ತಮ್ಮ ವಾಟ್ಸ್ಆ್ಯಪ್ನ ಅಬೌಟ್ ಸೆಕ್ಷನ್ನಲ್ಲಿ `All great achievements require time!’ ಎಂದು ಬರೆದುಕೊಂಡಿರುವ ನಿರ್ದೇಶಕ ಕಿರಣ್ರಾಜ್ ಅದನ್ನು ಅಕ್ಷರಶಃ ಮಾಡಿ ತೋರಿಸಿದ್ದಾರೆ. ಈ ಸಂದರ್ಭದಲ್ಲಿ, ತಮ್ಮ ಚೊಚ್ಚಲ ಚಿತ್ರದಲ್ಲೇ ಗೆದ್ದಿರುವ ನಿರ್ದೇಶಕ ಕಿರಣ್ರಾಜ್.ಕೆ ತಮ್ಮ ‘ಚಾರ್ಲಿ`ಯ ಗೆಲುವಿನ ಖುಷಿಯನ್ನು `ಚಿತ್ತಾರ’ ದೊಂದಿಗೆ ಹಂಚಿಕೊOಡಿದ್ದಾರೆ.
`ಚಾರ್ಲಿ’ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ, ಏನನ್ನಿಸ್ತಿದೆ?
`ಚಾರ್ಲಿ’ಯನ್ನು ಪ್ರೇಕ್ಷಕರು ಸ್ವಾಗತಿಸಿದ್ದಾರೆ. ಪ್ರಾಣಿ ಮತ್ತು ಮನುಷ್ಯನ ಬಾಂಧವ್ಯ ವಿವರಿಸುವ ಸಿನಿಮಾ ಜನರಿಗೆ ಇಷ್ಟವಾಗಿದೆ. ಇಲ್ಲಿ ರಕ್ಷಿತ್ ಶೆಟ್ಟಿ ಅವರಿಗಿಂತ ಚಾರ್ಲಿಯ ಲೈಫಿಗೆ ಮಹತ್ವ ಜಾಸ್ತಿ. ನನ್ನ ಮೊದಲ ಸಿನಿಮಾ ಕೆಲವು ಕಾಲಗಳವರೆಗಾದರೂ ಪ್ರೇಕ್ಷಕರ ಮನಸ್ಸಲ್ಲಿ ಉಳಿದಿರಬೇಕು ಅನ್ನುವ ಆಸೆ ಇತ್ತು. ಆ ಕನಸು ನನಸಾಗಿದೆ. ಅದಲ್ಲದೆ ನನ್ನ ಮೊದಲ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಿರೋದು ಇನ್ನಷ್ಟು ಖುಷಿ ತಂದಿದೆ. ಇಡೀ ತಂಡದ ಐದು ವರುಷಗಳ ಕಾಲದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.
`ಚಾರ್ಲಿ’ ಕಥೆ ಹುಟ್ಟಿದ್ದು ಹೇಗೆ?
ಭಾರತೀಯ ಸಿನಿಮಾದಲ್ಲಿ ನಾಯಿ ಒಂದು ಪಾತ್ರವಾಗಿ ಬಂದಿದ್ದು ಕಡಿಮೆ. ವಿಶ್ವ ಸಿನಿಮಾದಲ್ಲಿ ಅನೇಕ ಸಿನಿಮಾಗಳು ಬಂದಿವೆ. ಅದೆಲ್ಲಕ್ಕಿಂತ ಭಿನ್ನವಾಗಿ ಸಿನಿಮಾ ಮಾಡುವುದು ಹೇಗೆ ಅಂತ ಯೋಚಿಸುತ್ತಿದ್ದಾಗ ನನಗೆ ನೆರವಾಗಿದ್ದು ಮಹಾಭಾರತ. ಮಹಾಭಾರತದ ಆದಿಯಲ್ಲಿ ನಾಯಿ ಇರುತ್ತದೆ, ಧರ್ಮರಾಯ ಸ್ವರ್ಗಾರೋಹಣ ಮಾಡುವಾಗಲೂ ನಾಯಿ ಇತ್ತು. ಆ ಕತೆ ನೆನಪಾಗಿ ಮಹಾಭಾರತಕ್ಕೆ ಹೋದೆ. ನಾನು ಪಾತ್ರ ಬೆಳೆಸುವಾಗ ನಿಜಕ್ಕೂ ಮಹಾಭಾರತ ನನ್ನ ಕೈ ಹಿಡಿದು ನಡೆಸಿತು. ಒಂದು ರೀತಿಯಲ್ಲಿ ಚಾರ್ಲಿಯ ಗೆಲುವಿನ ಹಿಂದೆ `ಮಹಾಭಾರತ’ವಿದೆ.
