ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಸಿನಿಮಾ ಜಗತ್ತಿಗೂ ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ. ತಮ್ಮದೇ ಧೋನಿ ಎಂಟರ್ ಟೈನ್ಮೆಂಟ್ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಈ ಸಂಸ್ಥೆಯಡಿ ಧೋನಿ ಪತ್ನಿ ಸಾಕ್ಷಿ ಧೋನಿ ಲೆಟ್ಸ್ ಗೆಟ್ ಮ್ಯಾರೀಡ್ ಎಂಬ ತಮಿಳು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ಚೆನ್ನೈನಲ್ಲಿ ನೆರವೇರಿದೆ. ಕ್ಯಾಪ್ಟನ್ ಕೂಲ್ ತಮ್ಮದೇ ನಿರ್ಮಾಣ ಸಂಸ್ಥೆಯ ಚೊಚ್ಚಲ ಸಿನಿಮಾದ ಟ್ರೇಲರ್ ಅನಾವರಣ ಮಾಡಿ ಹಲವು ವಿಷಯಗಳನ್ನು ಹಂಚಿಕೊಂಡರು.
ಎಂ.ಎಸ್.ಧೋನಿ ಮಾತನಾಡಿ, ನಾನು ಈ ಸಿನಿಮಾವನ್ನು ನೋಡಿದ್ದೇನೆ. ತುಂಬಾ ಎಂಟರ್ ಟೈನರ್ ಆಗಿದೆ. ನಾನು ನನ್ನ ಮಗಳ ಜೊತೆ ಸಿನಿಮಾ ನೋಡಬಹುದು. ಅವಳು ತುಂಬಾ ಪ್ರಶ್ನೆಗಳನ್ನು ಕೇಳುತ್ತಾಳೆ. ಇಡೀ ಚಿತ್ರತಂಡ ಅದ್ಭುತ ಕೆಲಸ ಮಾಡಿದೆ. ಈ ಪ್ರಾಜೆಕ್ಟ್ ನ್ನು ಅವರು ನಿಭಾಯಿಸಿದ ರೀತಿ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಹೆಂಡತಿಗೆ ಸಿನಿಮಾ ಮಾಡಬೇಕು ಎಂದಾಗ ನಾನು ಹೇಳಿದ್ದು ಒಂದೇ, ಸಿನಿಮಾ ಮಾಡುವುದೆಂದರೆ ಮನೆ ವಿನ್ಯಾಸ ಮಾಡಿದಂತೆ ಅಲ್ಲ. ನೀವು ಗೋಡೆಗೆ ಬಣ್ಣ ಹಾಕುತ್ತೀರ. ನಿಮಗೆ ಇಷ್ಟವಿಲ್ಲ, ನೀವು ಬಣ್ಣವನ್ನು ಬದಲಾಯಿಸುತ್ತೀರಿ. ನಂತರ, ಮೊದಲ ಬಣ್ಣವು ಉತ್ತಮವಾಗಿದೆ ಎಂದು ನೀವು ಅರಿತುಕೊಳ್ಳುತ್ತೀರಿ ಮತ್ತು ನಂತರ ನೀವು ಅದನ್ನು ಮತ್ತೆ ಬಣ್ಣಿಸುತ್ತೀರಿ. ಸಿನಿಮಾಗಳಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಸಿನಿಮಾಗಳಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಲೆಟ್ಸ್ ಗೆಟ್ ಮ್ಯಾರೀಡ್ ಸಿನಿಮಾ ಸ್ವಲ್ಪ ದಿನಗಳಲ್ಲಿ ಥಿಯೇಟರ್ ಗೆ ಬರಲಿದೆ. ಅತ್ತೆ ಸೊಸೆ ಹಾಗೂ ಮಗನ ನಡುವೆ ನಡೆಯುವ ಕಥೆ ಎಂದರು.
ಸಾಕ್ಷಿ ಧೋನಿ ಮಾತನಾಡಿ, ನನ್ನ ಬಹಳಷ್ಟು ಸ್ನೇಹಿತರು ಮತ್ತು ನಮ್ಮ ಸುತ್ತಮುತ್ತಲಿನ ಪ್ರತಿಯೊಬ್ಬರೂ ಸಾಮಾನ್ಯವಾಗಿ ಜೀವನದಲ್ಲಿ ಇಂತಹ ಸನ್ನಿವೇಶಗಳನ್ನು ಎದುರಿಸಿದ್ದಾರೆ. ಹೀಗಾಗಿ ಇದನ್ನು ಚಲನಚಿತ್ರವಾಗಿ ಏಕೆ ಮಾಡಬಾರದು ಎಂದು ನಾವು ಯೋಚಿಸಿದ್ದೇವೆ. ಆದ್ದರಿಂದ ನಾವು ಮಾತನಾಡಿದ್ದೇವೆ. ಇದು ನಮ್ಮ ಮೊದಲ ಸಿನಿಮಾ ಆಗಿದ್ದರಿಂದ ತಮಿಳಿನಲ್ಲಿ ಮಾಡಲು ಬಯಸಿದ್ದೆವು. ಈ ಸಿನಿಮಾ ಮಾತ್ರವಲ್ಲದೆ ನಮ್ಮಲ್ಲಿರುವ ಉಳಿದ ಚೆನ್ನೈನಿಂದಲೇ ಶುರು ಮಾಡುತ್ತೇವೆ ಎಂದರು.
ರಮೇಶ್ ತಮಿಳಮಣಿ ನಿರ್ದೇಶನದ ಈ ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪಕ್ಕ ಫ್ಯಾಮಿಲಿ ಎಂಟರ್ ಟೈನರ್ ಚಿತ್ರವಾಗಿರುವ ಲೆಟ್ಸ್ ಗೆಟ್ ಮ್ಯಾರೀಡ್ ಆದಷ್ಟು ಬೇಗ ತೆರೆಗೆ ಬರಲಿದೆ.