ಬೆಂಗಳೂರು: ನಟ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಗಳಿಕೆ ಮಾಡುತ್ತಿದ್ದು, ಇದೀಗ ಕಿಚ್ಚ ಸುದೀಪ್ ಸಿನಿಮಾ ವೀಕ್ಷಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಇತ್ತೀಚೆಗೆ ಕಾಟೇರ ಸಿನಿಮಾದ ವಿಶೇಷ ಪ್ರದರ್ಶನವನ್ನು ಸೆಲೆಬ್ರಿಟಿಗಳಿಗಾಗಿ ಆಯೋಜಿಸಲಾಗಿತ್ತು. ಆ ಶೋನಲ್ಲಿ ಭಾಗಿಯಾಗಲು ಕಿಚ್ಚ ಸುದೀಪ್ ಗೂ ಕರೆ ನೀಡಲಾಗಿತ್ತು. ಆದರೆ ಕಿಚ್ಚ ಆ ಸಂದರ್ಭದಲ್ಲಿ ಚೆನ್ನೈನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು. ಆದರೆ ಸದ್ಯದಲ್ಲೇ ಸಿನಿಮಾ ನೋಡ್ತೀನಿ ಎಂದು ಭರವಸೆ ಕೊಟ್ಟಿದ್ದರಂತೆ.
ಸುದೀಪ್ ಮತ್ತು ದರ್ಶನ್ ಒಂದು ಕಾಲದಲ್ಲಿ ಕುಚಿಕು ಗೆಳೆಯರು. ಆದರೆ ಇಬ್ಬರ ನಡುವೆ ವೈಮನಸ್ಯದಿಂದಾಗಿ ಒಬ್ಬರು ಇರುವ ಕಾರ್ಯಕ್ರಮಕ್ಕೆ ಮತ್ತೊಬ್ಬರು ಬರಲ್ಲ ಎನ್ನುವ ಪರಿಸ್ಥಿತಿಯಾಗಿದೆ. ಆದರೆ ಇತ್ತೀಚೆಗೆ ಸುಮಲತಾ ಅಂಬರೀಶ್ ಬರ್ತ್ ಡೇಯಲ್ಲಿ ಹಲವು ವರ್ಷದ ಬಳಿಕ ಇಬ್ಬರೂ ಭಾಗಿಯಾಗಿದ್ದರು. ಹಾಗಿದ್ದರೂ ಒಬ್ಬರ ಮುಖ ಮತ್ತೊಬ್ಬರು ನೋಡಿರಲಿಲ್ಲ.
ಕಾಟೇರ ಸಿನಿಮಾ ನಿರ್ದೇಶಿಸಿದ್ದ ತರುಣ್ ಸುಧೀರ್ ಗೆ ಕಿಚ್ಚ ಸುದೀಪ್ ಕೂಡಾ ಆಪ್ತರು. ಹೀಗಾಗಿ ತರುಣ್ ಮೇಲಿನ ಪ್ರೀತಿಯಿಂದ ಸುದೀಪ್ ಸಿನಿಮಾ ವೀಕ್ಷಿಸಬಹುದೇನೋ ಎಂಬ ಭರವಸೆ ಅಭಿಮಾನಿಗಳದ್ದು.