ನಟ, ನಿರ್ದೇಶಕ ಮತ್ತು ನಿರ್ಮಾಪಕ ರಿಷಬ್ ಶೆಟ್ಟಿ ಇತ್ತೀಚಿಗೆ `ಶಿವಮ್ಮ‘ ಎಂಬ ಸಿನಿಮಾವನ್ನು ನಿರ್ಮಿಸಿ ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡಿದ್ದು ಗೊತ್ತೇ ಇದೆ, ಅದರ ಬೆನ್ನೆ ಹಿಂದೆಯೇ ಪ್ರಮೋದ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಲಾಫಿಂಗ್ ಬುದ್ಧ ಸಿನಿಮಾ ನಿರ್ಮಿಸಿ ಭರ್ಜರಿಯಾಗಿ ರಿಲೀಸ್ ಮಾಡಿದ್ದಾರೆ. ಕಾಮಿಡಿ ಜಾನರ್‌ನೊಳಗೆ ಸಸ್ಪೆನ್ಸ್ ಎಲಿಮೆಂಟ್‌ನ್ನು ಸೇರಿಸಿ ಪ್ರೇಕ್ಷಕನನ್ನು ಹಿಡಿದು ಕೂರಿಸುವಲ್ಲಿ `ಲಾಫಿಂಗ್ ಬುದ್ದ‘ ಗೆದ್ದಿದ್ದಾನೆ. ಹಾಗಿದ್ದರೆ `ಬುದ್ದ‘ ಕಾಮಿಡಿ ಗದ್ದುಗೆಯಲ್ಲಿನ ಅಸಲಿ ಕಥೆ ಏನು? ಗೋವರ್ಧನ್ ಶಿವಮೊಗ್ಗದ ನೀರೂರು ಪೊಲೀಸ್ ಠಾಣೆಯಲ್ಲಿ ಓರ್ವ ಕಾನ್‌ಸ್ಟೆಬಲ್. ಹೆಸರಿಗೆ ತಕ್ಕ ಹಾಗೇ ಬೃಹತ್ ದೇಹದ ಗೋವರ್ಧನ್‌ಗೆ ತಿನ್ನುವುದೇ ಸ್ವರ್ಗ, ಡಯಟ್ಟೇ ನರಕ. ತನ್ನ ತಿನ್ನುವ ಚಪಲವನ್ನೇ ದಾಳವನ್ನಾಗಿಸಿ ಕೇಸ್ ಕಲಾಸ್ ಮಾಡುವ ಕಾಯಕ ಆತನಗಿಗೆ ಗುಲಾಬ್ ಜಾಮೂನ್ ತಿಂದಷ್ಟೇ ಈಸೀ. ಇಂದಹ ಮುಗ್ಧ, ಸ್ನಿಗ್ಧ, ಅಮಾಯಕ ಗೋವರ್ಧನ್ ಅವಾಗವಾಗ ತನ್ನ `ದೇಹ ಸಿರಿ‘ಯಿಂದಾಗಿ ಇರುಸು ಮುರುಸಿಗೆ ಒಳಗಾಗುತ್ತಾನೆ. ಒಂದು ಹಂತದಲ್ಲಿ ಆತನ `ದೇಹ ಸಿರಿ‘ಯೇ ಆತನಿಗೆ ಮುಳುವಾಗುತ್ತದೆ. ಮೂರು ತಿಂಗಳೊಳಗೆ ಫಿಟ್ ಅಂಡ್ ಪೈನ್ ಆಗದೇ ಹೋದರೇ ಇರೋ ಕೆಲಸವನ್ನು ಕಳೆದುಕೊಳ್ಳುವ ಹಂತಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗೋವರ್ಧನ್‌ನ ಗೋಳೇನಾಗುತ್ತದೆ?
