‘ಜೈಲರ್’ ಅಭೂತಪೂರ್ವ ಯಶಸ್ಸಿನ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಲಾಲ್ ಸಲಾಂ’. ಈ ಚಿತ್ರವನ್ನು ರಜನಿ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶಿಸುತ್ತಿದ್ದಾರೆ. ಸಂಕ್ರಾಂತಿ ಹಬ್ಬದಂದು ಚಿತ್ರ ತೆರೆ ತರುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಆದ್ರೀಗ ಲಾಲ್ ಸಲಾಂ ಬಿಡುಗಡೆ ಪೋಸ್ಟ್ ಪೋನ್ ಆಗಿದೆ.
ಫೆ.9ಕ್ಕೆ ಲಾಲ್ ಸಲಾಂ
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಂಕ್ರಾಂತಿ ಹಬ್ಬಕ್ಕೆ ತಲೈವಾ ಸಿನಿಮಾ ಎಂಟ್ರಿ ಕೊಡಬೇಕಿತ್ತು. ಆದ್ರೀಗ ಫೆಬ್ರವರಿ 9ರಂದು ಲಾಲ್ ಸಲಾಂ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಸ್ಪೋರ್ಟ್ ಡ್ರಾಮಾ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವಿಘ್ನೇಶ್, ಲಿವಿಂಗ್ಸ್ಟನ್, ಸೆಂಥಿಲ್, ಜೀವಿತಾ, ಕೆ.ಎಸ್. ರವಿಕುಮಾರ್ ಮತ್ತು ತಂಬಿ ರಾಮಯ್ಯ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
ರಜನಿಕಾಂತ್ ಅವರು ಮೊಯ್ದೀನ್ ಭಾಯ್ ಎಂಬ ಪವರ್‌ಫುಲ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಕೂಡ ಲಾಲ್ ಸಲಾಂ ಸಿನಿಮಾದ ಭಾಗವಾಗಿದ್ದಾರೆ. 2022 ನವೆಂಬರ್ ನಲ್ಲಿ ಟೈಟಲ್ ರಿವೀಲ್ ಮಾಡಲಾಯಿತು. ಆ ನಂತರ 2023ರ ಮಾರ್ಚ್ ನಲ್ಲಿ ಶೂಟಿಂಗ್ ಆರಂಭ ಮಾಡಲಾಯಿತು. ಆಗಸ್ಟ್ 2023ರಲ್ಲಿ ಚಿತ್ರೀಕರಣ ಮುಕ್ತಾಯವಾಗಿತು. ಲಾಲ್ ಸಲಾಂ ಸಿನಿಮಾಗೆ ಮಾಂತ್ರಿಕ ಎ. ಆರ್. ರೆಹಮಾನ್ ಸಂಗೀತ ಸಂಯೋಜನೆ, ವಿಷ್ಣು ರಂಗಸಾಮಿ ಛಾಯಾಗ್ರಹಣ ಮತ್ತು ಬಿ. ಪ್ರವೀಣ್ ಭಾಸ್ಕರ್ ಸಂಕಲನ ಒಳಗೊಂಡಿದೆ.
ಲಾಲ್ ಸಲಾಂ ಚಿತ್ರವನ್ನು ಕಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ನ ಸುಭಾಸ್ಕರನ್ ನಿರ್ಮಿಸಿದ್ದು, ತಮಿಳುನಾಡಿನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವ ಹಕ್ಕನ್ನು ರೆಡ್ ಜೈಂಟ್ ಸಂಸ್ಥೆ ಪಡೆದುಕೊಂಡಿದೆ. ಕನ್ನಡ, ತೆಲುಗು, ಹಿಂದಿ ಜತೆಗೆ ಮಲಯಾಳಂನಲ್ಲಿಯೂ ಈ ಸಿನಿಮಾ ಬಿಡುಗಡೆ ಆಗಲಿದೆ. ಅಂದಹಾಗೇ ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ಇದು 3ನೇ ಸಿನಿಮಾ.