ಕೊರೋನ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದ ಸಮಯದಲ್ಲಿ ಬಿಡುಗಡೆಯಾದ ಚಿತ್ರ ಲೂಸ್ ಮಾದ ಯೋಗಿ ಅಭಿನಯದ “ಲಂಕೆ”. ಈ ಚಿತ್ರ ಬಿಡುಗಡೆಯಾಗಿ ಒಂದು ವರ್ಷಗಳಾಗಿದೆ. ಇತ್ತೀಚೆಗೆ ನೂರುದಿನಗಳು ಚಿತ್ರ ಓಡುತ್ತಿರುವುದೆ ಕಡಿಮೆ. ಅಂತಹುದರಲ್ಲಿ ಕನ್ನಡ ಚಿತ್ರವೊಂದು 365 ದಿನಗಳು ಪೂರೈಸಿರುವುದು ಖುಷಿಯ ವಿಚಾರ. ಈ ಖುಷಿಯನ್ನು ಹಂಚಿಕೊಳ್ಳಲು ಸಂತಸದ ಸಮಾರಂಭ ಆಯೋಜಿಸಲಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಪಕ ಟಿ.ಪಿ.ಸಿದ್ದರಾಜು, ಶಿಲ್ಪ ಶ್ರೀನಿವಾಸ್, ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕರಾದ ರಾಜಲಕ್ಷ್ಮಿ ಸೇರಿದಂತೆ ಸಾಕಷ್ಟು ಗಣ್ಯರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ನನ್ನ ಮನೆಯಲ್ಲಿ ಐವತ್ತು, ನೂರು, ನೂರೈವತ್ತು ದಿನಗಳ ಫಲಕಗಳಿತ್ತು. 365 ದಿನಗಳ ಫಲಕ ಇದೇ ಮೊದಲು. ಈ ಯಶಸ್ಸಿನ ಬಹುಪಾಲು ನಿರ್ದೇಶಕ ರಾಮ್ ಪ್ರಾಸಾದ್ ಅವರಿಗೆ ಸಲ್ಲಬೇಕು. ಒಳ್ಳೆಯ ಸಿನಿಮಾದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷವಾಗಿದೆ ಎಂದರು ನಾಯಕ ಲೂಸ್ ಮಾದ ಯೋಗಿ.
ನಿಜಕ್ಕೂ ಈ ಸಂದರ್ಭದಲ್ಲಿ ನಮ್ಮ ಚಿತ್ರಕ್ಕೆ ಪ್ರೇಕ್ಷಕರು ನೀಡಿರುವ ಬೆಂಬಲಕ್ಕೆ ಮೊದಲು ಅವರಿಗೆ ಧನ್ಯವಾದ ಹೇಳಬೇಕು. ಇದು ನನ್ನೊಬ್ಬನ ಗೆಲುವಲ್ಲ. ತಂಡದ ಗೆಲುವು. ನಾಯಕ ಯೋಗಿ ಅವರನ್ನು ನಾನು ಬ್ರೋ ಎನ್ನುತ್ತೇನೆ. ಸಹೋದರನಂತೆ ನನಗೆ ಅವರು ಸಹಕಾರ ನೀಡಿದರು. ಚಿತ್ರ ಒಂದು ವರ್ಷ ಪ್ರದರ್ಶನ ಕಾಣಲು ವಿತರಕ ಮಾರ್ಸ್ ಸುರೇಶ್ ಅವರೆ ಪ್ರಮುಖ ಕಾರಣ. ಇನ್ನೂ ನಿರ್ಮಾಪಕರಾದ ಸುರೇಖ ರಾಮ್ ಪ್ರಸಾದ್ ಹಾಗೂ ಪಟೇಲ್ ಶ್ರೀನಿವಾಸ್ ಅವರನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಲೇ ಬೇಕು. ಸದ್ಯದಲ್ಲೇ ಹೊಸ ಚಿತ್ರ ಆರಂಭಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಆ ಕುರಿತು ಮಾಹಿತಿ ನೀಡುತ್ತೇನೆ . ನಿಮ್ಮ ಹಾರೈಕೆಯಿರಲಿ ಎಂದ ನಿರ್ದೇಶಕ ರಾಮ್ ಪ್ರಸಾದ್ ಎಂ.ಡಿ ಈ ಗೆಲುವನ್ನು ಚಿತ್ರದಲ್ಲಿ ನಟಿಸಿರುವ ಸಂಚಾರಿ ವಿಜಯ್ ಅವರಿಗೆ ಅರ್ಪಿಸುವುದಾಗಿ ಹೇಳಿದರು.
ನಾಯಕಿ ಕೃಷಿ ತಾಪಂಡ, ಚಿತ್ರದಲ್ಲಿ ನಟಿಸಿರುವ ಎಸ್ತರ್ ನರೋನ, ಡ್ಯಾನಿಯಲ್ ಕುಟ್ಟಪ್ಪ, ಸಂಗಮೇಶ್ ಉಪಾಸೆ, ಮಹಂತೇಶ್ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು “ಲಂಕೆ” ಯ ಗೆಲುವನ್ನು ಹಂಚಿಕೊಂಡರು.
ಇದು ಒಂದೇ ಚಿತ್ರಮಂದಿರದಲ್ಲಿ ಒಂದು ವರ್ಷ ಓಡಿಲ್ಲ. ಕರ್ನಾಟಕದ ಹಲವು ಕಡೆ ಒಂದು ವರ್ಷದಿಂದ ಪ್ರದರ್ಶನವಾಗುತ್ತಿದೆ. ಇದಕ್ಕೆ ಕಾರಣ ರಾಮ್ ಪ್ರಸಾದ್ ಅವರಿಗೆ ಸಿನಿಮಾ ಮೇಲಿರುವ ಪ್ರೀತಿ ಎಂದು ವಿತರಕ ಮಾರ್ಸ್ ಸುರೇಶ್ ತಿಳಿಸಿದರು.