ಕನ್ನಡದ ನಟ -ನಟಿಯರು ತೆಲುಗು ಅಥವಾ ತಮಿಳು, ಮಲಯಾಳಂ ಕಿರುತೆರೆಯಲ್ಲಿ ನಟಿಸೋದು ಹೊಸದೇನಲ್ಲ, ಕಳೆದ ಹಲವು ವರ್ಷಗಳಿಂದ ಕನ್ನಡದ ತಾರೆಯರು ಪರಭಾಷೆಯ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ, ಕೆಲವರು ಅಲ್ಲೇ ಸೆಟಲ್ ಕೂಡ ಆಗಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್ ನಾಯಕಿ ಭೂಮಿಕಾ ರಮೇಶ್ ಇದೀಗ ತೆಲುಗು ಕಿರುತೆರೆಯಲ್ಲೂ ಕಮಾಲ್ ತೋರಿಸಲು ತಯಾರಿ ನಡೆಸಿದ್ದಾರೆ. ಈಗಾಗಲೇ ಸೀರಿಯಲ್ ಪ್ರೊಮೋ ರಿಲೀಸ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ.
ಬಾಲ ಕಲಾವಿದೆಯಾಗಿ ತೆಲುಗು ಡ್ಯಾನ್ಸಿಂಗ್ ರಿಯಾಲಿಟಿ ಶೋ ಮೂಲಕ ಮಿಂಚಿದ್ದ ಭೂಮಿಕಾ, ಇದೀಗ ಹೊಸದಾಗಿ ಬರುತ್ತಿರುವ ‘ಮೇಘ ಸಂದೇಶಂ’ ಎನ್ನುವ ತೆಲುಗು ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ನಾಯಕ ಕೂಡ ಕನ್ನಡದವರೇ. ನನ್ನರಸಿ ರಾಧೆ , ತ್ರಿಪುರ ಸುಂದರಿ ಧಾರಾವಾಹಿಗಳಲ್ಲಿನ ಮಿಂಚಿದ್ದ ಅಭಿನವ್ ವಿಶ್ವನಾಥನ್.
ಸದ್ಯ ಸೀರಿಯಲ್ ಪ್ರೋಮೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹುಟ್ಟಿದಾಗಲೇ ಕಸದ ಬುಟ್ಟಿ ಸೇರುವ ಮಗು ಭೂಮಿಗೆ ತಂದೆ-ತಾಯಿಯ ಪ್ರೀತಿಯೇ ಇಲ್ಲ. ಇನ್ಯಾವುದೋ ಬಡ ಕುಟುಂಬದಲ್ಲಿ ಬೆಳೆಯುತ್ತಾಳೆ. ಅತ್ತ ಆಗರ್ಭ ಶ್ರೀಮಂತ ಗಗನ್, ಅವನೂ ಪ್ರೀತಿ ವಂಚಿತನೇ.
ಇಬ್ಬರನ್ನೂ ವಿಧಿ ಹೇಗೆ ಒಟ್ಟು ಸೇರಿಸುತ್ತೆ ಅನ್ನೋದು ಸೀರಿಯಲ್ ಕಥೆ. ಇದನ್ನು ಪ್ರೋಮೋ ಚೆನ್ನಾಗಿಯೇ ಕಟ್ಟಿಕೊಟ್ಟಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಪ್ರಸಾರವಾಗುತ್ತಿದ್ದು, ಒಳ್ಳೆಯ TRPಯೂ ಇದೆ. ಲಕ್ಷ್ಮೀ ಮತ್ತು ವೈಷ್ಣವ್ ಮಧ್ಯೆ ಪ್ರೀತಿ ಚಿಗುರೊಡೆಯುವ ಕಾಲವೂ ಬಂದಿದೆ. ಇದೆಲ್ಲದರ ಮಧ್ಯೆ ಲಕ್ಷ್ಮೀ ತೆಲುಗು ಸೀರಿಯಲ್ ನಲ್ಲಿ ನಟಿಸುತ್ತಿರುವುದು ನೋಡಿದ್ರೆ, ಇವರು ಲಕ್ಷ್ಮೀ ಬಾರಮ ಸೀರಿಯಲ್ ಬಿಡಲಿದ್ದಾರೆಯೆ? ಎರಡೂ ಕಡೆ ಮ್ಯಾನೇಜ್ ಮಾಡುವರೇ? ಎನ್ನುವ ಪ್ರಶ್ನೆ ಮೂಡಿದೆ.