ಕೆಜಿಎಫ್ ಸಿನಿಮಾ ಮೂಲಕ ಖ್ಯಾತಿಗಳಿಸಿರುವ ಕೆಜಿಎಫ್ ತಾತಾ ಎಂದೇ ಕರೆಸಿಕೊಳ್ಳೋ ಕೃಷ್ಣಾಜಿ ರಾವ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಈಗ ಫುಲ್ ಬ್ಯುಸಿ. ‘ನ್ಯಾನೋ ನಾರಾಯಣಪ್ಪ’ ಸಿನಿಮಾದಲ್ಲಿ ಕೃಷ್ಣ ಜಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಬಿಡುಗಡೆಯ ಬಾಗಿಲಲ್ಲಿರುವ ಈ ಚಿತ್ರದ ಟ್ರೇಲರ್ ಪ್ರೇಕ್ಷಕರೆದುರು ತೆರೆದುಕೊಂಡಿದೆ.
‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ಕುಮಾರ್ ನಿರ್ದೇಶನ ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ ‘ನ್ಯಾನೋ ನಾರಾಯಣಪ್ಪ’. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕೃಷ್ಣಾಜಿ ರಾವ್ ನಟಿಸಿದ್ದು. ಫಸ್ಟ್ ಲುಕ್ ಪೋಸ್ಟರ್, ಟೈಟಲ್ ಮೂಲಕ ಗಮನ ಸೆಳೆದ ಚಿತ್ರತಂಡ ಈಗ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ನಿರೀಕ್ಷೆಯನ್ನು ಹೆಚ್ಚಿಸಿದೆ.
ಕೆಜಿಎಫ್ ನಲ್ಲಿ ಪುಟ್ಟ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿಕೊಂಡ ಕೃಷ್ಣಾಜಿ ರಾವ್ ಈ ಚಿತ್ರದಲ್ಲಿ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಕುಮಾರ್ ಹಿಂದಿನ ಸಿನಿಮಾಗಳಂತೆ ಕಾಮಿಡಿ ಈ ಚಿತ್ರದ ಮೂಲ ಮಂತ್ರವಾಗಿದ್ದು ಭಾವನಾತ್ಮಕ ಅಂಶಗಳು ಸಿನಿಮಾದಲ್ಲಿವೆ ಅನ್ನೋದು ಟ್ರೇಲರ್ ನೋಡಿದ್ರೆ ಗೊತ್ತಾಗುತ್ತೆ.ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ ಕುಮಾರ್.
ಕಾಮಿಡಿ ಎಮೋಷನಲ್ ಸಿನಿಮಾ ಇದಾಗಿದ್ದು, ಕುಟುಂಬ ಸಮೇತ ನೋಡಿ ಎಂಜಾಯ್ ಮಾಡಬಹುದಾದ ಸಬ್ಜೆಕ್ಟ್ ಚಿತ್ರದಲ್ಲಿದೆ. ಶಿವಶಂಕರ ಕ್ಯಾಮೆರಾ ನಿರ್ದೇಶನ, ಆಕಾಶ್ ಪರ್ವ ಸಂಗೀತ, ದೀಪು ಮತ್ತು ಸಿದ್ದಾರ್ಥ್ ನಾಯಕ ಸಂಕಲನ ಚಿತ್ರಕ್ಕಿದೆ. ಕಾಕ್ರೋಚ್ ಸುಧಿ, ಪ್ರಶಾಂತ್ ಸಿದ್ದಿ, ಅಕ್ಷತ ಕುಕ್ಕಿ, ಅಪೂರ್ವ ಸೇರಿದಂತೆ ಪ್ರತಿಭಾನ್ವಿತ ಕಲಾವಿದರ ಬಳಗ ಚಿತ್ರದಲ್ಲಿದೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ಸಿನಿಮಾ ತಂಡ ಬ್ಯುಸಿಯಾಗಿದ್ದು ಅಕ್ಟೋಬರ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.