ಖ್ಯಾತ ನಟ ನವೀನ್ ಶಂಕರ್ ಅಭಿನಯದ “ಕ್ಷೇತ್ರಪತಿ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೇಲರ್ ಈಗಾಗಲೇ ಜನಮನಸೂರೆಗೊಳ್ಳುತ್ತಿದ್ದು, ಚಿತ್ರ ಆಗಸ್ಟ್ 18 ರಂದು ತೆರೆಗೆ ಬರಲಿದೆ.ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟ ನವೀನ್ ಶಂಕರ್, “ಗುಲ್ಟು” ಚಿತ್ರದ ನಂತರ ನಿರ್ದೇಶಕ ಶ್ರೀಕಾಂತ್ ಕಟಗಿ, ಈ ಚಿತ್ರದ ಕಥೆ ಹೇಳಿದರು. ನಾನು ಉತ್ತರ ಕರ್ನಾಟಕದವನೇ ಆಗಿರುವುದರಿಂದ ಅಲ್ಲಿನ ಪರಿಸರದ ಚಿತ್ರ ಮಾಡುವ ಆಸೆಯಿತ್ತು. ಹಾಗಾಗಿ ತಕ್ಷಣ ಒಪ್ಪಿಕೊಂಡೆ. ಆದರೆ ಹಣ ಹೂಡಲು ನಿರ್ಮಾಪಕರು ಇರಲಿಲ್ಲ. ನಾವೇ ಒಂದೊಂದು ಲಕ್ಷ ಹಾಕಿ ಸಿನಿಮಾ ಆರಂಭ ಮಾಡಿದ್ದೆವು. ಆನಂತರ ಸಾಕಷ್ಟು ನಿರ್ಮಾಪಕರು ನಮ್ಮ ಜೊತೆಯಾದರು. ಆಗಷ್ಟೇ “ಕೆ ಜಿ ಎಫ್” ಬಿಡುಗಡೆಯಾಗಿತ್ತು. ರವಿ ಬಸ್ರೂರ್ ಅವರ ಬಳಿ ಸಂಗೀತ ಸಂಯೋಜನೆ ಮಾಡಿಸಬೇಕೆಂಬ ಇರಾದೆ ಇತ್ತು. ಅವರು ಒಪ್ಪಿಕೊಂಡರು. ಹೀಗೆ ಆರಂಭವಾದ ಚಿತ್ರ ಈಗ ಬಿಡುಗಡೆ ಹಂತಕ್ಕೆ ಬಂದು ತಲುಪಿದೆ. ನನ್ನೊಂದಿಗೆ ಅಭಿನಯಿಸಿರುವ ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಅದ್ಭುತವಾಗಿದೆ. ನಮ್ಮ ಚಿತ್ರ ನೋಡಿ ಹಾರೈಸಿ ಎಂದರು.
ನಾನು ಉತ್ತರ ಕರ್ನಾಟಕದ ಮೂಲದವನು. ಅಲ್ಲಿನ ಹಾಗೂ ಇಡೀ ದೇಶದಲ್ಲೇ ಇರುವ ಸಾಮಾಜಿಕ ಸಮಸ್ಯೆಗಳನ್ನ ಆಧರಸಿ ಕಥೆ ಮಾಡಿಕೊಂಡೆ. ನವೀನ್ ಶಂಕರ್ ಅವರಿಗೆ ಕಥೆ ಹೇಳಿದೆ. ಒಪ್ಪಿಕೊಂಡರು. ಉತ್ತರ ಕರ್ನಾಟಕದ ಭಾಗದಲ್ಲೇ ಹೆಚ್ಚು ಚಿತ್ರೀಕರಣ ಮಾಡಿದ್ದೇವೆ. ನಮ್ಮ ಚಿತ್ರ ಅಗಸ್ಟ್ 18 ತೆರೆಗೆ ಬರಲಿದೆ. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ನಮ್ಮ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಶ್ರೀಕಾಂತ್ ಕಟಗಿ.
![](https://chittaranews.com/wp-content/uploads/2023/08/366828603_712383994236346_8005735911374846077_n.jpg)
ಇನ್ನೂ ಓದಿ *ಹೊಸ ಇತಿಹಾಸ ಸೃಷ್ಟಿಸಿದ ರಿಕ್ಕಿ ಕೇಜ್..ರಾಷ್ಟ್ರಗೀತೆಗೆ ಸ್ಪೆಷಲ್ ಟ್ಯೂನ್ ಟಚ್ ಕೊಟ್ಟ ಗ್ರ್ಯಾಮಿ ಪ್ರಶಸ್ತಿ ವಿಜೇತ*
ಪತ್ರಕರ್ತೆಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕಿ ಅರ್ಚನಾ ಜೋಯಿಸ್ ಹೇಳಿದರು. ನಟರಾದ ರಾಹುಲ್ ಐನಾಪುರ, ಹರ್ಷ್ ಅರ್ಜುನ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.ಸಹ ನಿರ್ಮಾಪಕರಾದ ಶ್ರೀನಿವಾಸ್, ದರ್ಶನ್ ಜಯಣ್ಣ, ವಿವೇಕ್ “ಕ್ಷೇತ್ರಪತಿ” ಬಗ್ಗೆ ಮಾಹಿತಿ ನೀಡಿದರು.
ರವಿ ಬಸ್ರೂರ್ ಮ್ಯೂಸಿಕ್ & ಮೂವೀಸ್ ಅರ್ಪಿಸುತ್ತಿರುವ, ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “ಕ್ಷೇತ್ರಪತಿ” ಚಿತ್ರ ಪೊಲಿಟಿಕಲ್ ಡ್ರಾಮ ಕಥಾಹಂದರ ಹೊಂದಿದೆ. ದಿ ಇಮೋಷನ್ಸ್ ಫ್ಯಾಕ್ಟರಿ ಗ್ರೂಪ್ ಸಹ ನಿರ್ಮಾಣವಿರುವ ಈ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್ ಬಿಡುಗಡೆ ಮಾಡುತ್ತಿದೆ.
ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವೈ ವಿ ಬಿ ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.ನವೀನ್ ಶಂಕರ್ , ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.