ಇತ್ತೀಚೆಗಷ್ಟೇ ಬಿಡುಗಡೆಯಾದ ಮಲಯಾಳಂ ಸೂಪರ್ ಹೀರೋ ಸಿನಿಮಾ ‘ಲೋಕಃ’ ಭಾರೀ ಯಶಸ್ಸು ಕಂಡಿದೆ. ಕೇವಲ 30 ಕೋಟಿ ಬಜೆಟ್‌ನಲ್ಲಿ ದುಲ್ಕರ್ ಸಲ್ಮಾನ್ ನಿರ್ಮಿಸಿದ್ದ ಈ ಸಿನಿಮಾ ಈಗಾಗಲೇ 200 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ದಾಟಿ, ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಕಥೆಯಾಗಿ ಚಿತ್ರಮಂದಿರಗಳಲ್ಲಿ ಇನ್ನೂ ಯಶಸ್ವಿಯಾಗಿ ಓಡುತ್ತಿರುವಾಗಲೇ, ಇಂದು (ಸೆಪ್ಟೆಂಬರ್ 27) ಎರಡನೇ ಭಾಗ ‘ಲೋಕಃ 2’ ಅಧಿಕೃತವಾಗಿ ಘೋಷಣೆಯಾಗಿದೆ.

ಮೊದಲ ಭಾಗದಲ್ಲಿ ಕಲ್ಯಾಣಿ ಪ್ರಿಯದರ್ಶನ್ ನಾಯಕಿಯಾಗಿ ಮಿಂಚಿದ್ದರೂ, ಈ ಬಾರಿ ಅವರು ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ, ಇಬ್ಬರು ಸೂಪರ್ ಸ್ಟಾರ್ ನಟರು – ಟೊವಿನೊ ಥಾಮಸ್ ಹಾಗೂ ದುಲ್ಕರ್ ಸಲ್ಮಾನ್ ಒಟ್ಟಿಗೆ ನಟಿಸುತ್ತಿದ್ದಾರೆ. ಇವರಲ್ಲಿ ಒಬ್ಬರ ಪಾತ್ರ ಅತಿಥಿ ಪಾತ್ರವಾಗಿರಲಿದೆ.
ಟೀಸರ್‌ನಲ್ಲಿ ಟೊವಿನೊ (ಮೈಖಲ್) ಹಾಗೂ ದುಲ್ಕರ್ (ಚಾರ್ಲಿ) ಸೂಪರ್ ಹೀರೋಗಳಾಗಿ ಮುಖಾಮುಖಿಯಾಗುತ್ತಾರೆ. ಮೈಖಲ್ “ಮೊದಲ ಅಧ್ಯಾಯ ನೀಲಿಯದ್ದು, ಎರಡನೇ ಅಧ್ಯಾಯ ನನ್ನದು” ಎಂದು ಪುಸ್ತಕ ತೋರಿಸುವ ಸಂಭಾಷಣೆ ಕುತೂಹಲ ಹೆಚ್ಚಿಸಿದೆ. ಟೀಸರ್‌ನಲ್ಲಿ, ಮೈಖಲ್‌ಗೆ 389 ಮಂದಿ ಸಹೋದರರಿದ್ದಾರೆ ಎಂಬ ಸಸ್ಪೆನ್ಸ್ ಬಿಚ್ಚಿಡಲಾಗುತ್ತದೆ. ಮತ್ತೊಂದು ಅಚ್ಚರಿಯ ವಿಷಯವೆಂದರೆ – ಚಾರ್ಲಿಯೇ ಹಿಟ್ಲರ್‌ನ್ನು ಕೊಂದಿದ್ದಾನೆ ಎನ್ನುವ ಬಾಂಬ್ ಡೈಲಾಗ್!

ಕಥೆಯಲ್ಲಿ ಮೈಖಲ್‌ಗೊಂದು ದೊಡ್ಡ ಸವಾಲು ಎದುರಾಗಲಿದೆ. ಅವನ ಅಣ್ಣ, ಕ್ರೂರ ಸ್ವಭಾವದ ಭೀಕರ ಖಳನಾಯಕನಾಗಿ ವಾಪಸ್ಸಾಗುತ್ತಾನೆ. “ನಾನು ಕರೆದರೆ ಬರುತ್ತೀಯಾ?” ಎಂದು ಮೈಖಲ್ ಕೇಳುವಾಗ, ಚಾರ್ಲಿ “ನಾನು ಬರುವುದಿಲ್ಲ” ಎನ್ನುತ್ತಾನೆ. ಆದರೆ ಮೈಖಲ್‌ಗೆ ಗೊತ್ತು – ಚಾರ್ಲಿ ಬಂದೇ ಬರುತ್ತಾನೆ, ಇಲ್ಲದಿದ್ದರೆ ಗಾಬ್ಲಿನ್‌ಗಳು ಅವನನ್ನು ಬಲವಂತವಾಗಿ ಕರೆತರುತ್ತಾರೆ.
‘ಲೋಕಃ 2’ ಸಿನಿಮಾವನ್ನು ಮೊದಲ ಭಾಗವನ್ನು ನಿರ್ದೇಶಿಸಿದ್ದ ಡಾಮಿನಿಕ್ ಅರುಣ್ವೇ ನಿರ್ದೇಶಿಸುತ್ತಿದ್ದಾರೆ. ಟೊವಿನೊ ಥಾಮಸ್ ಈ ಚಿತ್ರದಲ್ಲಿ ದ್ವಿಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಟೀಸರ್‌ನ ಕೊನೆಯಲ್ಲಿ ಅನಿಮೇಷನ್ ಮೂಲಕ ಭೀಕರ ವಿಲನ್‌ನ ಚಿತ್ರಣ ತೋರಿಸಲಾಗಿದೆ – ಅಗಲವಾದ ಭುಜಗಳು, ಬಿಚ್ಚಿಟ್ಟ ಗಡ್ಡ-ಕೂದಲು, ಉರಿಯುವ ಕಣ್ಣುಗಳೊಂದಿಗೆ ಎಂಟ್ರಿ ಕೊಟ್ಟ ಈ ಪಾತ್ರವೇ ಸಿನಿಮಾದ ಪ್ರಮುಖ ಆಕರ್ಷಣೆಯಾಗಲಿದೆ.
