ಬಾಲಿವುಡ್‌ನ ಖ್ಯಾತ ಗಾಯಕ ಕುಮಾರ್ ಸಾನು ತಮ್ಮ ಖಾಸಗಿ ಜೀವನದ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಹಲವು ವರ್ಷಗಳಿಂದ ಅವರನ್ನು ‘ಸ್ತ್ರೀಲೋಲ’ ಎಂದು ಟೀಕಿಸಲಾಗುತ್ತಿದ್ದರೂ, ಗಾಯಕರು ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ.
ಕುಮಾರ್ ಸಾನು ಅವರ ಮೊದಲ ಮದುವೆ ರೀಟಾ ಭಟ್ಟಾಚಾರ್ಯ ಅವರೊಂದಿಗೆ ನಡೆದಿತ್ತು. ಅವರಿಗೆ ಮೂವರು ಮಕ್ಕಳು. ಆದರೆ ಈ ಸಂಬಂಧ ಹೆಚ್ಚು ಕಾಲ ಮುಂದುವರಿಯದೆ 1994ರಲ್ಲಿ ವಿಚ್ಛೇದನದಲ್ಲಿ ಅಂತ್ಯವಾಯಿತು. ವಿಚ್ಛೇದನದ ನಂತರ, ನಟಿ ಮೀನಾಕ್ಷಿ ಶೇಷಾದ್ರಿ ಅವರೊಂದಿಗೆ ಕುಮಾರ್ ಸಾನು ಸಂಬಂಧ ಹೊಂದಿದ್ದರು ಎಂಬ ಸುದ್ದಿ ಹರಡಿತು. ಆ ಸಂದರ್ಭದಲ್ಲಿ ಅವರು ಮೊದಲ ಪತ್ನಿಗೆ ಮೋಸ ಮಾಡಿದ್ದಾರೆ ಎಂಬ ಆರೋಪಗಳೂ ಕೇಳಿಬಂದವು.
ಆದರೆ, ಸಾನು ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡುತ್ತಾ, “ಮೀನಾಕ್ಷಿ ಮತ್ತು ನಾನು ಪ್ರಣಯ ಸಂಬಂಧದಲ್ಲಿರಲಿಲ್ಲ. ನಾವು ಒಮ್ಮೆಗೂ ಭೇಟಿಯಾಗಿಲ್ಲ. ಆದರೆ ವದಂತಿಗಳು ಹರಡುತ್ತಿದ್ದವು. ನನಗೆ ಆಗಾಗ್ಗೆ ‘ಸ್ತ್ರೀಲೋಲ’ ಎನ್ನುವ ಟ್ಯಾಗ್ ಹಾಕಲಾಗುತ್ತಿತ್ತು” ಎಂದು ಸ್ಪಷ್ಟನೆ ನೀಡಿದರು.
ಅವರು ಮುಂದುವರಿದು, “ನಾನು ನಿಜವಾಗಿಯೂ ಸ್ತ್ರೀಲೋಲನಾಗಿದ್ದರೆ, ನನ್ನ ಎರಡನೇ ಮದುವೆಯ ನಂತರವೂ ಅಂತಹ ವದಂತಿಗಳು ಹರಡುತ್ತಿದ್ದುವು. ಆದರೆ ಹಾಗಾಗಿಲ್ಲ. ನಾನು ಸಲೋನಿಯನ್ನು ಮದುವೆಯಾಗಿ ಈಗ 23 ವರ್ಷಗಳಾಗಿವೆ. ಈ ಅವಧಿಯಲ್ಲಿ ನನ್ನ ಮೇಲೆ ಯಾರೂ ಅಂತಹ ಆರೋಪ ಮಾಡಿಲ್ಲ” ಎಂದು ಹೇಳಿದರು.
ಈ ಮೂಲಕ, ತನ್ನ ಮೇಲೆ ಬಂದಿದ್ದ ವದಂತಿಗಳಿಗೆ ಕುಮಾರ್ ಸಾನು ಕೂಲ್ ಆಗಿ ತೆರೆ ಎಳೆದಿದ್ದಾರೆ.