ಸಿನಿಮಾ ತುಂಬಾ ತಡವಾಗಿ ರಿಲೀಸ್ ಆಯ್ತಾ?
ಸಾಮಾನ್ಯವಾಗಿ ಇಡೀ ಸಿನಿಮಾದಲ್ಲಿ ಕೇವಲ ಮನುಷ್ಯರೇ ಇದ್ದಾಗ ನಮಗೆ ಬೇಕಾದಂತೆ ಶೆಡ್ಯೂಲ್ ಮಾಡಿಕೊಂಡು ಶೂಟಿಂಗ್ ಮಾಡಬಹುದು. ಪ್ಲಾನ್ ಪ್ರಕಾರ ಶೂಟಿಂಗ್ ಮಾಡಿ ಮುಗಿಸಬಹುದು. ಆದ್ರೆ `೭೭೭ ಚಾರ್ಲಿ’ ಸಿನಿಮಾ ಹಾಗಲ್ಲ. ಇಡೀ ಸಿನಿಮಾದ ಕಥೆ ಒಂದು ನಾಯಿಯ ಸುತ್ತ ನಡೆಯುತ್ತದೆ . ನಮ್ಮ ಸಿನಿಮಾದಲ್ಲಿ ಟಾಸ್ಕ್ ಮಾಡುವಂಥ ನಾಯಿಯೊಂದು ನಮಗೆ ಬೇಕಾಗಿತ್ತು, ಆ ನಾಯಿಯ ಹುಡುಕಾಟಕ್ಕೇ ತಿಂಗಳುಗಳ ಕಾಲ ಸಮಯ ಹಿಡಿಯಿತು. ನಮಗೆ ಬೇಕಾದಂಥ ನಾಯಿ ಸಿಕ್ಕ ತಕ್ಷಣ ಅದಕ್ಕೆ ಟೈನಿಂಗ್ ಮಾಡಬೇಕಿತ್ತು, ಆ ಟೈನಿಂಗ್ಗಾಗಿ ಮತ್ತಷ್ಟು ಸಮಯ ಹಿಡಿಯಿತು. ಆದರೆ ಈಗ ಸಿನಿಮಾ ರಿಲೀಸ್ ಆಗಿ ಪ್ರೇಕ್ಷಕರಿಂದ ಸಾಕಷ್ಟು ಪ್ರಶಂಸೆಗಳು ಬರುತ್ತಿವೆ. ತುಂಬಾ ಖುಷಿ ಆಗುತ್ತೆ. ಇಡೀ ತಂಡ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.
ಚೊಚ್ಚಲ ಪ್ರಯತ್ನದಲ್ಲೇ ದೊಡ್ಡ ರಿಸ್ಕ್ ತಗೊಂಡ್ರಾ?
