ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ವಿಧಿವಶ. ಮೋದಿ ಸೇರಿ ಅನೇಕರಿಂದ ಕಂಬನಿ
ಕೆಕೆ ಎಂದೇ ಖ್ಯಾತರಾಗಿರುವ ಬಾಲಿವುಡ್ ಹಿನ್ನೆಲೆ ಗಾಯಕ ಕೃಷ್ಣಕುಮಾರ್ ಕುನ್ನತ್ ಕೋಲ್ಕತ್ತಾದಲ್ಲಿ ಕಾರ್ಯಕ್ರಮ ನೀಡುವ ವೇಳೆ ಕುಸಿದು ಬಿದ್ದಿದ್ದು, ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಭಿಮಾನಿಗಳಿಗೆ ಕೆಕೆ ಎಂದೇ ಚಿರಪರಿಚತಾರಿದ್ದ ಕೃಷ್ಣಕುನಾರ್ ಕುನ್ನತ್ (53) ಕೋಲ್ಕತ್ತಾದಲ್ಲಿ ಕೋಲ್ಕತಾದಲ್ಲಿ ನಜ್ರುಲ್ ಮಂಜ್‌ನಲ್ಲಿ ಆಯೋಜಿಸಿದ್ದ ಕಾನ್ಸರ್ಟ್‌ನಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ನೀಡುವಾಗಲೇ ವೇದಿಕೆ ಮೇಲೆಯೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಚಿಕಿತ್ಸೆಗೆ ಸ್ಪಂದಿಸದೇ ಕೆಕೆ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋಲ್ಕತಾದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕಾಗಿ ಕೆಕೆ ತಂಡ ಮೇ.30ರಿಂದ ನಗರಕ್ಕೆ ಬಂದಿತ್ತು. ಸಂಗೀತ ಕಾರ್ಯಕ್ರಮದ ಕುರಿತು ಗಾಯಕ ಕೃಷ್ಣಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೆಕೆ ಸಂಗೀತ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು. ಬದುಕು ಕಟ್ಟಿಕೊಂಡ ಸಂಗೀತದ ವೇದಿಕೆಯಲ್ಲಿ ಹಾಡುತ್ತಲೇ ತನ್ನ ಜೀವನವನ್ನು ಕೊನೆಗೊಳಿಸದ್ದಾರೆ ಖ್ಯಾತ ಗಾಯಕ.
ಅನೇಕ ಅಭಿಮಾನಿಗಳು ತಮ್ಮ ಟ್ವಿಟರ್‌ನಲ್ಲಿ ನಿಧನರಾದ ಗಾಯಕ ಕೆಕೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಅವರ ಹಠಾತ್ ಮರಣವು ಜನರು ಮತ್ತು ಅವರ ಅಭಿಮಾನಿಗಳಲ್ಲಿ ಆಘಾತ ಮತ್ತು ತೀವ್ರ ದುಃಖವನ್ನು ಉಂಟುಮಾಡಿದೆ.
ಪ್ರಧಾನಿ ಮೋದಿ ಸಂತಾಪ: ಕೃಷ್ಣಕುಮಾರ್ ಕುನ್ನತ್ ದಿಢೀರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕೃಷ್ಣಕುಮಾರ್ ಕುನ್ನತ್ ಅವರ ಅಕಾಲಿಕ ಸಾವು ಮನಸ್ಸಿಗೆ ನೋವು ತರಿಸಿದೆ. ಕೆಕೆ ಅವರ ಹಾಡುಗಳಲ್ಲಿ ಎಲ್ಲ ರೀತಿಯ ಭಾವನೆ ಇರುತ್ತಿದ್ದವು. ಎಲ್ಲ ವಯೋಮಾನದವರನ್ನ ತಮ್ಮ ಹಾಡುಗಳ ಮೂಲಕ ರಂಜಿಸಿದ್ದರು. ಅವರ ಹಾಡುಗಳ ಮೂಲಕ ಸದಾ ನೆನಪಿನಲ್ಲಿ ಉಳಿದುಕೊಳ್ಳಲಿದ್ದಾರೆ ಎಂದಿದ್ದಾರೆ.
