ನಟ ಕೋಮಲ್ ಕುಮಾರ್ ಮತ್ತು ನಟಿ-ನಿರ್ಮಾಪಕಿ ತನಿಷಾ ಕುಪ್ಪಂಡ ಅಭಿನಯದ ‘ಕೋಣ’ ಸಿನಿಮಾ ಅಕ್ಟೋಬರ್ 31ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವುದರ ಜೊತೆಗೆ ನಿರ್ಮಾಪಕಿಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಕುಪ್ಪಂಡಾಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಪಾಲ್ ಮತ್ತು ರವಿಕಿರಣ್ ಎನ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ನೈಜ ಘಟನೆಯೊಂದನ್ನು ಆಧರಿಸಿದ ಈ ಸಿನಿಮಾ ಡಾರ್ಕ್ ಕಾಮೆಡಿ ಶೈಲಿಯಲ್ಲಿ ಮೂಡಿಬಂದಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಭರವಸೆ ನೀಡಿದೆ.

ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ನಟ ಕೋಮಲ್ ಮಾತನಾಡುತ್ತಾ, “ಬಾಲ್ಯದಿಂದಲೇ ‘ಕೋಣ’ ಎಂಬ ಪದ ನನ್ನ ಜೀವನದಲ್ಲಿ ಕನೆಕ್ಟ್ ಆಗಿತ್ತು. ಈಗ ಅದೇ ಹೆಸರಿನ ಸಿನಿಮಾದಲ್ಲಿ ನಟಿಸಿರುವುದು ವಿಶಿಷ್ಟ ಅನುಭವ,” ಎಂದರು. ನಟಿ ಮತ್ತು ನಿರ್ಮಾಪಕಿ ತನಿಷಾ ಕುಪ್ಪಂಡ ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ, “ನಾನು ಈ ಚಿತ್ರದಲ್ಲಿ ಕೋಮಲ್ ಸರ್ ಅವರ ಪತ್ನಿಯಾಗಿ ಲಕ್ಷ್ಮಿ ಪಾತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ಪ್ರೇಕ್ಷಕರು ನನ್ನನ್ನು ಹೊಸ ರೂಪದಲ್ಲಿ ಕಾಣಲಿದ್ದಾರೆ. ಪ್ರೊಡ್ಯೂಸರ್ ಆಗಿ ಕಾಲಿಡಲು ಪ್ರೇರಣೆ ನೀಡಿದವರು ರವಿಕಿರಣ್ ಸರ್ ಮತ್ತು ಕಾರ್ತಿಕ್ ಸರ್,” ಎಂದು ಹೇಳಿದರು.
ಹರಿಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ಕೋಮಲ್ ಮತ್ತು ತನಿಷಾ ಜೊತೆಗೆ ಕೀರ್ತಿರಾಜ್, ರಿತ್ವಿ ಜಗದೀಶ್, ರಾಘು ರಾಮನಕೊಪ್ಪ, ಮಂಜು ಪಾವಗಡ, ಕುರಿ ಸುನಿಲ್, ವಿನಯ್ ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ, ವೀನಸ್ ನಾಗರಾಜಮೂರ್ತಿ ಛಾಯಾಗ್ರಹಣ, ಉಮೇಶ್ ಆರ್ಬಿ ಸಂಕಲನ, ವಿನೋದ್ ಕುಮಾರ್ ಸಾಹಸ ನಿರ್ದೇಶನ, ಮುರುಗ ಮಾಸ್ಟರ್ ನೃತ್ಯ ಸಂಯೋಜನೆ ಮತ್ತು ಶಶಿಕುಮಾರ್ ಸಂಭಾಷಣೆ ನೀಡಿರುವ ‘ಕೋಣ’ ಸಿನಿಮಾ ಅಕ್ಟೋಬರ್ ಅಂತ್ಯದ ಚಿತ್ರರಂಗದ ಪ್ರಮುಖ ಬಿಡುಗಡೆಗಳಲ್ಲಿ ಒಂದಾಗಿ ಗಮನ ಸೆಳೆಯುತ್ತಿದೆ.
