‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಈ ವಾರದ ಎಪಿಸೋಡ್‌ನಲ್ಲಿ ನಟ ಸುದೀಪ್ ಅವರ ಕ್ಲಾಸ್ ಕ್ಷಣ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿ ಅವರ ಗುರಿ ಜಾನ್ವಿ. ಅಶ್ವಿನಿ ಗೌಡನ ಸುತ್ತಮುತ್ತಲೇ ತಿರುಗುತ್ತಿರುವ ಜಾನ್ವಿಯ ವರ್ತನೆಗೆ ಸುದೀಪ್ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮನೆಯಲ್ಲಿ ಸ್ಪರ್ಧಿಗಳನ್ನು “ಜಂಟಿ” ಮತ್ತು “ಒಂಟಿ” ಎಂಬ ಎರಡು ವಿಭಾಗಗಳಾಗಿ ವಿಭಜಿಸಲಾಗಿತ್ತು. ಅಶ್ವಿನಿ ಹಾಗೂ ಜಾನ್ವಿ ಇಬ್ಬರೂ “ಒಂಟಿ” ವರ್ಗದಲ್ಲಿ ಇದ್ದರೂ, ಅವರ ನಡೆ-ನುಡಿಗಳು “ಜಂಟಿ” ರೀತಿಯದ್ದಾಗಿತ್ತು. ಎಲ್ಲ ಕೆಲಸಗಳಲ್ಲಿ, ಮಾತುಗಳಲ್ಲಿ ಮತ್ತು ಕಾರ್ಯಗಳಲ್ಲಿ ಇಬ್ಬರೂ ಒಟ್ಟಿಗೇ ಕಾಣಿಸಿಕೊಂಡರು. ಇದರಿಂದಲೇ ಜಾನ್ವಿ ಅಶ್ವಿನಿಯ ನೆರಳು ಎನ್ನುವ ಮಟ್ಟಿಗೆ ಟ್ರೋಲ್ ಆಗಿದ್ದಾರೆ.
ಜಾನ್ವಿ ಅಶ್ವಿನಿಗೆ ಬಕೆಟ್ ಹಿಡಿದು ಓಡಾಡುತ್ತಿರುವ ದೃಶ್ಯಗಳು ಪ್ರೇಕ್ಷಕರಲ್ಲಿ ವಿರೋಧವನ್ನು ಹುಟ್ಟುಹಾಕಿವೆ. ಅನೇಕರು ಅವರ ವರ್ತನೆಯನ್ನು “ಚಮಚಾಗಿರಿ” ಎಂದು ಟೀಕಿಸಿದ್ದಾರೆ. ಇದೇ ವಿಚಾರವನ್ನು ಸುದೀಪ್ ಕೂಡ ವೀಕೆಂಡ್ ಎಪಿಸೋಡ್‌ನಲ್ಲಿ ಉಲ್ಲೇಖಿಸಿ, ಜಾನ್ವಿಗೆ ನೇರ ಎಚ್ಚರಿಕೆ ನೀಡಿದರು.
“ಜಾನ್ವಿ ಅವರೇ, ಅಶ್ವಿನಿ ಅವರನ್ನು ಚೆನ್ನಾಗಿ ಪುಷ್ ಮಾಡ್ತಾ ಇದೀರಾ. ಹೀಗೆ ಪುಷ್ ಮಾಡ್ತಾ ಇರಿ, ಒಂದು ದಿನ ನೀವೇ ಪುಷ್ ಆಗಿ ಹೊರಗೆ ಬರ್ತೀರಾ,” ಎಂದು ಸುದೀಪ್ ಚುಟುಕಾಗಿ ಹೇಳಿದರು. ಆದರೆ ಜಾನ್ವಿ ನಗುತ್ತಲೇ ಇದ್ದರು. ಅವರಿಗೆ ಸುದೀಪ್ ಮಾತಿನ ತೀವ್ರತೆ ಅಷ್ಟು ಅರ್ಥವಾಗದಂತೆಯೇ ಕಂಡಿತು.
ಮನೆಯಲ್ಲಿ ಇಬ್ಬರು ಒಂದೇ ಹಾಸಿಗೆಯ ಮೇಲೆ ಮಲಗುವುದು, ಎಲ್ಲೆಡೆ ಒಟ್ಟಿಗೇ ಕಾಣಿಸಿಕೊಳ್ಳುವುದು ಈಗ ಪ್ರೇಕ್ಷಕರ ಚರ್ಚೆಯ ವಿಷಯವಾಗಿದೆ. ಜಾನ್ವಿಯ ಅಹಂಕಾರ, ಅಶ್ವಿನಿಯ ಮೇಲೆ ಅತಿಯಾದ ಆಸಕ್ತಿ ಮತ್ತು ಆಟದಲ್ಲಿ ತಮಗೇ ನಷ್ಟವಾಗುವ ವರ್ತನೆ ಕುರಿತು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರುತ್ತಿದ್ದಾರೆ.
ಸುದೀಪ್ ಅವರ ಎಚ್ಚರಿಕೆಯ ನಂತರ ಜಾನ್ವಿ ತಮ್ಮ ಆಟದ ಶೈಲಿಯಲ್ಲಿ ಬದಲಾವಣೆ ತರ್ತಾರೆಯಾ ಅಥವಾ ಇದೇ ರೀತಿಯಲ್ಲಿ ಮುಂದುವರಿಯುತ್ತಾರೆಯಾ ಎಂಬ ಪ್ರಶ್ನೆ ಈಗ ‘ಬಿಗ್ ಬಾಸ್’ ಮನೆಯ ಹೊರಗಿನ ದೊಡ್ಡ ಕುತೂಹಲವಾಗಿದೆ.