Saddened by the untimely demise of noted singer Krishnakumar Kunnath popularly known as KK. His songs reflected a wide range of emotions as struck a chord with people of all age groups. We will always remember him through his songs. Condolences to his family and fans. Om Shanti.
— Narendra Modi (@narendramodi) May 31, 2022
ಕೆಕೆ ನಿಧನಕ್ಕೆ ಹಲವು ಗಣ್ಯರ ಸಂತಾಪ
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವರಾದ ಅಮಿತ್ ಶಾ, ಅನುರಾಗ್ ಠಾಕೂರ್, ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಸಂಗೀತ ಸಂಯೋಜಕರಾದ ಯುವನ್ ಶಂಕರ್ ರಾಜಾ, ಹ್ಯಾರಿಸ್ ಜಯರಾಜ್, ಗಾಯಕರಾದ ಸೋನು ನಿಗಮ್ ಮತ್ತು ಶ್ರೇಯಾಘೋಷಾಲ್ ಕೂಡ ಗಾಯಕ ಕೆಕೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಜನಪ್ರಿಯ ಗಾಯಕ ಕೃಷ್ಣಕುಮಾರ್ ಕುನ್ನತ್ (ಕೆಕೆ) ತಮಿಳು ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಅವರು ರಾಜಧಾನಿ ದೆಹಲಿಯಲ್ಲಿ ವಾಸಿಸುವ ಮಲಯಾಳಂ ಕುಟುಂಬದಲ್ಲಿ 1968 ರಲ್ಲಿ ಜನಿಸಿದರು. ಅವರು ಚಲನಚಿತ್ರಗಳಿಗೆ ಹಾಡುವ ಮೊದಲು ವಿವಿಧ ಭಾಷೆಗಳಲ್ಲಿ 3500 ಕ್ಕೂ ಹೆಚ್ಚು ಜಿಂಗಲ್‌ಗಳಿಗೆ ಹಾಡಿದ್ದಾರೆ. ಕೆಕೆ ಅವರು 1996 ರಿಂದ ಚಲನಚಿತ್ರ ಗೀತೆಗಳನ್ನು ಹಾಡುತ್ತಿದ್ದಾರೆ. ತರುವಾಯ 1999 ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತಕ್ಕಾಗಿ ಹಾಡಿದರು.
ಕೆಕೆ ಅವರ ಗಾಯನ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು 3 ಸಾವಿರಕ್ಕೂ ಹೆಚ್ಚು ಜಿಂಗಲ್‌ಗಳನ್ನು ಹಾಡಿದ್ದಾರೆ. 1999 ರಲ್ಲಿ, ಅವರು ಸಂಜಯ್ ಲೀಲಾ ಬನ್ಸಾಲಿಯವರ ಹಮ್ ದಿಲ್ ದೇ ಚುಕೇ ಸನಮ್ ಚಿತ್ರದ ‘ತಡಪ್-ತಡಪ್’ ಹಾಡನ್ನು ಹಾಡಿದರು. ಇದರಿಂದ ಅವರು ಮೊದಲ ಬಾರಿಗೆ ದೇಶದಾದ್ಯಂತ ಮನ್ನಣೆ ಪಡೆದರು. ಅದೇ ವರ್ಷದಲ್ಲಿ ಅವರ ಆಲ್ಬಂ ಕೂಡ ಬಿಡುಗಡೆಯಾಯಿತು. ಈ ಆಲ್ಬಂನ ‘ಯಾದ್ ಆಯೇಗಾ ವೋ ಪಾಲ್’ ಹಾಡು ಯುವಜನರಲ್ಲಿ ಬಹಳ ಜನಪ್ರಿಯವಾಯಿತು. ಇಂದಿಗೂ ಶಾಲಾ-ಕಾಲೇಜುಗಳ ಬೀಳ್ಕೊಡುಗೆ ಸಮಾರಂಭಗಳಲ್ಲಿ ಹಾಡುವ ಜನಪ್ರಿಯ ಹಾಡು.