ನಾನು ಶಾರ್ಟ್ಫಿಲ್ಮ್ ಮಾಡಿಕೊಂಡು, ಸಹನಿರ್ದೇಶಕನಾಗಿ ಕೆಲಸ ಮಾಡುತ್ತಿರುವಾಗಲೇ ಮೊದಲ ನಿರ್ದೇಶನದ ಚಿತ್ರದಲ್ಲೇ ಗುರುತಿಸಿಕೊಳ್ಳಬೇಕೆಂದು ನಿರ್ಧಾರ ಮಡಿದವನು. ಏಕೆಂದರೆ ವರ್ಷವೊಂದಕ್ಕೆ ಸಾಕಷ್ಟು ಚಿತ್ರಗಳು ರಿಲೀಸ್ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಗುರುತಿಸಿಕೊಳ್ಳುವುದು ಬೆರಳೆಣಿಕೆಯಷ್ಟು ಮಾತ್ರ. ಆ ಬೆರೆಳೆಣಿಕೆಯಷ್ಟಿರುವ ಚಿತ್ರದಲ್ಲಿ ನನ್ನ ಚಿತ್ರವೂ ಇರಬೇಕು ಎಂಬುದು ನನ್ನ ಮಹದಾಸೆಯಾಗಿತ್ತು. ಅದಕ್ಕಾಗಿ ಒಂದು ಬೆಸ್ಟ್ ಕಂಟೆAಟ್ ಮಾಡಿಕೊಂಡೆ. ಅದಕ್ಕೆ ತಕ್ಕದಾಗಿ ನನಗೆ ರಕ್ಷಿತ್ ಶೆಟ್ಟಿಯಂತಹ ಸದಭಿರುಚಿಯ ನಿರ್ಮಾಪಕರೂ ಸಿಕ್ಕರು. ನಾನಂದುಕೊAಡAತೆ ಚಿತ್ರ ಮೂಡಿಬರಲು ಇದು ಸಹಾಯವಾಯ್ತು.
ಪ್ರಮೋದ್ ನಟನೆಯ ‘ಬಾಂಡ್ ರವಿ’ ಸಿನಿಮಾದ ಶೂಟಿಂಗ್ ಕಂಪ್ಲೀಟ್
ನಿಮ್ಮ ಮುಂದಿನ ಚಿತ್ರ?
ಸದ್ಯಕ್ಕೆ ಮುಂದಿನ ಚಿತ್ರದ ಬಗ್ಗೆ ಯೋಚಿಸಿಲ್ಲ. ಇನ್ನೂ `ಚಾರ್ಲಿ’ಯ ಗುಂಗಿನಿOದ ಹೊರಬಂದಿಲ್ಲ. `ಚಾರ್ಲಿ’ಯ ಡಿಜಿಟಲ್ ರಿಲೀಸ್ ನಂತರ ಹೊಸ ಚಿತ್ರದ ಬಗ್ಗೆ ಯೋಚಿಸುತ್ತೇನೆ. ಲಾಕ್ಡೌನ್ ಸಮಯದಲ್ಲಿ ಮೂರು ವಿಭಿನ್ನ ಜಾನರ್ನ SCRIPT ರೆಡಿಮಾಡಿಕೊಂಡಿದ್ದೆ, ಅದರಲ್ಲಿ ಯಾವುದನ್ನು ಮೊದಲು ತರೆಮೇಲೆ ತರಬೇಕು ಎಂಬುದನ್ನು ಇನ್ನೂ ನಿರ್ಧಾರ ಮಾಡಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ವಿವರವನ್ನು ಹಂತ ಹಂತವಾಗಿ ಪ್ರೇಕ್ಷಕರ ಮುಂದೆ ಇಡುತ್ತೇನೆ. ಕೊನೆಯದಾಗಿ, ನನ್ನ ನಿರ್ದೇಶನದ ಮೊದಲ ಚಿತ್ರವನ್ನು ಒಪ್ಪಿಕೊಂಡು, ಅಪ್ಪಿಕೊಂಡಿರುವ ಪ್ರೇಕ್ಷಕರಿಗೆ ಸದಾ ಚಿರಋಣಿ.
ಸಂದರ್ಶನ; ಬಿ.ನವೀನ್ಕೃಷ್ಣ