ್‌ಯೋಗಿ ಈ ಚಿತ್ರದಲ್ಲಿ ಅರ್ಜುನ್ ಎಂಬ ೨ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾನು ಅಣ್ಣಾ ಬಾಂಡ್ ಚಿತ್ರದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಬಂದೆ. ಇದು ನಾಯಕನಾಗಿ ನಟಿಸಿರುವ ೩ನೇ ಚಿತ್ರ. ಈ ಥರದ ಘಟನೆ ಎಲ್ಲರ ಜೀವನದಲ್ಲಿ ನಡೆದಿರುತ್ತೆ, ತೊಂದರೆಯಾದರೆ ತಿರುಗಿ ಬೀಳುವ ಪಾತ್ರ ನನ್ನದು. ಕೆಲಸ ಹುಡುಕುತ್ತಿರುವ ಹುಡುಗ. ಲಾಂಗ್ ಡ್ರೈವ್ ಗೂ ಮುಂಚೆ ಮತ್ತು ನಂತರ ಏನಾಗಿತ್ತು ಎನ್ನುವುದು ಕಥೆ. ಸಿನಿಮಾ ದಿಂದ ಈಚೆ ಬಂದ ಮೇಲೆ ಮಹಿಳೆಯರ ಸುರಕ್ಷತೆ ಕುರಿತ ಸಂದೇಶವೂ ಚಿತ್ರದಲ್ಲಿದೆ ಎಂದರು.
ನಟಿ ತೇಜಸ್ವಿನಿ ಶೇಖರ್, ಅನಿರೀಕ್ಷಿತವಾಗಿ ಈ ಚಿತ್ರ ಸಿಕ್ಕಿತು. ಪ್ರತಿಯೊಬ್ಬರಿಗೂ ಇಷ್ಟವಾಗುವ ಕಥೆ. ಮೀರಾ ಎಂಬ ಮುಗ್ದ ಹುಡುಗಿಯ ಪಾತ್ರ ಎಂದರೆ, ಮತ್ತೊಬ್ಬ ನಟಿ ಸುಪ್ರೀತಾ ಸತ್ಯನಾರಾಯಣ್ ಮಾತನಾಡಿ ನಾನೊಬ್ಬ ಡಾಕ್ಡರ್ ಪಾತ್ರ ಮಾಡಿದ್ದೇನೆ. ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣ ನಡೆಯಿತು.
ತಕ್ಷಣದ ನಿರ್ದಾರದಿಂದ ಎಲ್ಲರ ಜೀವನದಲ್ಲಿ ಏನೆಲ್ಲಾ ಆಗಲಿದೆ ಎಂದು ಹೇಳುವ ಚಿತ್ರವಿದು ಎಂದು ಹೇಳಿದರು. ಛಾಯಾಗ್ರಾಹಕ ಕಿಟ್ಟಿ ಕೌಶಿಕ್, ಕಲಾವಿದ ಬಾಲ ರಾಜವಾಡಿ ಚಿತ್ರದ ಕುರಿತು ಮಾತನಾಡಿದರು.
ನಾಲ್ಕು ಪ್ರಮುಖ ಪಾತ್ರಗಳ ಸುತ್ತ ನಡೆಯುವ ಕಥೆ ಇದಾಗಿದ್ದು, ಯಾವುದೇ ಪೂರ್ವತಯಾರಿ ಇಲ್ಲದೆ ಲಾಂಗ್‌ಡ್ರೈವ್ ಹೋದಾಗ ಏನೆಲ್ಲಾ ತೊಂದರೆ, ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ.
ಶ್ರೀರಾಜ್ ಇದೇ ಮೊದಲಬಾರಿಗೆ ಆ್ಯಕ್ಷನ್‌ಕಟ್ ಹೇಳಿರುವ ಚಿತ್ರವಿದು. ಚಿತ್ರದ ಕುರಿತಂತೆ ಮಾತನಾಡುತ್ತ ನಾನೊಬ್ಬ ಡೈರೆಕ್ಟರ್ ಆಗಬೇಕೆಂದು 14 ವರ್ಷ ಗಳ ಹಿಂದೆ ಚಿತ್ರರಂಗಕ್ಕೆ ಬಂದೆ. ಕವಿರಾಜ್, ರವಿ ಶ್ರೀವತ್ಸ ಅವರಜೊತೆ ಡೈಲಾಗ್ ರೈಟರ್ ಆಗಿದ್ದೆ. ೨೪ ಗಂಟೆಗಳಲ್ಲಿ ನಡೆಯುವ ಕಥೆ ಇದಾಗಿದ್ದು, ೧೮ರಿಂದ ೭೦ ವರ್ಷಗಳವರೆಗೆ ಎಲ್ಲಾ ವಯೋಮಾನದವರೂ ಸಹ ನೋಡುವಂಥ ಕಂಟೆಂಟ್ ಚಿತ್ರದಲ್ಲಿದ್ದು, ಚಿತ್ರ ನೋಡುವ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತದೆ. ಅವರ ಜೀವನದಲ್ಲಿ ಹಿಂದೆ ಆಗಿ ಹೋಗಿರುವ ಘಟನೆಗಳು ನೆನಪಾಗುತ್ತದೆ. ನಮ್ಮ ನಡುವೆ ಪ್ರತಿದಿನ ನಡೆಯುವ ಘಟನೆಗಳೇ ಈ ಸಿನಿಮಾದಲ್ಲಿವೆ. ಬೆಂಗಳೂರು, ತಾವರೆಕೆರೆ, ಮೈಸೂರು ಹಾಗೂ ರಾಮನಗರದ ಸುತ್ತಮುತ್ತ ೩೫ರಿಂದ ೪೦ ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಈಗಾಗಲೇ ಚಿತ್ರಕ್ಕೆ ಯು/ಎ ಸೆನ್ಸಾರ್ ಪ್ರಮಾಣ ಪತ್ರವೂ ಸಿಕ್ಕಿದೆ. ನಾವು ಎಲ್ಲೇ ಹೋದರೂ ಮನೆಯಲ್ಲಿ ತಿಳಿಸಿ ಹೋಗಬೇಕು ಎಂದು ಚಿತ್ರದ ಮೂಲಕ ಹೇಳಿದ್ದಾರೆ.
ಚಿತ್ರದ ಉಳಿದ ತಾರಾಗಣದಲ್ಲಿ ಬಲ ರಾಜ್ವಾಡಿ, ಮಹೇಶ್ ಗುರು, ಮೋಹನ್ ಅನ್ನಳ್ಳಿ ಮುಂತಾದವರಿದ್ದಾರೆ. ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು ೨ ಹಾಡನ್ನು ಮಾತ್ರವೇ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ವಿಕಾಸ್ ವಸಿಷ್ಠ ಅವರ ಸಂಗೀತ ಸಂಯೋಜನೆ, ರಾಮಿ ಶೆಟ್ಟಿ ಪವನ್ ಅವರ ಸಂಕಲನ, ಕಿಟ್ಟಿ ಕೌಶಿಕ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ, ಹಾಡುಗಳಿಗೆ ವಿಕಾಸ ವಸಿಷ್ಠ, ಶರತ್ ಆಸ್ಕರ್, ಜೀವನ್ ಅವರ ಸಾಹಿತ್ಯವಿದ್ದು, ರಾಜೇಶ್ ಕೃಷ್ಣನ್, ಮಾನಸ ಹೊಳ್ಳ, ಸ್ಪರ್ಶ ಆರ್.ಕೆ, ದನಿಯಾಗಿದ್ದಾರೆ.