ಈ ಹಿಂದೆ ನಿರ್ದೇಶಕ ಭರತ್ ರಾಜ್ ರಿಷಬ್ ಶೆಟ್ಟಿಯನ್ನು `ಹೀರೋ‘ ರೂಪದಲ್ಲಿ ತೋರಿಸಿ ಸದ್ದು ಮಾಡಿದ್ದರು, ಇದೀಗ ಪ್ರಮೋದ್ ಅನ್ನು `ಲಾಫಿಂಗ್ ಬುದ್ಧ‘ನನ್ನಾಗಿಸಿ ಪರಿಚಯಿಸಿ ಹಾಸ್ಯದ ಒಗ್ಗರಣೆಯ ಮೂಲಕ `ಪೋಲಿಸ್ ವ್ಯವಸ್ಥೆ‘ಗೆ ಕನ್ನಡಿ ಹಿಡಿಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಒಂದೆಡೆ ಗೋವರ್ಧನ್‌ನ `ದೇಹ ಸಿರಿ‘ಯ ಕಥೆ ಹೇಳುತ್ತಲೇ, ಶಾಸಕರೊಬ್ಬರ `ಚೆಂಬು‘ ಪುರಾಣವನ್ನು ಹೇಳುತ್ತಾ ನೋಡುಗನನ್ನು `ಮುಂದೇನು‘ ಎಂದು ಯೋಚಿಸುವಂತೆ ಮಾಡಿದ್ದಾರೆ. ಪಸ್ಟ್ ಹಾಫ್‌ನಲ್ಲಿ ಪಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗುವ `ಬುದ್ದ‘, ಸೆಕೆಂಡ್ ಹಾಫ್‌ನಲ್ಲಿ ಡಿಸ್ಟಿಂಗ್ಷ್ನ್‌ನಲ್ಲಿ ಪಾಸಾಗುತ್ತಾನೆ. `ಪೊಲೀಸ್‘ ಕಥೆಯೊಳಗೆ ಅಪ್ಪಿತಪ್ಪಿಯೂ `ಪೋಲಿ‘ತನ ಕಾಣದಂತೆ ಎಚ್ಚರ ವಹಿಸಿರುವ ಚಿತ್ರತಂಡ, ಒಂದು ಕುಟುಂಬ ಸಮೇತರಾಗಿ ಕೂತು ನೋಡಿ ರಿಫ್ರೆಶ್ ಆಗುವಂತಹ ಸಿನಿಮಾ ನೀಡಿದೆ. ಪಾತ್ರಕ್ಕಾಗಿ ತೂಕ ಹೆಚ್ಚಿಸಿರು ಪ್ರಮೋದ್ ಆ ಮೂಲಕ ತಮ್ಮ ಪಾತ್ರದ ತೂಕವನ್ನೂ ತೆರೆಯ ಮೇಲೆ ಹೆಚ್ಚಿಸಿಕೊಂಡಿದ್ದಾರೆ. ತಾನೊಬ್ಬ ಹಿರೋ ಎಂಬುವುದನ್ನು ಬದಿಗಿಟ್ಟು ದಿಗಂತ್ ಮಂಚಾಲೆ, ಮಿಂಚಿನoತೆ ಎಂಟ್ರಿಕೊಟ್ಟು `ಶಾಕ್‘ ಕೊಡುತ್ತಾರೆ. ಆ ಶಾಖ್ ನ ಶಾಖ ಪ್ರೇಕ್ಷಕರನ್ನು ಆವರಿಸುವುದೇ ಚಿತ್ರಕಥೆಯ ಅಸಲಿ ತಾಕತ್ತು ಮತ್ತು ಗಮ್ಮತ್ತು. ಇದೇ ಪಾತ್ರವನ್ನು ರಿಷಭ್ ಮಾಡಿದರೆ ಹೇಗಿರುತ್ತಿತ್ತು? ಎಂಬುದನ್ನು ಯೋಚಿಸಲೂ ಟೈಮ್ ಕೊಡದೆ ದಿಗಂತ್ ಆವರಿಸಿ ಬಿಡುತ್ತಾರೆ. ಒಟ್ಟಿನಲ್ಲಿ ಪ್ರಮೋದ್-ದಿಗಂತ್ ಕಾಂಬಿನೇಶನ್ ಅದ್ಭುತವಾಗಿ ವರ್ಕ್ ಆಗಿದೆ.
ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಸಹಜತೆ. ಎಲ್ಲಾ ಪಾತ್ರಗಳು, ಲೋಕೇಶನ್ಸ್, ವಸ್ತಾçಲಂಕಾರ.. ಹೀಗೆ ಎಲ್ಲಾ ವಿಭಾಗಗಳಲ್ಲಿ ಸಹಜತೆಯನ್ನು ಕಾಣಬಹುದು. ಪೋಲಿಸ್ ಇಲಾಖೆಯಲ್ಲಿನ ಹುಳುಕುಗಳನ್ನು ಅತ್ಯಂತ ಸಮರ್ಥವಾಗಿ ಬಿಚ್ಚಿಡುವ `ಬುದ್ದ‘, ನೋಡುಗನಿಗೆ ಚೇತೋಹಾರಿ ಅನುಭವವನ್ನು ನೀಡುತ್ತಾನೆ. ಇನ್ನು, ಕಲಾವಿದರು ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ಸಣ್ಣ ಸಣ್ಣ ಪಾತ್ರವೂ ಪರಿಣಾಮಕಾರಿಯಾಗಿದೆ. ನಟ ಪ್ರಮೋದ್ ಶೆಟ್ಟಿಯ ತೆರೆಯ ಹಿಂದಿನ ಶ್ರಮ, ತೆರೆಯ ಮೇಲೆ ಎದ್ದು ಕಾಣುತ್ತದೆ. ರಂಗಭೂಮಿಯ ಹಿನ್ನಲೆ ಪ್ರಮೋದ್‌ಗೆ ವರವಾಗಿ ಪರಿಣಮಿಸಿದೆ. ಈ ಹಿಂದೆ `ಗಂಟುಮೂಟೆ‘ ಹೊತ್ತು ತಂದು ಕನ್ನಡಿಗರಲ್ಲಿ ಅಚ್ಚರಿ ಮೂಡಿಸಿದ್ದ ತೇಜು ಬೆಳವಾಡಿಯವರ `ಸತ್ಯವತಿ‘ ಪಾತ್ರದ ತೇಜಸ್ಸು ಸಿನಿಮಾಗೊಂದು ಚೌಕಟ್ಟು ನೀಡಿದೆ. ಸುಂದರ್ ರಾಜ್ ಅವರ ಎನರ್ಜಿ ಅವರು ಇನ್ನಷ್ಟು ತೆರೆಯ ಮೇಲೆ ಇರಬೇಕಿತ್ತು ಎಂದೆನಿಸುವ0ತೆ ಮಾಡುತ್ತದೆ. ಇನ್ನು, `ಗೂಗಲ್ ಮ್ಯಾನ್‘ ದೀಪಕ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು, ಮುಂದಿನ ದಿನಗಳಲ್ಲಿ ಇವರಿಗೆ ಇನ್ನಷ್ಟು ಪಾತ್ರಗಳು ಅರಸಿ ಬಂದರೆ ಅಚ್ಚರಿಯಿಲ್ಲ.
`ಎಂತಾ ಚಂದಾನೇ ಇವಳು‘ ಹಾಡನ್ನು ಚಿತ್ರಿಸಿರುವ ರೀತಿ `ಒನ್ಸ್ ಮೋರ್‘ ಅನ್ನುವ ರೀತಿಯಿದೆ. ಅನಿರುದ್ಧ್ ಮಹೇಶ್, ಭರತ್ ರಾಜ್ ಮತ್ತು ರಘು ನಿಡುವಳ್ಳಿಯವರ ಸಂಭಾಷಣೆ ಸಿನಿಮಾದ ಒಟ್ಟು ಆಶಯವನ್ನು ಪೂರೈಸಿದೆ. ಚಂದ್ರಶೇಖರ್ ಅವರ ಛಾಯಾಗ್ರಹಣ, ಸಿನಿಮಾ ಬಾಷೆಯಲ್ಲಿ ಹೇಳೋದಾದ್ರೆ.. `ಲಡ್ಡು.. ಲಡ್ಡು..‘ ಥರ ಇದೆ. ಮಲಯಾಳಂನಲ್ಲಿ ಈಗಾಗಲೇ ನಾಯಾಟ್ಟು, ಪ್ರೇಮುಲು ಸಿನಿಮಾ ಮೂಲಕ ಮನೆ ಮಾತಾಗಿರುವ ಸಂಗೀತ ನಿರ್ದೇಶಕ ವಿಷ್ಣು ವಿಜಯ್ `ಬುದ್ದ‘ನ ಮೂಲಕ ಕನ್ನಡದನ್ನೂ ವಿಜಯ ಪತಾಕೆ ಹಾರಿಸಿದ್ದಾರೆ. ಕೆ.ಎಮ್.ಪ್ರಕಾಶ್ ಅವರ ಕತ್ತರಿ ಪ್ರಯೋಗ ಸಿನಿಮಾದಲ್ಲಿ ಪ್ರಕಾಶಿಸಿದೆ. ಆಕ್ಷನ್ ಮೂರ್ತಿ ಮತ್ತು ಗೌತಮ್ ರಾಜ್ ಅವರ ಅತ್ಯಂತ ನೈಜ ಸಾಹಸ ದೃಶ್ಯಗಳು ನಿರ್ದೇಶಕರ ಕನಸಿಗೆ ಪೂರಕವಾಗಿವೆ. ಒಟ್ಟಿನಲ್ಲಿ, ಸಿಚುವೇಶನಲ್ ಕಾಮಿಡಿ ಜೊತೆ, ಪೊಲೀಸ್ ಇಲಾಖೆಯ ಡ್ರಾಜಿಡಿ, ಜೊತೆಗೊಂದಿಷ್ಟು ಸಸ್ಪೆನ್ಸ್ ಥ್ರಿಲ್ಲರ್‌ನ್ನು ಹೊತ್ತು ತಂದಿರುವ `ಬುದ್ಧ‘ನನ್ನು ಕುಟುಂಬ ಸಮೇತರಾಗಿ ಅನುಭವಿಸಬಹುದು.
Review by ಬಿ.ನವೀನ್ ಕೃಷ್ಣ. ಪುತ್ತೂರು